ಕನ್ನಡ ಭಾಷೆ ಪರೀಕ್ಷೆಗೆ 131 ವಿದ್ಯಾರ್ಥಿಗಳು ಗೈರು

| Published : Mar 26 2024, 01:04 AM IST

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸೋಮವಾರ ಆರಂಭವಾಗಿದ್ದು, ಜಿಲ್ಲೆಯ 45 ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು. ಮೊದಲ ದಿನ ನಡೆದ ಕನ್ನಡ ಭಾಷೆ ಪರೀಕ್ಷೆಗೆ 11,364 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಎಸ್‌ಎಸ್‌ಎಲ್‌ಸಿ ಪರೀಕ್ಷೆ ಸೋಮವಾರ ಆರಂಭವಾಗಿದ್ದು, ಜಿಲ್ಲೆಯ 45 ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು. ಮೊದಲ ದಿನ ನಡೆದ ಕನ್ನಡ ಭಾಷೆ ಪರೀಕ್ಷೆಗೆ 11,364 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು.

ಜಿಲ್ಲೆಯ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ತಾಲೂಕಿನಲ್ಲಿ ಒಟ್ಟು 45 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಕನ್ನಡ ಭಾಷಾ ವಿಷಯಕ್ಕೆ 11,495 ವಿದ್ಯಾರ್ಥಿಗಳ ಪೈಕಿ 11,364 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು. ಉಳಿದ 131ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷಾ ಅಕ್ರಮಗಳ ತಡೆಗಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷೆ ಹಿನ್ನೆಲೆಯಲ್ಲಿ ತಮ್ಮ ಪೋಷಕರೊಂದಿಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಿ ನೋಟಿಸ್ ಬೋರ್ಡ್‌ ನಲ್ಲಿ ಪರೀಕ್ಷಾ ನೋಂದಣಿ ಸಂಖ್ಯೆ ಹುಡುಕಿ ಬಳಿಕ ಕೊಠಡಿಗಳಿಗೆ ತೆರಳಿ ಪರೀಕ್ಷೆ ಬರೆದರು.

ಕೆಲ ವಿದ್ಯಾರ್ಥಿಗಳು ಪರೀಕ್ಷಾ ಆರಂಭಕ್ಕೂ ಒಂದು ಗಂಟೆಗೂ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಕೊನೆಯ ಹಂತದಪರೀಕ್ಷೆ ಸಿದ್ಧತೆಯಲ್ಲಿ ತೊಡಗಿದ್ದು ಕಂಡುಬಂದಿತು. ಪರೀಕ್ಷಾ ಹಿನ್ನೆಲೆಯಲ್ಲಿ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಅಲ್ಲದೆ ಸಿಸಿ ಕ್ಯಾಮರಾ ಅಳವಡಿಕೆಗೆ ಕ್ರಮವಹಿಸಲಾಗಿತ್ತು.ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ತೆರಳಿ ಪರಿಶೀಲಿಸಿದರು, ಚಾಮರಾಜನಗರದ ಸತ್ತಿ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ತೆರಳಿದ ಅವರು ಕೊಠಡಿಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಇರುವ ಕುರಿತು ಮಾಹಿತಿ ಪಡೆದರು. ಯಾವುದೇ ತೊಂದರೆಯಾಗದಂತೆ ಪರೀಕ್ಷಾ ನಡೆಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಬಳಿಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಜಿಲ್ಲೆಯ 45 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ. ತಾಲೂಕುಗಳಲ್ಲಿ ಬಿಇಒ ನೇತೃತ್ವದಲ್ಲಿ 5 ತಂಡಗಳ ಸ್ಕ್ವಾಡ್‌, ಜಿಲ್ಲಾ ಮಟ್ಟದಲ್ಲಿ 3 ತಂಡಗಳ ಸ್ಕ್ವಾಡ್‌ ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕಿಗೊಂದು ಮೊಬೈಲ್ ಸ್ಕ್ವಾಡ್‌ ಇರಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸುಲಲಿತವಾಗಿ ಪರೀಕ್ಷೆ ನಡೆದಿದೆ ಎಂದು ತಿಳಿಸಿದರು.