ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ರಾಜ್ಯಪಾಲರ ಕಚೇರಿಯನ್ನು ಬಿಜೆಪಿಯ ರಾಷ್ಟ್ರೀಯ ಕೇಂದ್ರ ಕಚೇರಿಯನ್ನಾಗಿ ಮಾಡಿಕೊಂಡು ಘನವೆತ್ತ ರಾಜ್ಯಪಾಲರ ಸಂವಿಧಾನ ಬದ್ಧ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಯ ನಡೆ ಖಂಡಿಸುತ್ತೇನೆ. ಬಿಜೆಪಿಯವರ ಕುತಂತ್ರಕ್ಕೆ ಎದೆ ಸೆಟೆದು ನಿಂತು ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದ 136 ಶಾಸಕರು ಬಂಡೆಗಲ್ಲಾಗಿ ಅವರ ಹಿಂದೆ ನಿಲ್ಲುತ್ತೇವೆ ಎಂದು ರಾಜ್ಯ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ ವಿರೋಧ ಪಕ್ಷದವರ ವಿರುದ್ಧ ಗುಡುಗಿದರು.
ಕನ್ನಡಪ್ರಭ ವಾರ್ತೆ ಇಂಡಿ
ರಾಜ್ಯಪಾಲರ ಕಚೇರಿಯನ್ನು ಬಿಜೆಪಿಯ ರಾಷ್ಟ್ರೀಯ ಕೇಂದ್ರ ಕಚೇರಿಯನ್ನಾಗಿ ಮಾಡಿಕೊಂಡು ಘನವೆತ್ತ ರಾಜ್ಯಪಾಲರ ಸಂವಿಧಾನ ಬದ್ಧ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಯ ನಡೆ ಖಂಡಿಸುತ್ತೇನೆ. ಬಿಜೆಪಿಯವರ ಕುತಂತ್ರಕ್ಕೆ ಎದೆ ಸೆಟೆದು ನಿಂತು ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷದ 136 ಶಾಸಕರು ಬಂಡೆಗಲ್ಲಾಗಿ ಅವರ ಹಿಂದೆ ನಿಲ್ಲುತ್ತೇವೆ ಎಂದು ರಾಜ್ಯ ಸರ್ಕಾರದ ಅಂದಾಜು ಸಮಿತಿ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ ವಿರೋಧ ಪಕ್ಷದವರ ವಿರುದ್ಧ ಗುಡುಗಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚ್ಯಾರಿತ್ರೆ, ಬದ್ಧತೆ, ಪ್ರಾಮಾಣಿಕತೆ, ಬಡವರ ಪರವಾಗಿ ಹಾಗೂ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡಿ ಅವರ ತೆಜೋವಧೆ ಮಾಡುತ್ತಿರುವ ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ನವರ ನಡೆ ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ವಿರೋಧ ಪಕ್ಷದವರು ಮಾಡುವ ಷಡ್ಯಂತ್ರ ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದಲ್ಲ ಎಂದು ಕಿಡಿಕಾರಿದರು.ಹೈಕೊರ್ಟ್ ನೀಡಿರುವ ಪ್ರಾಥಮಿಕ ತನಿಖೆಯನ್ನು ನ್ಯಾಯಾಂಗ ಹಾಗೂ ಸಂವಿಧಾನದ ಮೇಲೆ ವಿಶ್ವಾಸವಿಟ್ಟಿರುವ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಗೌರವಿಸುತ್ತದೆ. ಬಿಜೆಪಿಯವರು ದೇಶದಲ್ಲಿ ವಿರೋಧ ಪಕ್ಷವಿರುವ ಸರ್ಕಾರಗಳನ್ನು ಕುತಂತ್ರದಿಂದ ದೆಹಲಿ, ಜಾರ್ಖಂಡ್, ಪಶ್ಚಿಮ ಬಂಗಾಲ ಮುಖ್ಯಮಂತ್ರಿಗಳ ಮೇಲೆ ಷಡ್ಯಂತ್ರ ರೂಪಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ರಾಜ್ಯದ ಜನತೆ ಬಿಜೆಪಿ 2008, 2019 ರಲ್ಲಿ ಬಹುಮತ ನೀಡದೇ ತಿರಸ್ಕರಿಸಿದ್ದಾರೆ. ಸರ್ಕಾರ ರಚನೆ ಮಾಡಲು ಸಾಧ್ಯವಾಗದಿದ್ದಾಗ ಹಿಂದಿನ ಬಾಗಿಲಿನಿಂದ ಅಧಿಕಾರ ಹಿಡಿಯಲು ಅಫರೇಷನ್ ಕಮಲ ಮಾಡುವ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಬಹುಮತ ನೀಡಿದ್ದಾರೆ. ಈ ಬಾರಿಯೂ ಕುತಂತ್ರ ಮಾಡಿದಾಗ ಕಾಂಗ್ರೆಸ್ ಪಕ್ಷದ ಶಾಸಕರು ಅವರ ಷಡ್ಯಂತ್ರ, ಆಮಿಷಕ್ಕೆ ಒಳಗಾಗದಿದ್ದಾಗ ವಾಮಮಾರ್ಗ ಬಳಸಿ ಕೊನೆಯ ಪಕ್ಷ ಮುಡಾ ಹಗರಣ ಬಳಕೆ ಮಾಡಿಕೊಂಡು ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡಲು ಆರಂಭಿಸಿದ್ದು ಖಂಡಿಸುತ್ತೇನೆ ಎಂದರು.ಈ ದೇಶದ ಕಾನೂನು, ಸಂವಿಧಾನವನ್ನು ಗೌರವಿಸಿ, ನ್ಯಾಯಾಂಗ ಹೋರಾಟಕ್ಕೆ ಇಳಿಯುತ್ತೇವೆ. ಸತ್ಯ, ನ್ಯಾಯದ ಪರವಾಗಿ ನ್ಯಾಯಾಂಗ ಇರುತ್ತದೆ ಎಂಬ ಭರವಸೆ ಇದೆ. 14 ಬಜೆಟ್ ಮಂಡಿಸಿದ ಅನುಭವಿ ಚತುರ ನಾಯಕ ಸಿಎಂ ಸಿದ್ದರಾಮಯ್ಯನವರು ರಾಜಕೀಯ ಜೀವನದಲ್ಲಿ ಅಪರಂಜಿಯಂತಿದ್ದು, ಒಂದೂ ಕಪ್ಪು ಚುಕ್ಕೆ ಅಂಟಿಸಿಕೊಂಡವರಲ್ಲ. ವಿರೋಧ ಪಕ್ಷದವರ ಷಡ್ಯಂತ್ರದಿಂದ ಅವರ ಅವರ ರಾಜಕೀಯ ಬದುಕಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಲಿಂಬಾಜಿ ರಾಠೋಡ, ಜಾವೀದ್ ಮೋಮಿನ, ಇಲಿಯಾಸ್ ಬೊರಾಮಣಿ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಭೀಮಣ್ಣ ಕವಲಗಿ, ಶಿವಯೋಗೆಪ್ಪ ಚನಗೊಂಡ, ಸದಾಶಿವ ಪ್ಯಾಟಿ, ಮಹಿಬೂಬ್ ಅರಬ, ಹುಚ್ಚಪ್ಪ ತಳವಾರ, ಶ್ರೀಕಾಂತ ಕುಡಿಗನೂರ, ಸುಭಾಷ ಬಾಬರ, ಸುಧೀರ ಕರಕಟ್ಟಿ ಮೊದಲಾದವರು ಇದ್ದರು.
ಕೋಟ್...ಎಲ್ಲ ಶಾಸಕರು, ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಇದ್ದಾರೆ. ಪೂರ್ಣಾವಧಿ ಸರ್ಕಾರ ಮಾಡಲಾಗುತ್ತದೆ. ರಾಜ್ಯದ ಜನರಿಗೆ ನೀಡಿದ ಭರವಸೆ ಈಡೇರಿಸಲಾಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್‌ನ ಕುಮಾರಸ್ವಾಮಿ ಅವರ ಷಡ್ಯಂತ್ರದಿಂದ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡುವುದು ಮುಂದಿನ ದಿನದಲ್ಲಿ ರಾಜ್ಯದ ಜನತೆ ವಿರೋಧ ಪಕ್ಷದವರಿಗೆ ತಕ್ಕ ಪಾಠ ಕಲಿಸುತ್ತಾರೆ.-ಯಶವಂತರಾಯಗೌಡ ಪಾಟೀಲ, ಶಾಸಕರು.