ರಾಮನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಬೃಹತ್‌ ಉದ್ಯೋಗ ಮೇಳದಲ್ಲಿ 1392 ಯುವಜನರು ಉದ್ಯೋಗ ಪಡೆದರು. 1136 ಅಭ್ಯರ್ಥಿಗಳು 2ನೇ ಹಂತದ ಸಂದರ್ಶನಕ್ಕೆ ಅರ್ಹತೆ ಗಿಟ್ಟಿಸಿಕೊಂಡರು

ರಾಮನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಬೃಹತ್‌ ಉದ್ಯೋಗ ಮೇಳದಲ್ಲಿ 1392 ಯುವಜನರು ಉದ್ಯೋಗ ಪಡೆದರು. 1136 ಅಭ್ಯರ್ಥಿಗಳು 2ನೇ ಹಂತದ ಸಂದರ್ಶನಕ್ಕೆ ಅರ್ಹತೆ ಗಿಟ್ಟಿಸಿಕೊಂಡರು.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ - ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಯುವಕರು - 1951, ಯುವತಿಯರು - 1810 ಸೇರಿ 3761 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು.

ಪದವಿ, ಎಂಜಿನಿಯರಿಂಗ್‌, ಡಿಪ್ಲೊಮಾ, ಐಟಿಐ, ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ವಿವಿಧ ಕೋರ್ಸ್‌ ಪೂರ್ಣಗೊಳಿಸಿದವರು ಉದ್ಯೋಗ ಮೇಳಕ್ಕೆ ಆಗಮಿಸಿದ್ದರು. ರಾಜ್ಯದ ವಿವಿಧೆಡೆಯ 149ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದವು. 717 - ಯುವಕರು, 694 ಯುವತಿಯರು ಸೇರಿ 1392 ಮಂದಿ ಉದ್ಯೋಗಾವಕಾಶ ಗಿಟ್ಟಿಸಿಕೊಂಡರೆ, 646 ಯುವಕರು- 490 ಯುವತಿರು ಸೇರಿ 1136 ಮಂದಿ 2ನೇ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.

ಹೆಸರು ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಉದ್ಯೋಗದಾತರ ಬಳಿಗೆ ಹಾಜರಾದರು. ಸ್ವವಿವರಗಳನ್ನು ಒದಗಿಸಿ ಆಸೀನರಾದರು. ಇದನ್ನು ಪರಿಶೀಲಿಸಿದ ಕಂಪನಿಗಳ ಸಿಬ್ಬಂದಿ ಸಂದರ್ಶನಕ್ಕೆ ಆಹ್ವಾನ ನೀಡಿದರು. ಕೌಶಲ ಹೊಂದಿದ ಹಾಗೂ ಅರ್ಹರನ್ನು ಆಯ್ಕೆ ಮಾಡಿಕೊಂಡರು. ಮೊದಲ ಹಂತದಲ್ಲಿ ಸ್ಥಳದಲ್ಲೇ ಅನೇಕರಿಗೆ ನೇಮಕಾತಿ ಪ್ರಮಾಣ ಪತ್ರ ವಿತರಿಸಲಾಯಿತು.

ಶಿಕ್ಷಣದ ಜೊತೆಗೆ ಕೌಶಲ ಕಲಿಯಿರಿ :

ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಪದವಿ ಪೂರ್ಣಗೊಳಿಸಿದ ಮಾತ್ರಕ್ಕೆ ಉದ್ಯೋಗ ಸಿಗದು. ಶಿಕ್ಷಣದ ಜೊತೆಗೆ ಕೌಶಲಗಳನ್ನು ಕಲಿಯಬೇಕು. ಇದು ಈ ಹೊತ್ತಿನ ತುರ್ತು ಅಗತ್ಯ ಎಂದು ಕಿವಿಮಾತು ಹೇಳಿದರು.

ವಿರ್ದ್ಯಾಹತೆಗೆ ತಕ್ಕಂತೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಿಕೊಡುವ ಈ ಉದ್ಯೋಗ ಮೇಳ ಮಹತ್ತರವಾದ ಕಾರ್ಯಕ್ರಮವಾಗಿದೆ, ನಿರುದ್ಯೋಗಿಗಳು ಉದ್ಯೋಗ ಪಡೆಯುವ ಮೂಲಕ ತಮ್ಮ ಜೀವನದಲ್ಲಿ ಏಳಿಗೆ ಕಂಡುಕೊಳ್ಳಬೇಕು. ಈ ಮೇಳದಲ್ಲಿ ಉದ್ಯೋಗ ದೊರೆಯದವರು ನಿರಾಶರಾಗಬೇಕಿಲ್ಲ, ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅತ್ಯಂತ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಉದ್ಯೋಗ ಪಡೆಯಬಹುದು, ಮತ್ತೊಮ್ಮೆ ಯತ್ನಿಸುವಂತೆತಿಳಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಪ್ರತಿ ತಂದೆ ತಾಯಂದಿರು, ಮಕ್ಕಳು ವಿದ್ಯಾವಂತರಾಗಿ ಉತ್ತಮ ಉದ್ಯೋಗ ಪಡೆಯಬೇಕೆಂಬ ಆಸೆ ಹೊಂದಿರುತ್ತಾರೆ. ನಿರುದ್ಯೋಗ ನೀಗಿಸುವುದು ಈ ಉದ್ಯೋಗ ಮೇಳದ ಮುಖ್ಯ ಉದ್ದೇಶವಾಗಿದೆ. ಉದ್ಯೋಗಾಂಕ್ಷಿಗಳು ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿ ಮೌಖಿಕ ಸಂದರ್ಶನ ಎದುರಿಸುವ ಮೂಲಕ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಗಳಿಸಿಕೊಳ್ಳುವಂತೆ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಮಾತನಾಡಿ, ಬೆಂಗಳೂರಿನ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿವೆ. ಒಬ್ಬರಿಗೆ ಉದ್ಯೋಗ ನೀಡಿದರೆ ಇಡೀ ಕುಟುಂಬವೇ ಆರ್ಥಿಕ ಸಂಕಷ್ಟದಿಂದ ಪಾರಾದಂತೆ. ಉದ್ಯೋಗದಾತರು ಆಫರ್ ಲೆಟರ್ ನೀಡದೇ ನೇಮಕಾತಿ ಪತ್ರವನ್ನು ನೀಡಬೇಕು. ಈ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರೆಯದವರು ಜುಲೈನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಪ್ರಯತ್ನಿಸುವಂತೆ ಕರೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಟರಾಜು ಗಾಣಕಲ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್ , ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಯೋಜನಾ ನಿರ್ದೇಶಕ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

5ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಇತರರು ಪಾಲ್ಗೊಂಡಿದ್ದರು.