ಚಿಕ್ಕಮಗಳೂರು ಚದುರಿಹೋದ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ್‌ ತಿಲಕ್‌ ಸಾಮೂಹಿಕ ಗಣೇಶ ಪ್ರತಿಸ್ಥಾಪನೆ ಆರಂಭಿಸಿದರು ಎಂದು ಹುಲಿಕೆರೆ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚದುರಿಹೋದ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ್‌ ತಿಲಕ್‌ ಸಾಮೂಹಿಕ ಗಣೇಶ ಪ್ರತಿಸ್ಥಾಪನೆ ಆರಂಭಿಸಿದರು ಎಂದು ಹುಲಿಕೆರೆ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಹೇಳಿದರು.

ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯರಸ್ತೆ ಓಂಕಾರೇಶ್ವರ ಗಣಪತಿ ದೇವಸ್ಥಾನದ ಆವರಣದಲ್ಲಿ ನಗರದ ಹಿಂದೂ ಮಹಾ ಗಣಪತಿ ಸೇವಾ ಸಂಘದ 13 ನೇ ವರ್ಷದ ಗಣೇಶೋತ್ಸವ ಕ್ಕೆ ಬುಧವಾರ ಗೋಪೂಜೆ ಸಲ್ಲಿಸಿ, ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.

ಒಳ ಜಗಳ, ಭಿನ್ನಾಭಿಪ್ರಾಯಗಳಿಂದ ಬೇರೆ ಬೇರೆ ದೇಶಗಳು ಧರ್ಮಗಳ ಆಳ್ವಿಕೆಯಿಂದ ಧರ್ಮ ಅವನತಿಯತ್ತ ಸಾಗಿತ್ತು. ಅಂತಹ ಸಂದರ್ಭದಲ್ಲಿ ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಿ ಸಮಾಜವನ್ನು ಒಟ್ಟಾಗಿ ಕೊಂಡೊಯ್ದು, ಏಕತೆ ಸ್ಥಾಪನೆಗೆ ಸಂಕಲ್ಪ ಮಾಡಿ ಬಾಲಗಂಗಾಧರ ತಿಲಕರು, ಸಾರ್ವಜನಿಕವಾಗಿ ಗಣಪತಿ ಹಬ್ಬ ಆರಂಭಿಸಿದರು ಎಂದರು.

ಧರ್ಮ ಮತ್ತು ಸಂಪ್ರದಾಯ, ಶಾಸ್ತ್ರವನ್ನ ಯಥಾವತ್ ಕಾಪಾಡಿಕೊಳ್ಳಬೇಕೆಂದರೆ ಹಬ್ಬ, ಹರಿದಿನಗಳೇ ಕಾರಣ. ಮನೆಗಳಿಗೆ ಸೀಮಿತವಾಗಿ ಹಬ್ಬಗಳ ಸಂಭ್ರಮ ಸರ್ವತ್ರೀಕರಣಗೊಳಿಸಿದ ವ್ಯಕ್ತಿತ್ವ ಯಾರಾದರೂ ಇದ್ದರೆ ಅದು ಲೋಕಮಾನ್ಯ ಬಾಲ ಗಂಗಾಧರ ತಿಲಕರು ಎಂದು ಹೇಳಿದರು.ಗಣೇಶೋತ್ಸವ, ಇನ್ನಿತರೆ ಹಬ್ಬಗಳ ಮೂಲಕ ನಮ್ಮ ಹಿರಿಯರು ಸ್ವಾತಂತ್ರ್ಯಪೂರ್ವದಲ್ಲಿ ಸಮಾಜವನ್ನು ಒಗ್ಗಟ್ಟಾಗಿ ಕೊಂಡೊ ಯ್ಯದೇ ಇದ್ದಿದ್ದರೆ ಇಂದಿಗೂ ನಾವು ನೀವೆಲ್ಲರೂ ಅದೇ ರೀತಿ ಗುಲಾಮರಾಗಿ ಹಿಂದುಳಿದವರಾಗಿ ಇರಬೇಕಾಗಿತ್ತು ಎಂದು ತಿಳಿಸಿದರು.ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜ ಮತ್ತು ದೇಶದ ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಆರ್‌ಎಸ್‌ಎಸ್ ಮತ್ತು ಅದರ ಉಪ ಶಾಖೆಗಳಾದ ಬಜರಂಗದಳ, ಹಿಂದೂಮಹಾಸಭಾ ಸೇರಿ ಎಲ್ಲಾ ಸಂಘ ಸಂಸ್ಥೆಗಳು ಕಾಪಾಡಿಕೊಂಡಿವೆ ಎಂದು ಹೇಳಿದರು.ಹಿಂದೂ ಮಹಾ ಗಣಪತಿ ಸಂಘದ ಪ್ರದೀಪ್ ಮಾತನಾಡಿ, 13 ವರ್ಷಗಳ ಹಿಂದೆ ಸಣ್ಣದಾಗಿ ಆರಂಭಿಸಿದ ಗಣೇಶೋತ್ಸವ ಕ್ರಮೇಣ ಬೃಹತ್ ಆಗಿ ಪರಿವರ್ತನೆ ಆಗಿದೆ. ಇದಕ್ಕೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಕೈ ಜೋಡಿಸಿದ್ದಾರೆ. ಶಿವರಾತ್ರಿ ಹಬ್ಬ ಸೇರಿದಂತೆ ಕೋವಿಡ್, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಸೇವಾಕಾರ್ಯ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ವಿಭಾಗ ಸಂಘ ಸಂಚಾಲಕ ಮಲ್ಲಿಕಾರ್ಜುನ ರಾವ್, ಹಿಂದೂ ಮಹಾ ಗಣಪತಿ ಸೇವಾ ಸಂಘದ ಅಧ್ಯಕ್ಷ ಸದಾಶಿವಪ್ಪ ಇದ್ದರು.