ಭಾರತೀಯ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ ಚಿಕಿತ್ಸಾ ಪದ್ಧತಿಗಳಿಗೆ ಶತಮಾನಗಳಿಂದ ಜಾಗತಿಕ ಮನ್ನಣೆ ಇರೋದು ತಿಳಿದಿರೋ ವಿಚಾರ.
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಭಾರತೀಯ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ ಚಿಕಿತ್ಸಾ ಪದ್ಧತಿಗಳಿಗೆ ಶತಮಾನಗಳಿಂದ ಜಾಗತಿಕ ಮನ್ನಣೆ ಇರೋದು ತಿಳಿದಿರೋ ವಿಚಾರ.
ಆದರೆ ಮೇಲಿನ ಮೂರೂ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಅರುಜೀವ ಆಯುರ್ವೇದ ಆಸ್ಪತ್ರೆ ತೊಗರಿ ಕಣಜ ಕಲಬುರಗಿಯಲ್ಲಿದ್ದು ಅಲ್ಪಾವಧಿಯಲ್ಲೇ ದೇಶ, ವಿದೇಶದವರನ್ನೆಲ್ಲ ತನ್ನತ್ತ ಸೆಳೆಯುತ್ತಿದೆ.ಮಾನವ ಕಲ್ಯಾಣ ಟ್ರಸ್ಟ್‌ನ ಕಲಬುರಗಿ- ಸೇಡಂ ರಸ್ತೆ ಏರ್ಪೋರ್ಟ್ ಹತ್ತಿರದ ಅರುಜೀವ ಆಯುರ್ವೇದ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಿಂದ ಪ. ಆಫ್ರಿಕಾದ ಘಾನಾ ದೇಶದ 17 ಮಂದಿ ವೈದ್ಯರು ಹೆಚ್ಚಿನ ತರಬೇತಿಗಾಗಿ ಬಂದು ವಾಸ್ತವ್ಯ ಮಾಡಿ ಯೋಗ, ಆಯುರ್ವೇದ, ನ್ಯಾಚುರೋಪತಿಯಲ್ಲಿ ಹೆಚ್ಚಿನ ತರಬೇತಿ, ಜ್ಞಾನ ಹೊಂದಿ ತಮ್ಮ ದೇಶಕ್ಕೆ ಮರಳಿದ್ದಾರೆ. ಸದ್ದಿಲ್ಲದೆ ನಡೆದಿರುವ ಈ ಬೆಳವಣಿಗೆ ಮತ್ತೊಮ್ಮೆ ಅರುಜೀವ ಆಸ್ಪತ್ರೆಯನ್ನ ಸುದ್ದಿಗೆ ಗ್ರಾಸವಾಗಿಸಿದೆ.
ಆಯುರ್ವೇದದಲ್ಲೇ ಉತ್ಕೃಷ್ಟ ಚಿಕಿತ್ಸಾ ಮಾನದಂಡಗಳಿಗಾಗಿ ನೀಡಲಾಗುವ ಕ್ಯೂಎಪಿ 7107 ಮಾನ್ಯತೆ ಪಡೆದ ಅರುಜೀವ ಆಸ್ಪತ್ರೆ ಭಾರತದ ಆಯುಷ್ ಇಲಾಖೆಯ ಸಮನ್ವಯ ಯೋಜನೆಯಡಿಯಲ್ಲಿರುವ ಆಸ್ಪತ್ರೆಯಾಗಿ ಗಮನ ಸೆಳೆಯುತ್ತಿದೆ.ಪಶ್ಚಿಮ ಆಫ್ರಿಕಾದ ಘಾನಾ ದೇಶದ ನ್ಯಾರಕೋಟೆ ಕಾಲೇಜ್ ಆಫ್ ಹೋಲಿಸ್ಟಿಕ್ ಮೆಡಿಸಿನ್‌ನಿಂದ 17 ಜನ ಕಲಬುರಗಿಯಲ್ಲಿರೋ ಅರುಜೀವ ಆಸ್ಪತ್ರೆಯಲ್ಲಿನ ತಾವು ಕಳೆದ ಅವಧಿಯನ್ನು ಮುಕ್ತವಾಗಿ ಕೊಂಡಾಡಿದ್ದು, ಕಲಬುರಗಿಯ ಊಟೋಪಚಾರ, ಜನರ ವ್ಯವಹಾರ ಮೆಚ್ಚಿಕೊಂಡಿದ್ದಾರೆ.
ಜಾಜಿ ಅಂಗಡಿಯಲ್ಲಿ ಗಿಡ ಮೂಲಿಕೆ ಖರೀದಿಸಿದ್ರು: ಅರುಜೀವ ಆಸ್ಪತ್ರೆಗೆ ಭೇಟಿ ನೀಡಿದ್ದ ಕನ್ನಡಪ್ರಭ ಜೊತೆ ಮಾತನಾಡಿದ ಘಾನಾ ಪ್ರಜೆಗಳು ಕಲಬುರಗಿಯ ಆಹಾರ, ಸಂಪ್ರದಾಯಗಳು, ಕುಂಕುಮ ಧಾರಣೆ, ವಿಭೂತಿ ಮಹತ್ವ, ಬಸವಣ್ಣನವರ ವಿಚಾರಧಾರೆ ಹಾಗೂ ವಚನಗಳ ಸಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಕಲಬುರಗಿ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಉಡುಪುಗಳು, ಪೂಜಾ ಸಾಮಗ್ರಿಗಳು ಹಾಗೂ ಸೂಪರ್ ಮಾರ್ಕೆಟ್‌ನಲ್ಲಿರೋ ಜಾಜಿ ಅಂಗಡಿಯಲ್ಲಿ ಗಿಡಮೂಲಿಕೆಗಳನ್ನು ಖರೀದಿಸಿರುವ ಅನುಭವವನ್ನು ಡಾ. ಎಮಿನಲ್ ಡಾರ್ಕೊ, ಹಂಚಿಕೊಂಡು ಸಂತೋಷಪಟ್ಟರು.
ಘಾನಾ ದೇಶದವರಾದ ನಮಗೆ ಕಲಬುರಗಿ ನಗರ, ಇಲ್ಲಿನ ಅರುಜೀವ ಆಸ್ಪತ್ರೆಯ 30 ದಿನಗಳ ವಸತಿ, ತರಬೇತಿ, ಜಾಜಿ ಆಯುರ್ವೇದ ಅಂಗಡಿ ಭೇಟಿ ಇವೆಲ್ಲವೂ ಮರೆಯದ ನೆನಪಾಗಿ ದಾಖಲಾಗಿವೆ ಎಂದು ಡಾ. ಎಮಿನಲ್ ಕನ್ನಡಪ್ರಭ ಜೊತೆ ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ಘಾನಾ ದೇಶದ 17 ವೈದ್ಯರಿಗೆ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.ಡಾ. ಶಲಿನ್ ಭಾರತಿ ನೇತೃತ್ವದಲ್ಲಿ ಅರುಜೀವದಲ್ಲಿ 5 ಪರಿಣಿತ ವೈದ್ಯರು, ಸಹ ಸಿಬ್ಬಂದಿಗಳಿದ್ದು, ಸಿಇಓ ಡಾ. ಕೌಸ್ತುಬ್ ದುಮಲ್ ಉಸ್ತುವಾರಿಯಲ್ಲಿ ಅರುಜೀವ ಆಸ್ಪತ್ರೆ ಉತ್ತಮ ಹೆಸರು ಗಳಿಸುತ್ತಿದೆ.
---ಭಾರತೀಯ ಆಯುಷ್ ಇಲಾಖೆಯಿಂದ ವಿದೇಶಗಳಲ್ಲಿ ಆಯುರ್ವೇದ, ಯೋಗ ಪ್ರಚಾರ ಮಾಡುವ ರಾಯಭಾರಿಯಗಿ ಅರುಜೀವ ಆಯ್ಕೆಯಾಗಿದೆ. ಸಮನ್ವಯ ಯೋಜನೆಯಡಿ ನಾವು ವಿದೇಶಗಳ ತಜ್ಞರು, ಕಾಲೇಜುಗಳೊಂದಿಗೆ ವಿನಿಮಯ ಕಾರ್ಯಕ್ರಮ ನಡೆಸುತ್ತಿದ್ದು ಅದರ ಬಾಗವಾಗಿಯೇ ಘಾನಾ ದೇಶದವರು 30 ದಿನ ಬಂದು ತರಬೇತಿ ಪಡೆದಿದ್ದಾರೆ.
ಡಾ. ಶಲೀನ್ ಬಾರತಿ, ಮುಖ್ಯ ವೈದ್ಯರು---
ಆಫ್ರಿಕಾದ ಹೋಲಿಸ್ಟಿಕ್ ಮೆಡಿಸಿನ್, ಬಾರತೀಯ ಆಯುರ್ವೇದ ಹೆಚ್ಚುಕಮ್ಮಿ ಒಂದೇ ರೀತಿಯಲ್ಲಿವೆ. ಆದಾಗ್ಯೂ ನಮಗೆ ಭಾರತೀಯ ಆಯುರ್ವೇದ ಅದರ ಪುರಾತನತೆ, ಸಂಶೋಧನೆಗಳಿಂದಾಗಿ ಶ್ರೇಷ್ಟವಾಗಿ ಕಾಣುತ್ತದೆ. ನಾವು ತರಬೇತಿ ವಿನಿಮಯ ಕಾರ್ಯಕ್ರಮ ಆಯೋಜಿಸಿ ಇಲ್ಲಿ ಬಂದು ಹೆಚ್ಚಿನ ಜ್ಞಾನ ಪಡೆಯುತ್ತೇವೆ. ನಮ್ಮ ಕಾಲೇಜಿನ ಇನ್ನೂ 2 ತಂಡಗಳನ್ನು ಬರುವ ದಿನಗಳಲ್ಲಿ ಅರುಜೀವಕ್ಕೆ ಕಳುಹಿಸುತ್ತಿರುವೆ.ಪ್ರೊ. ರ್‍ಯಾಫಲ್, ನ್ಯಾರಕೋಟೆ ಯೂನಿವರ್ಸಿಟಿ, ಘಾನಾ