೬ರ ಭಾನುವಾರ ನಗರದ ನಾಡೋಜ ಬರಗೂರು ರಾಮಚಂದ್ರಪ್ಪ ರಂಗಮಂದಿರದ ಆವರಣದಲ್ಲಿ ಆಹಾರ ತಜ್ಞ ಡಾ. ಖಾದರ್ ಅವರಿಂದ ನೈಸರ್ಗಿಕ ಆಹಾರ ಪದ್ಧತಿಯ ಬಗ್ಗೆ ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ ಶಿರಾ

ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಘ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಚೇಳೂರಿನ ಸಹಜ, ನೈಸರ್ಗಿಕ ಬೇಸಾಯ ತರಬೇತಿ ಕೇಂದ್ರ ಇವರ ಸಹಯೋಗದೊಂದಿಗೆ ೬ರ ಭಾನುವಾರ ನಗರದ ನಾಡೋಜ ಬರಗೂರು ರಾಮಚಂದ್ರಪ್ಪ ರಂಗಮಂದಿರದ ಆವರಣದಲ್ಲಿ ಆಹಾರ ತಜ್ಞ ಡಾ. ಖಾದರ್ ಅವರಿಂದ ನೈಸರ್ಗಿಕ ಆಹಾರ ಪದ್ಧತಿಯ ಬಗ್ಗೆ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋದನಾ ಸಂಘದ ರಾಜ್ಯಾಧ್ಯಕ್ಷ ರಘುರಾವ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಆಹಾರ ತಜ್ಞರಾಗಿ ವಿದೇಶದಲ್ಲಿ ಹತ್ತಾರು ಲಕ್ಷ ರುಗಳ ವೇತನ ಪಡೆಯುತ್ತಿದ್ದ ಡಾ. ಖಾದರ್ ಅವರು ನಿಸರ್ಗದ ಮೇಲಾಗುತ್ತಿರುವ ಪ್ಲಾಸ್ಟಿಕ್ ಹಾವಳಿ ಮತ್ತು ವಿಷಮುಕ್ತ ಆಹಾರದ ಬದಲಿಗೆ ವಿಷಮುಕ್ತ ಆಹಾರವನ್ನು ಜನರಿಗೆ ನೀಡುವ ಮಹತ್ವದ ಉದ್ದೇಶದೊಂದಿಗೆ ಆಹಾರ ಪದಾರ್ಥಗಳಾದ ಸಿರಿಧಾನ್ಯದ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡು ಜನರನ್ನು ಕಾಡುತ್ತಿರುವ ಬಿಪಿ, ಶುಗರ್, ಕ್ಯಾನ್ಸರ್ ಸೇರಿದಂತೆ ಮಾರಕ ಕಾಯಿಲೆಗಳಿಗೆ ಸಿರಿಧಾನ್ಯ ಸೇವನೆಯ ಮೂಲಕ ಹೇಗೆ ರೋಗಮುಕ್ತ ಜೀವನ ನಡೆಸಬಹುದು ಎಂಬುದನ್ನು ಸ್ವತಃ ಕಂಡುಕೊಂಡು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ , ಶರೀಫ ಅಹಮದ್, ರಘು, ನಾಗರಾಜು, ವೆಂಕಟೇಶ್ ಪ್ರಸಾದ್, ಹನುಮಂತರಾಯ, ರಂಗನಾಥಪ್ಪ ಸೇರಿದಂತೆ ಹಲವರು ಹಾಜರಿದ್ದರು.