ಸಾರಾಂಶ
ಶರಣು ಸೊಲಗಿ ಮುಂಡರಗಿ
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಉತ್ತರ ಭಾಗದಲ್ಲಿನ ತುಂಗಭದ್ರಾ ನದಿಯ ತೀರದ ನಂದಿ ಬೆಟ್ಟದ ಮೇಲೆ ಪ್ರಾಚೀನ ಕಾಲದಲ್ಲಿ ಸ್ಥಾಪಿತವಾಗಿರುವ ಮುಂಡರಗಿ ತಾಲೂಕಿನ ಸುಕ್ಷೇತ್ರ ಸಿಂಗಟಾಲೂರಿನ ಶ್ರೀವೀರಭದ್ರೇಶ್ವರ ದೇವರು ಉತ್ತರ ಕರ್ನಾಟಕದಲ್ಲಿ ಮಹತ್ತರ ಸ್ಥಾನ ಪಡೆದುಕೊಂಡಿದೆ. ಅಂತಹ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ ಏ.13 ರಂದು ಅದ್ಧೂರಿಯಾಗಿ ಜರುಗಲಿದೆ.ಈ ದೇವಸ್ಥಾನದ ಮುಂದೆ ಸದಾ ತುಂಗಭದ್ರೆ ಹರಿಯುತ್ತಿದ್ದರೆ, ಹಿಂದೆ ಹಸುರಿನಿಂದ ಕಂಗೊಳಿಸುವ ಕಪ್ಪತಗುಡ್ಡದ ಬೆಟ್ಟಗಳ ಸಾಲು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಉತ್ತರ ಕರ್ನಾಟಕದಲ್ಲಿಯೇ ಇದೊಂದು ಸುಂದರ ಪ್ರೇಕ್ಷಣೀಯ ಧಾರ್ಮಿಕ ಕ್ಷೇತ್ರವಾಗಿದ್ದು, ವರ್ಷದ 12 ತಿಂಗಳೂ ಸಹ ನಿರಂತರವಾಗಿ ಸಾವಿರಾರು ಭಕ್ತರು ಇಲ್ಲಿಗೆ ಬಂದು ಶ್ರೀವೀರಭದ್ರೇಶ್ವರ ದೇವರ ದರ್ಶನಾಶಿರ್ವಾದ ಪಡೆದು ಪುನೀತರಾಗಿ ಹೋಗುತ್ತಾರೆ.
ಶ್ರೀವೀರಭದ್ರೇಶ್ವರ ಶಿಲಾಮೂರ್ತಿಯನ್ನು ಸಿಂಗಟಾಲೂರು ಕ್ಷೇತ್ರದ ಹತ್ತಿರ ಗುಡ್ಡದಲ್ಲಿಯೇ ಪ್ರತಿಷ್ಠಾಪಿಸಲು ತನ್ನದೇ ಆದ ಇತಿಹಾಸವಿದೆ. ಈ ಜಾಗೆಗೆ ಪ್ರತಿದಿನ ಒಂದು ಆಕಳು ಬಂದು ಅಲ್ಲಿದ್ದ ಹುತ್ತದ ಮೇಲೆ ಹಾಲು ಕರೆಯುತ್ತಿತ್ತು. ಅದರ ಪಕ್ಕದ ಗವಿಯಲ್ಲಿ ತಪಸ್ಸು ಗೈಯುತ್ತಿದ್ದ ಸಂತರೊಬ್ಬರು ಈ ಸ್ಥಳದ ಮಹತ್ವವನ್ನರಿತು, ಇಲ್ಲಿಯೇ ವೀರಭದ್ರೇಶ್ವರ ಮೂರ್ತಿ ಸ್ಥಾಪಿಸಿದರೆಂದು ಇತಿಹಾಸದ ಮೂಲಕ ತಿಳಿದುಕೊಳ್ಳಲಾಗುತ್ತಿದೆ. ಎಡಭಾಗದಲ್ಲಿ ಭದ್ರಕಾಳಮ್ಮನ ದೇವಾಲಯ, ಮಧ್ಯದಲ್ಲಿರುವ ಗವಿಯಲ್ಲಿ ಈಶ್ವರ ಲಿಂಗಗಳಿವೆ.2018ರಲ್ಲಿ ದೇವಸ್ಥಾನದ ಭಕ್ತರ ಸಹಕಾರದಿಂದ ₹3 ಕೋಟಿಗಳಿಗೂ ಅಧಿಕ ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ವರ್ಷವಿಡಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನದ ಟ್ರಸ್ಟ್ ಕಮೀಟಿ ವತಿಯಿಂದ ನಿತ್ಯವೂ ಉಚಿತ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಮಕರ ಸಂಕ್ರಾಂತಿಯಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನ ಆಗಮಿಸಿ ಇಲ್ಲಿನ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಶ್ರೀವೀರಭದ್ರ ದೇವರ ದರ್ಶನ ಪಡೆದು ಹೋಗುತ್ತಾರೆ. 2020ರಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ಭದ್ರಕಾಳಮ್ಮನ ದೇವಸ್ಥಾನ ಪುನರ್ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗಿದೆ.
ಇದೀಗ ಗೋಟಗೋಡಿಯ ರಾಕ್ ಗಾರ್ಡನ್ ಮಾದರಿಯಲ್ಲಿ ಸುಮಾರು ₹ 2ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಿದ್ದು, ನೋಡುಗರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ. ಇದೀಗ ₹ 2 ಕೋಟಿ ವೆಚ್ಚದಲ್ಲಿ ನೂತನ ಕಲ್ಯಾಣ ಮಂಟಪದ ಕಾಮಗಾರಿ ಸಹ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಕೊರ್ಲಹಳ್ಳಿ ಸೇತುವೆ ಬಳಿ ಸಿಂಗಟಾಲೂರು ಶ್ರೀವೀರಭದ್ರೇಶ್ವರ ದ್ವಾರ ಬಾಗಿಲನ್ನು ಸಹ ಮಾಡಲು ಯೋಚಿಸಲಾಗಿದೆ.ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಕಾಲ ವಿಶೇಷ ಪೂಜೆ, ದೀಪಾಲಂಕಾರ ಕಾರ್ಯಕ್ರಮಗಳು ಪ್ರತಿ ನಿತ್ಯವೂ ನಡೆಯುತ್ತವೆ. ಪ್ರತಿ ಅಮವಾಸ್ಯೆಯಂದು ಸಾವಿರಾರು ಭಕ್ತರು ತಪ್ಪದೇ ಇಲ್ಲಿಗೆ ಬಂದು ಹೋಗುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ವಾಸ್ತವ್ಯ ಮಾಡುವುದಕ್ಕಾಗಿ ಯಾತ್ರಾ ನಿವಾಸಗಳಿವೆ, ಪೂಜ್ಯರಿಗೆ ಪ್ರತ್ಯೇಕ ವಾಸ್ತವ್ಯ ಹಾಗೂ ಪೂಜಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಗಮಿಸುವ ಭಕ್ತರಿಗೆ ದೇವಸ್ಥಾನದ ಕೊಠಡಿಗಳಿವೆ. ನೀರು ಹಾಗೂ ಮತ್ತಿತರ ಮೂಲ ಸೌಲಭ್ಯಗಳನ್ನು ದೇವಸ್ಥಾನ ಟ್ರಸ್ಟ್ ಕಮೀಟಿಯಿಂದ ಒದಗಿಸಲಾಗುತ್ತಿದೆ. ಜತೆಗೆ ಲೋಕೋಪಯೋಗಿ ಇಲಾಖೆಯ ಸುಸಜ್ಜಿತ ಪ್ರವಾಸಿ ಮಂದಿರವೂ ಸಹ ಇಲ್ಲಿದೆ.
ಜಾತ್ರಾಮಹೋತ್ಸವದ ಅಂಗವಾಗಿ ಏ. 13 ರಂದು ಸಂಜೆ 5ಗಂಟೆಗೆ ಮಹಾ ರಥೋತ್ಸವ. ನಂತರ 7 ಗಂಟೆಗೆ ಹರಗುರುಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧರ್ಮಗೋಷ್ಠಿ ಜರುಗಲಿದ್ದು, ಮುಂಡರಗಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಆರ್.ಎಲ್. ಪೊಲೀಸ್ ಪಾಟೀಲ ಹಾಗೂ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚನ್ನವರ ಉಪನ್ಯಾಸ ಮಾಡಲಿದ್ದಾರೆ. ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸುವರು. ನಂತರ ಸಂಗೀತ ಹಾಗೂ ಜಾನಪದ ಕಾರ್ಯಕ್ರಮಗಳು ಜರುಗಲಿವೆ. ಏ. 14 ರಂದು ಬೆಳಗ್ಗೆ 9 ಗಂಟೆಗೆ ಅಗ್ನಿಮಹೋತ್ಸವ, ಏ.15 ರಂದು ಸಂಜೆ 6ಗಂಟೆಗೆ ಓಕಳಿ ಕಾರ್ಯಕ್ರಮ ಜರುಗಲಿದೆ.ಶ್ರೀ ವೀರಭದ್ರೇಶ್ವರ ಜಾತ್ರೆಯು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿವರ್ಷವೂ ಭಕ್ತ ಜನಸಾಗರವೇ ಹರಿದು ಬರುತ್ತಿದೆ. ದೇವಸ್ಥಾನಕ್ಕೆ ತೆರಳಲು ಉತ್ತಮವಾದ ರಸ್ತೆ ಇದ್ದು, ಜಾತ್ರೆಗೆ ಬರುವ ಭಕ್ತರಿಗೆ ಮುಂಡರಗಿ ಹಾಗೂ ಹೂವಿನ ಹಡಗಲಿಯಿಂದ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಿರುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗಿದೆ. ನಾಡಿನ ವಿವಿಧೆಡೆಗಳಲ್ಲಿರುವ ದೇವಸ್ಥಾನದ ಭಕ್ತರ ಹಾಗೂ ಟ್ರಸ್ಟ್ ಕಮೀಟಿ ಎಲ್ಲ ಪದಾಧಿಕಾರಿಗಳ ಸಹಾಯ, ಸಹಕಾರದಿಂದ ದೇವಸ್ಥಾನದಲ್ಲಿ ವಿವಿಧ ಅಭಿವೖದ್ದಿ ಕಾರ್ಯಗಳು ನಡೆಯುತ್ತಿದ್ದು, ಭಕ್ತರ ಸಹಕಾರವೇ ಈ ದೇವಸ್ಥಾನಕ್ಕೆ ಬಹು ದೊಡ್ಡ ಶಕ್ತಿಯಾಗಿದೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಷ್ಟ ಕಮೀಟಿ ಸುಕ್ಷೇತ್ರ ಸಿಂಗಟಾಲೂರು ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
;Resize=(128,128))
;Resize=(128,128))