ಜೀವನೋಪಾಯ ಪರಿಹಾರಕ್ಕಾಗಿ 14.01 ಕೋಟಿ ಬಿಡುಗಡೆ

| Published : Jul 05 2024, 01:02 AM IST / Updated: Jul 05 2024, 11:02 AM IST

ಸಾರಾಂಶ

  2023ರ ಮುಂಗಾರು ಹಂಗಾಮಿನ ಬರ ಘೋಷಣೆ ಅಡಿಯಲ್ಲಿ ಬೆಳೆ ಹಾನಿ ಪರಿಹಾರ ಪಡೆದಿರುವ ಹಾಗೂ ಕುಟುಂಬ - ಐಡಿ ಹೊಂದಿರುವ ಜಿಲ್ಲೆಯ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ರಾಜ್ಯಸರ್ಕಾರ “ಜೀವನೋಪಾಯ ಪರಿಹಾರ "  ನೀಡಲು 14 ಕೋಟಿ 1 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ.

ರಾಮನಗರ: ಮಳೆಯಾಶ್ರಿತ ಒಣಭೂಮಿ ಹೊಂದಿರುವ ಹಾಗೂ 2023ರ ಮುಂಗಾರು ಹಂಗಾಮಿನ ಬರ ಘೋಷಣೆ ಅಡಿಯಲ್ಲಿ ಬೆಳೆ ಹಾನಿ ಪರಿಹಾರ ಪಡೆದಿರುವ ಹಾಗೂ ಕುಟುಂಬ - ಐಡಿ ಹೊಂದಿರುವ ಜಿಲ್ಲೆಯ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ರಾಜ್ಯಸರ್ಕಾರ “ಜೀವನೋಪಾಯ ಪರಿಹಾರ " (ಗ್ಯಾಟಿಟುಯಸ್ ರಿಲೀಫ್ ) ನೀಡಲು 14 ಕೋಟಿ 1 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ.

ರಾಜ್ಯ ವಿಪತ್ತು ಪರಿಹಾರ ನಿಧಿ/ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (SRDF/NDRF) ಮಾರ್ಗಸೂಚಿಯನ್ವಯ ವಿಪತ್ತುಗಳಿಂದ ಜೀವನೋಪಾಯಕ್ಕೆ ತೊಂದರೆ ಉಂಟಾಗಿರುವ ಪ್ರತಿ ಕುಟುಂಬದ ಇಬ್ಬರು ದುಡಿಯುವ ವ್ಯಕ್ತಿಗಳಿಗೆ ನರೇಗಾ ಯೋಜನೆಯಡಿ ಪ್ರತಿ ದಿನಕ್ಕೆ ನೀಡುವ ದರದಲ್ಲಿ ಜೀವನವೋಪಾಯಕ್ಕೆ ತೊಂದರೆ ಉಂಟಾಗಿರುವ ಪ್ರತಿ ಕುಟುಂಬಕ್ಕೆ ಗರಿಷ್ಠ 2,874 ರು.ನಂತೆ “ಜೀವನೋಪಾಯ ಪರಿಹಾರ " ಮೊತ್ತವನ್ನು ಅನುಪಾತ ಆಧಾರದ ಮೇಲೆ ಪ್ರತಿಯೊಬ್ಬ ಅರ್ಹ ರೈತರಿಗೆ ನಿಯಮಾನುಸಾರ ಪಾವತಿಸಲಾಗುತ್ತದೆ.

ಅದರಂತೆ ಜಿಲ್ಲೆಯ 2023-24ರ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ, ಈಗಾಗಲೇ ಬೆಳೆಹಾನಿ ಪರಿಹಾರ ಪಾವತಿಸಿರುವ ಹಾಗೂ ಪಾವತಿಗೆ ಪರಿಗಣನೆಗಾಗಿ ಇರುವ ಕುಟುಂಬ -ID ಹೊಂದಿರುವ 48,939 ರೈತ ಕುಟುಂಬಗಳ 52,889 ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ 14,01,81,458 ರು. ಗಳ ಜೀವನೋಪಾಯ ಪರಿಹಾರ ವನ್ನು ಗುರುತಿಸಿದ ರೈತ ಕುಟುಂಬಗಳ ಪಟ್ಟಿಗೆ ಅನುಮೋದನೆ ಅನುಮೊದನೆ ನೀಡಲಾಗಿದೆ. ಸರ್ಕಾರದಿಂದ DBT ಮುಖಾಂತರ ನೇರವಾಗಿ ಆಧಾರ್‌ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆ ಆಗಲಿದೆ.

ರೈತರ ಮಾಹಿತಿಗಾಗಿ ಪ್ರಚುರ :

ಅರ್ಹ ಫಲಾನುಭವಿ ರೈತರಿಗೆ ಅರ್ಹತೆಗೆ ಅನುಗುಣವಾಗಿ ನಿಯಮಾನುಸಾರ ಪಾವತಿಸಲಾಗುತ್ತಿರುವ ಜೀವನೋಪಾಯ ಪರಿಹಾರ ಮೊತ್ತದ ವಿವರಗಳನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಭೂಮಿ ಉಸ್ತುವಾರಿ ಕೋಶದ ಅಧಿಕೃತ ಜಾಲತಾಣಗಳಲ್ಲಿ ರೈತರ ಮಾಹಿತಿಗಾಗಿ ಪ್ರಚಾರ ಪಡಿಸಬೇಕು.

ಈ ಮೊತ್ತವನ್ನು ವಿಧಿಸಿರುವ ಷರತ್ತುಗಳನ್ವಯ ನಿಯಮಾನುಸಾರ ಉಪಯೋಗಿಸಿಕೊಂಡಿರುವುದಕ್ಕೆ ಉಪಯೋಗಿತ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ನಿಯಮಾನುಸಾರ ಸಲ್ಲಿಸಬೇಕೆಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರು ಸೂಚನೆ ನೀಡಿದ್ದಾರೆ.

ಪಾಲಿಸಬೇಕಾದ ಷರತ್ತುಗಳೇನು ?

ಜೀವನೋಪಾಯ ಪರಿಹಾರಕ್ಕಾಗಿ ಬಿಡುಗಡೆಯಾಗಿರುವ ಅನುದಾನ ಬಳಕೆ ಮಾಡಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವೊಂದು ಷರತ್ತುಗಳನ್ನು ಪಾಲಿಸಬೇಕಾಗಿದೆ.

1.ಜೀವನೋಪಾಯ ಪರಿಹಾರ ಮೊತ್ತವನ್ನು ಬೆಳೆಹಾನಿ ಪರಿಹಾರ ಪಡೆದಿರುವ ನಿಯಮಾನುಸಾರ ಅರ್ಹ ಮಳೆಯಾಶ್ರಿತ ಒಣಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ಹಾಗೂ ಕುಟುಂಬ ಐಡಿ ಹೊಂದಿರುವ ರೈತ ಕುಟುಂಬಗಳಿಗೆ ಮಾತ್ರ ಪಾವತಿಸುವುದು.

2.ಒಂದು ಕುಟುಂಬಕ್ಕೆ ಒಂದು ಬಾರಿ ಮಾತ್ರ ಜೀವನೋಪಾಯ ಪರಿಹಾರ ಮೊತ್ತವನ್ನು ಅರ್ಹತೆಯನುಸಾರ ಪಾವತಿ ಮಾಡಬೇಕು.

3.ಮಳೆಯಾಶ್ರಿತ ಒಣಭೂಮಿ ಸಣ್ಣ ಹಾಗೂ ಅತಿ ಸಣ್ಣ ಕುಟುಂಬ ಐಡಿಯಲ್ಲಿ ಒಂದಕ್ಕಿಂತ ಹೆಚ್ಚು ಇಂತಹ ಅರ್ಹ ರೈತರಿದ್ದಲ್ಲಿ 2874 ರು.ಗಳ ಜೀವನೋಪಾಯ ಪರಿಹಾರ ಮೊತ್ತವನ್ನು ಅನುಪಾತದ ಆಧಾರದ ಮೇಲೆ ಪ್ರತಿಯೊಬ್ಬ ಅರ್ಹ ರೈತರಿಗೆ ನಿಯಮಾನುಸಾರ ಪಾವತಿಸುವುದು.

4.ಅರ್ಹ ಫಲಾನುಭವಿ ರೈತರಿಗೆ ಪಾವತಿಯಾಗಿರುವ ಬೆಳೆಹಾನಿ ಪರಿಹಾರ ಹಾಗೂ ಜೀವನೋಪಾಯ ಪರಿಹಾರ ವಿವರಗಳನ್ನು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಕಚೇರಿ , ಗ್ರಾಪಂ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಬೇಕು.

ರಾಜ್ಯಸರ್ಕಾರ ಜೀವನೋಪಾಯ ಪರಿಹಾರ ವಿತರಣೆಗಾಗಿ ರಾಮನಗರ ಜಿಲ್ಲೆಗೆ 14 ಕೋಟಿ 1 ಲಕ್ಷ ರುಪಾಯಿ ಬಿಡುಗಡೆ ಮಾಡಿದೆ. ಈ ಪರಿಹಾರ ಹಣ ಖಾತೆಗೆ ಜಮಾ ಆಗದೆ ಇರುವ ಬಗ್ಗೆ ದೂರು ಸಲ್ಲಿಸಲು ಸಾರ್ವಜನಿಕರು ಸಂಬಂಧಪಟ್ಟ ತಾಲೂಕು ಕೃಷಿ ಅಧಿಕಾರಿ/ತಹಶೀಲ್ದಾರ್‌ ರವರ ಕಚೇರಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆಯುವುದು.

-ಅವಿನಾಶ್ , ಜಿಲ್ಲಾಧಿಕಾರಿ, ರಾಮನಗರ.