ಸಾರಾಂಶ
ಅಗರಬನ್ನಿ ಹಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ನೆಲ ಜಲ ಸಂರಕ್ಷಣೆ ಹಾಗೂ ಬೆಳೆ ವಿಮೆ ಎಂಬ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಸಂಘಗಳ ನೆರೆವಿಗಾಗಿ ಆರಂಭವಾದ ಒಂದು ಯೋಜನೆ. ಇದು ಉಳಿತಾಯ ಮನೋಭಾವನೆ, ವ್ಯವಹಾರ ಜ್ಞಾನ, ಶಿಕ್ಷಣ, ಸ್ವಚ್ಛತೆ, ಆರೋಗ್ಯ ಮತ್ತು ಆರ್ಥಿಕ ನೆರವು ಸೇರಿ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದಂತಹ ಛಾಪನ್ನು ಮೂಡಿಸಿದೆ ಎಂದು ಯೋಜನೆ ತಾಲೂಕು ಕೃಷಿ ಅಧಿಕಾರಿ ಹನುಮಂತಪ್ಪ ಹೇಳಿದರು.ಗುರುವಾರ ತಾಲೂಕಿನ ಅಗರಬನ್ನಿ ಹಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ನೆಲ ಜಲ ಸಂರಕ್ಷಣೆ ಹಾಗೂ ಬೆಳೆ ವಿಮೆ ಎಂಬ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯೋಜನೆಯು ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣದಲ್ಲಿ ಹೊಸ ಕ್ರಾಂತಿ ಹಾಡಿದೆ. ನೆಲ ಜಲ ಸಂರಕ್ಷಣೆಯು ಪ್ರತಿಯೊಬ್ಬ ಪ್ರಜೆ ಮೊದಲ ಆದ್ಯತೆಯಾಗಿದ್ದು, ಜಮೀನುಗಳಲ್ಲಿ ಅಂತರ್ಜಲ ಹೆಚ್ಚಿಸಲು ಇಂಗು ಗುಂಡಿ ನಿರ್ಮಿಸಬೇಕು. ನೀರು ಕಾರ್ಖಾನೆಗಳಲ್ಲಿ ಉತ್ಪಾದಿಸು ವಸ್ತುವಲ್ಲ. ಆದ್ದರಿಂದ ನೀರನ್ನು ಪ್ರತಿಯೊಬ್ಬರೂ ಹಿತಮಿತವಾಗಿ ಬಳಸಬೇಕು ಎಂದು ಕರೆಕೊಟ್ಟರು.
ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ಪವನ್ ಮಾತನಾಡಿ, ರೈತರು ಬೆಳೆಯುವ ಪ್ರತಿಯೊಂದು ಬೆಳೆಗೂ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆ ಬೆಳೆ ವಿಮೆ ತಪ್ಪದೇ ಮಾಡಿಸಬೇಕು. ಇದರಿಂದ ಬಿತ್ತನೆ ಪೂರ್ವದಲ್ಲಿ ಹಾಗೂ ಬಿತ್ತನೆ ನಂತರದಲ್ಲಿ ಸಂಭವಿಸುವ ಚಂಡಮಾರುತ, ಆಲಿಕಲ್ಲು ಮಳೆ, ಪ್ರಾಕೃತಿಕ ದುರಂತ, ಬಿರುಗಾಳಿ, ಬೆಂಕಿ ಅವಘಡ, ರೋಗಬಾಧೆ ಇತ್ಯಾದಿ ತೊಂದರೆಗಳಿಂದ ಪಾರಾಗಬಹುದು. ಇಂಥಹ ಆರ್ಥಿಕ ನಷ್ಟ ಭರಿಸುವ ಬೆಳೆ ಪರಿಹಾರ ಯೋಜನೆಗಳ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಸಮಾರಂಭದ ಉದ್ಘಾಟನೆಯನ್ನು ಗ್ರಾಮದ ರೈತ ಮುಖಂಡ ವೀರಭದ್ರಪ್ಪ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ವಲಯದ ಮೇಲ್ವಿಚಾರಕ ನಂದ, ಸೇವಾ ಪ್ರತಿನಿಧಿ ಅನ್ನಪೂರ್ಣ, ಶೈಲಜಾ ಸೇರಿ ಗ್ರಾಮದ ರೈತಬಾಂಧವರಿದ್ದರು.