ಸವಣೂರಿನ ಹಾವಣಗಿ ಪ್ಲಾಟ್ ಅಭಿವೃದ್ಧಿಗೆ ಮನವಿ

| Published : Jul 05 2024, 01:00 AM IST

ಸಾರಾಂಶ

ಸವಣೂರು ಪಟ್ಟಣದ ಹಾವಣಗಿ ಪ್ಲಾಟ್‌ 20 ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ಒಂದು ವಾರದೊಳಗೆ ಪ್ಲಾಟ್‌ ಅಭಿವೃದ್ಧಿ ಕಾರ್ಯ ಆರಂಭಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ಲಾಟ್‌ ನಿವಾಸಿಗಳು ಹೇಳಿದ್ದಾರೆ.

ಸವಣೂರು: ಪಟ್ಟಣದ ಹಾವಣಗಿ ಪ್ಲಾಟ್‌ ಅಭಿವೃದ್ಧಿ ಕಾಣದೇ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕೂಡಲೇ ಅಭಿವೃದ್ಧಿ ಕಾರ್ಯ ಆರಂಭಿಸುವಂತೆ ಸ್ಥಳೀಯ ನಿವಾಸಿಗಳು ಉಪವಿಭಾಗಾಧಿಕಾರಿ ಮಹಮ್ಮದ್ ಖಿಜರ್‌ ಅವರಿಗೆ ಮನವಿ ಸಲ್ಲಿಸಿದರು.

ಸವಣೂರು ಪಟ್ಟಣದಲ್ಲಿ ಮೊಟ್ಟ ಮೊದಲು ನಿರ್ಮಾಣಗೊಂಡಿದ್ದು ಹಾವಣಗಿ ಪ್ಲಾಟ್. ಈ ಬಡಾವಣೆ ಸಾಕಷ್ಟು ವಿದ್ಯಾವಂತರನ್ನು ಒಳಗೊಂಡಿರುವ ಪ್ರದೇಶ ಆಗಿದೆ. ಆದರೆ ೨೦ ವರ್ಷಗಳಿಂದ ಇಲ್ಲಿನ ರಸ್ತೆಗಳು ಹಾಗೂ ಚರಂಡಿಗಳು ಅರೆಬರೆಯಾಗಿವೆ. ಚರಂಡಿ ತುಂಬಿ ರಸ್ತೆಗೆ ನೀರು ಹರಿಯುತ್ತಿದ್ದರೂ ಪುರಸಭೆ ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದರು.ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಸ್ತೆ ಅಭಿವೃದ್ಧಿ ಕುರಿತು ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಶೀಘ್ರದಲ್ಲಿ ಕಾರ್ಯ ಕೈಗೊಳ್ಳುವ ಭರವಸೆ ನೀಡುತ್ತಾರೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಹಲವು ರೋಗ-ರುಜುನಗಳಿಗೆ ಕಾರಣವಾಗಿದೆ. ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.ಹಾವಣಗಿ ಪ್ಲಾಟ್‌ನಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕೈಗೊಳ್ಳುವ ಕುರಿತು ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎಸಿ ಕಚೇರಿ ಎದುರು ಧರಣಿ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಹೇಳಿದರು.

ಇಲ್ಲಿನ ನಿವಾಸಿಗಳಾದ ಬಿ.ಎಂ. ಪಾಟೀಲ್, ಗೋವಿಂದ ತಿರುಮಲೆ, ಕುಮಾರಸ್ವಾಮಿ ಹಿರೇಮಠ, ಪರಶುರಾಮ ಅರಿಶಿನಪುಡಿ, ಎನ್.ಎ. ಚೆಂಗಾಪುರ, ಮಂಜುನಾಥ್ ಗಿತ್ತೆ, ರತ್ನವ್ವ ಕಾಟೇನಹಳ್ಳಿ, ಲಲಿತಾ ತಿರುಮಲೆ, ರೇಖಾ ಕಾಳೆ, ಉಮಾ ತಿರುಮಲೆ, ದೇವಕ್ಕಾ ಗಡೆಪ್ಪನವರ, ನೀಲಮ್ಮ ತಗ್ಗಿಹಳ್ಳಿ, ಕರಬಸಮ್ಮ ತೆಗ್ಗಿಹಳ್ಳಿ, ಶಾಂತವ್ವ ಹಿಂಚಿಗೇರಿ, ಗೀತಾ ಬಳಿಗೇರ, ಶೈಲಾ ಎಂಕಣ್ಣನವರ, ಲಲಿತಾ ರಾಶಿನಕರ, ರಾಜೇಶ್ವರಿ ಕರ್ನೂಲ, ಶೋಭಾ ಕಲ್ಮಠ, ಉಮಾ ತಿರುಮಲೆ, ಲತಾ ತಿರುಮಲೆ, ಶ್ವೇತಾ ಪಾಟೀಲ, ನಾಗರತ್ನಾ ಇಳಿಗೇರ್, ರೂಪಾ ತೆಗ್ಗಿಹಳ್ಳಿ, ರೇಣುಕಾ ಗೋಣಿರ, ರಾಜೇಶ್ವರಿ ಅಮಾತಿ ಇದ್ದರು.