ಸಾರಾಂಶ
ಮಾಗಡಿ: ಗ್ರಾಮ ಪಂಚಾಯಿತಿ ಸಭೆಗಳಿಗೆ ಕಡ್ಡಾಯ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗವಹಿಸಿ ಜನಗಳಿಗೆ ತಮ್ಮ ಇಲಾಖೆ ಮಾಹಿತಿ ನೀಡುವ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ ಎಂದು ಅಗಲಕೋಟೆ ಗ್ರಾಪಂ ಅಧ್ಯಕ್ಷ ಸಿ.ಕುಮಾರ್ ಹೇಳಿದರು.
ತಾಲೂಕಿನ ಅಗಲಕೋಟೆ ಗ್ರಾಪಂ ವತಿಯಿಂದ 23-24ನೇ ಸಾಲಿನ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ನೋಡಲ್ ಅಧಿಕಾರಿ ಸಭೆಗೆ ಭಾಗವಹಿಸದಿದ್ದರೆ ಸಭೆಯನ್ನು ನಡೆಸುವುದಾದರೂ ಹೇಗೆ? ಸಾಮಾಜಿಕ ಲೆಕ್ಕವನ್ನು ಯಾವ ರೀತಿ ಪಡೆಯಲು ಸಾಧ್ಯ? ತಾವು ನೀಡಿದ ದಿನಾಂಕದಲ್ಲೇ ಸಭೆ ನಡೆಸಿದರೂ ಸಭೆಗೆ ಹಾಜರಾಗದೆ ಈ ರೀತಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕೋಟಿಗಟ್ಟಲೆ ವೆಚ್ಚದಲ್ಲಿ ಕಾಮಗಾರಿಗಳು ನಡೆದಿರುತ್ತದೆ. ಅದಕ್ಕೆ ಲೆಕ್ಕ ಪಡೆಯುವ ಕೆಲಸವನ್ನು ಸಾರ್ವಜನಿಕರ ಮುಂದೆ ತಿಳಿಸಬೇಕು. ಅದನ್ನು ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಈ ಬಗ್ಗೆ ಪಂಚಾಯಿತಿ ಇಒಗಳ ಗಮನಕ್ಕೆ ತಂದು ಕಡ್ಡಾಯವಾಗಿ ನೋಡಲು ಅಧಿಕಾರಿಗಳು ಸಭೆಗೆ ಭಾಗವಹಿಸುವಂತೆ ದೂರು ನೀಡಿ ಎಂದು ತಿಳಿಸಿದರು.ತಾಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕಿ ಡಿ.ಎಸ್.ಉಮಾ ಮಾತನಾಡಿ, ಅಗಲಕೋಟೆ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಅಡಿ 720 ಕಾಮಗಾರಿಗಳನ್ನು ಮಾಡಿದ್ದು, ಅದರಲ್ಲಿ 10 ಮನೆ, 266 ಸೊ ಫಿಟ್, 66 ದನದ ಕೊಟ್ಟಿಗೆ, 6 ಕೃಷಿ ಹೊಂಡ, 4 ಕೋಳಿ ಶೆಡ್, 5 ಕಲ್ಯಾಣಿ ಅಭಿವೃದ್ಧಿ, 1 ಆಟದ ಮೈದಾನ ಅಭಿವೃದ್ಧಿ, 7 ರಸ್ತೆ ಕಾಮಗಾರಿ, 15 ನಾಲೆ ಅಭಿವೃದ್ಧಿ, 8 ಚೆಕ್ ಡ್ಯಾಂ ನಿರ್ಮಾಣ, 1 ಸ್ಮಶಾನ ಅಭಿವೃದ್ಧಿ, 2 ಕೆರೆ ಪುನಶ್ಚೇತನ ಕಾಮಗಾರಿ, 7 ಕಾಂಕ್ರೀಟ್ ರಸ್ತೆ ಕಾಮಗಾರಿ, ಒಟ್ಟು ಕೂಲಿ ವೆಚ್ಚ 60.42 ಲಕ್ಷ, ಸಾಮಗ್ರಿ ವೆಚ್ಚ 25.35 ಲಕ್ಷ ಅನುದಾನ ಬಳಕೆ ಮಾಡಲಾಗಿದೆ. ಜೊತೆಗೆ
ಸಾಮಾಜಿಕ ಅರಣ್ಯ ಇಲಾಖೆಯಿಂದ 24 ಕಾಮಗಾರಿ, ತೋಟಗಾರಿಕೆ ಇಲಾಖೆಯಿಂದ 42, ಕೃಷಿ ಇಲಾಖೆಯಿಂದ 35, ರೇಷ್ಮೆ ಇಲಾಖೆಯಿಂದ 14 ಕಾಮಗಾರಿಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.ಸಭೆಗೆ ನೋಡಲ್ ಅಧಿಕಾರಿ ಬರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಕಾಟಾಚಾರಕ್ಕೆ ಸಭೆ ಮಾಡಬಾರದು. ಮುಂದಿನ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಭಾಗವಹಿಸುವಂತೆ ಪಿಡಿಒ ಗಮನಹರಿಸಬೇಕು. ಇದೇ ರೀತಿ ಮಾಡಿದರೆ ಸಭೆ ನಡೆಸಲು ಬಿಡುವುದಿಲ್ಲ ಎಂದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಲಲಿತಮ್ಮ, ಸದಸ್ಯರಾದ ಗೀತಾ ದಿಲೀಪ್, ಮಂಜುಳಾ, ಆನಂದ್, ಶಿವಣ್ಣ, ದಿನೇಶ್, ಮಧು, ಮನು ಸುರೇಶ್, ಮಹಾಲಕ್ಷ್ಮಿ, ಸುಮಿತ್ರಮ್ಮ, ಮಾದಮ್ಮ, ಪಿಡಿಒ ಪ್ರಭು ಮಹಲಿಂಗಯ್ಯ ಇತರರು ಭಾಗವಹಿಸಿದ್ದರು.