ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ದಾಖಲಾದ 48 ಸ್ವತ್ತಿನ ಪ್ರಕರಣಗಳಲ್ಲಿ ಒಟ್ಟು 14 ಜನ ಅಂತಾರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು ₹1,17,30,000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ದಾಖಲಾದ 48 ಸ್ವತ್ತಿನ ಪ್ರಕರಣಗಳಲ್ಲಿ ಒಟ್ಟು 14 ಜನ ಅಂತಾರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು ₹1,17,30,000 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.

ನಗರದ ಪೊಲೀಸ್ ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದಾಜು ₹65 ಲಕ್ಷ ಮೌಲ್ಯದ 426.2 ಗ್ರಾಂ ಬಂಗಾರದ ಆಭರಣಗಳು ಮತ್ತು ₹20 ಲಕ್ಷ ನಗದು ಮತ್ತು ಕೃತ್ಯಕ್ಕೆ ಬಳಸಿದ 02 ಕಾರು ಹಾಗೂ 39 ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯಪುರ ಗ್ರಾಮೀಣ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒಟ್ಟು 48 ಪ್ರಕರಣಗಳನ್ನು ಪತ್ತೆ ಹಚ್ಚಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

2025 ಮೇ 30ರಂದು ನಿಡಗುಂದಿ ತಾಲೂಕಿನ ಸವಿತಾ ನರಸನಗೌಡ್ರ ಎಂಬುವವರು ವಿಜಯಪುರದಿಂದ ತಾಳಿಕೋಟೆಗೆ ಬಸ್‌ನಲ್ಲಿ ಪ್ರಯಾಣಿಸುವಾಗ ಅವರ ಬ್ಯಾಗ್‌ನಲ್ಲಿದ್ದ 65 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ‌ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಸವಿತಾ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಮನಗೂಳಿ ಠಾಣೆ ಪೊಲೀಸರು ಬಸ್ಸಿನಲ್ಲಿ 65 ಗ್ರಾಂ ಬಂಗಾರದ ಆಭರಣಗಳನ್ನು ಕದ್ದಿದ್ದ 6 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ನಡೆಸಿದಾಗ ಈ ಆರೋಪಿಗಳು ಜಿಲ್ಲೆಯ ತಿಕೋಟಾ, ದೇವರಹಿಪ್ಪರಗಿ, ಬಬಲೇಶ್ವರ, ಆದರ್ಶನಗರ, ಗೋಳಗುಂಬಜ್, ನಿಡಗುಂದಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು 07 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ಬಹಿರಂಗವಾಗಿದೆ.‌

ಆರೋಪಿಗಳಾದ ಕಲಬುರಗಿಯ ಪ್ರಶಾಂತ ಬೋಯ್ರ್, ಮಂಜು ಬೋಯ್ರ್, ಮಹಾರಾಷ್ಟ್ರದ ಅಂಕುಶ ಜಾಧವ, ಗೋವರ್ಧನ ಪವಾರ, ಭದ್ರಾವತಿಯ‌ ರಜನಿ ಭೋವಿ, ಶಿವು ಭೋವಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟು 08 ಪ್ರಕರಣಗಳಲ್ಲಿ ಕೃತ್ಯಕ್ಕೆ ಬಳಸಿದ 01 ಕಾರು ಹಾಗೂ ಒಟ್ಟು 426.2 ಗ್ರಾಂ ಬಂಗಾರದ ಆಭರಣಗಳು ಸೇರಿ ಅಂದಾಜು ₹65 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ‌ ಎಂದರು.

2025 ಫೆ.2ರಂದು ಮನಗೂಳಿ ಬೈಪಾಸ್ ಬಳಿ ನಿಲ್ಲಿಸಿದ್ದ ಹುಬನೂರ ನಿವಾಸಿ ಲಕ್ಷ್ಮಣ ಲಮಾಣಿ ಎಂಬುವವರ ಬೈಕ್ ಕಳ್ಳತನವಾದ ಕುರಿತು ಮನಗೂಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮನಗೂಳಿಯ ಆರೋಪಿ ಬಾಬು‌ ಜಮಖಂಡಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜಿಲ್ಲೆಯ ಆದರ್ಶನಗರ, ಗೋಲಗುಂಬಜ್, ಜಲನಗರ, ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ಗ್ರಾಮೀಣ, ಕಲಾದಗಿ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದ ಒಟ್ಟು 19 ಮೋಟಾರ್ ಸೈಕಲ್‌ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತನಿಂದ ₹5.30 ಲಕ್ಷ ಮೌಲ್ಯದ ಒಟ್ಟು 19 ಬೈಕ್ ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

2025 ಮೇ 9ರಂದು ಮಹಾರಾಷ್ಟ್ರದ ಲಾತೂರ ನಿವಾಸಿ ಲಕ್ಷ್ಮಣ ಕುಂಡಗಿರ ಎಂಬಾತನಿಗೆ ನಾಲ್ವರು ಆರೋಪಿಗಳು ಸೇರಿ ನಕಲಿ ಬಂಗಾರದ ನಾಣ್ಯಗಳು ಅಸಲಿ ಅಂತ ನಂಬಿಸಿ ಒಟ್ಟು ₹26 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದರ ಕುರಿತು ಮನಗೂಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಮನಗೂಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳಾದ ವಿಜಯನಗರ ಮೂಲದ ಹಣಮಂತ ಕೊರಚರ, ರಾಜಾ ಕಾವಾಡಿ, ಹರೀಶ ಕೊರಚರ, ಕೊರಚರನನ್ನು ಬಂಧಿಸಿದ್ದಾರೆ. ಬಂಧಿತರಿಂದ ₹20 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ 01 ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದರು.

2016 ಜ.16ರಂದು ತಾಲೂಕಿನ ಅಲಿಯಾಬಾದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಆರೋಪಿಗಳಾದ ನಾಗಠಾಣದ ಸಿದ್ರಾಮ ಅರಕೇರಿ, ಆಕಾಶ ಮಠಪತಿ ಹಾಗೂ ಅಥರ್ಗಾದ ಮಂಜುನಾಥ ಉಕ್ಕಲಿಯನ್ನು ವಶಕ್ಕೆ ಪಡೆದುಕೊಂಡು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.‌ ಪೊಲೀಸರ ವಿಚಾರಣೆ ವೇಳೆ ರಾಜ್ಯ ಹಾಗೂ ಹೊರ ರಾಜ್ಯಗಳ‌ಲ್ಲಿನ ಐದು ವಿವಿಧ ಠಾಣೆಗಳ ವ್ಯಾಪ್ತಿಗಳಲ್ಲಿ‌ ₹7 ಲಕ್ಷ ಮೌಲ್ಯದ ಒಟ್ಟು 20 ಬೈಕ್ ವಶಪಡಿಸಿಕೊಂಡಿದ್ದಾರೆ‌ ಎಂದರು.

ಈ ವೇಳೆ ಕರ್ತವ್ಯದಲ್ಲಿ ಪಾಲ್ಗೊಂಡು ಆರೋಪಿಗಳ ಪತ್ತೆಗೆ ಸಹಕರಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಪ್ರೊಬೆಷನರಿ ಎಸ್ಪಿ ಇಶಿತಾ ಗುಪ್ತಾ, ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ತುಳಜಪ್ಪ ಸುಲ್ಫಿ, ಸಿಪಿಐ ರಮೇಶ ಅವಜಿ, ರಾಯಗೊಂಡ ಜಾನಾರ ಹಾಗೂ ವಿವಿಧ ಠಾಣೆಗಳ ಪಿಎಸ್ಐ ಮತ್ತು ಸಿಬ್ಬಂದಿ ಇದ್ದರು.