ಕಂಪ್ಲಿಗೆ ₹14.10 ಕೋಟಿ ಅನುದಾನ ಬೇಡಿಕೆ

| Published : Oct 30 2025, 02:15 AM IST

ಸಾರಾಂಶ

ಪಟ್ಟಣದ ಅಗತ್ಯ ಮೂಲ ಸೌಕರ್ಯಗಳಿಗಾಗಿ ಅನುದಾನ ಬೇಡಿಕೆ ಪಟ್ಟಿ ಸಿದ್ಧಪಡಿಸಲಾಗಿದೆ.

ಕಂಪ್ಲಿ: ಪಟ್ಟಣದಲ್ಲಿ ಒಳಾಂಗಡ ಕ್ರೀಡಾಂಗಣ ಹಾಗೂ ಅಗತ್ಯ ಮೂಲ ಸೌಕರ್ಯ ಸೇರಿ ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ₹14.10 ಕೋಟಿ ಕ್ರಿಯಾ ಯೋಜನೆ ರೂಪಿಸಿ, ಪೌರಾಡಳಿತ ಸಚಿವರಿಗೆ ಅನುದಾನ ಬೇಡಿಕೆ ಸಲ್ಲಿಸಲು ಪುರಸಭೆ ತೀರ್ಮಾನಿಸಿದೆ ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ 2026-27ನೇ ಸಾಲಿನ ಕರಡು ವಾರ್ಷಿಕ ಯೋಜನಾ ವರದಿ ಸಿದ್ಧಪಡಿಸುವ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಮಾತನಾಡಿದರು.

2026-27ನೇ ಸಾಲಿನ ಕ್ರಿಯಾ ಯೋಜನೆ ರೂಪಿಸುವ ಸಂದರ್ಭದಲ್ಲಿ ವಾರ್ಡ್ ಸದಸ್ಯರೊಂದಿಗೆ ಚರ್ಚಿಸಿ ಪಟ್ಟಣದ ಅಗತ್ಯ ಮೂಲ ಸೌಕರ್ಯಗಳಿಗಾಗಿ ಅನುದಾನ ಬೇಡಿಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಇದರ ಅಡಿಯಲ್ಲಿ ರಸ್ತೆ ಮತ್ತು ಚರಂಡಿ ವಲಯಕ್ಕೆ ಎಸ್‌ಸಿಎಸ್‌ಪಿ ಅನುದಾನವಾಗಿ ₹1.41 ಕೋಟಿ, ಟಿಎಸ್‌ಪಿ ಅನುದಾನವಾಗಿ ₹61 ಲಕ್ಷ ಸೇರಿ ಒಟ್ಟು ₹13.10 ಕೋಟಿ, ಆರೋಗ್ಯ ವಲಯಕ್ಕೆ ₹15 ಲಕ್ಷ, ಗ್ರಂಥಾಲಯ ವಲಯಕ್ಕೆ ₹30 ಲಕ್ಷ, ಶೈಕ್ಷಣಿಕ ವಲಯಕ್ಕೆ ₹25 ಲಕ್ಷ, ವೈಯಕ್ತಿಕ ಸಹಾಯಧನ ವಲಯಕ್ಕೆ ಎಸ್‌ಸಿಎಸ್‌ಪಿ ಅಡಿಯಲ್ಲಿ ₹10 ಲಕ್ಷ ಮತ್ತು ಟಿಎಸ್‌ಪಿ ಅಡಿಯಲ್ಲಿ ₹8 ಲಕ್ಷ, ಒಟ್ಟು ₹30 ಲಕ್ಷ ರೂಪಾಯಿಗಳ ಅನುದಾನ ಬೇಡಿಕೆಯಿದೆ ಎಂದು ವಿವರಿಸಿದರು. ಪಟ್ಟಣಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಒಟ್ಟಾರೆ ₹14.10 ಕೋಟಿ ಅನುದಾನ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಜಿ.ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಇದ್ದರು.