ಸಾರಾಂಶ
ಬೆಳೆ ಹಾನಿ ವೀಕ್ಷಕಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ
ಕಾರಟಗಿ:ಕಾರಟಗಿ, ಕನಕಗಿರಿ, ಗಂಗಾವತಿಯಲ್ಲಿ ಇತ್ತೀಚೆಗೆ ಸುರಿದ ಮಳೆಗೆ ತಾಲೂಕಿನ ಒಟ್ಟು ೧೪೦೮.೧೫ ಹೆಕ್ಟೇರ್ ಬತ್ತದ ಬೆಳೆ ಹಾನಿಗೊಳಗಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಸಿದ್ದಾಪುರ ಹೋಬಳಿ ತುಂಗಭದ್ರಾ ನದಿ ಪಾತ್ರದ ಉಳೇನೂರು, ಉಳೇನೂರು ಕ್ಯಾಂಪ್, ಬೆನ್ನೂರು ಗ್ರಾಮದಲ್ಲಿ ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ಬತ್ತದ ಬೆಳೆಯನ್ನು ಶನಿವಾರ ಅಧಿಕಾರಿಗಳ ತಂಡದೊಂದಿಗೆ ವೀಕ್ಷಣೆ ಮಾಡಿದ ಮಾತನಾಡಿದರು. ಈಗಾಗಲೇ ಅಪಾರ ಪ್ರಮಾಣದ ಬತ್ತದ ಬೆಳೆ ಸತತ ಮಳೆಯಿಂದ ಹಾನಿಗೊಳಗಾಗಿದೆ. ಕಾರಟಗಿ ತಾಲೂಕಿನ ಪೈಕಿ ಸಿದ್ದಾಪುರ ಹೋಬಳಿಯ ಉಳೋನೂರು ಮತ್ತು ಬೆನ್ನೂರು ಗ್ರಾಮದಲ್ಲಿ ಬತ್ತದ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಶುಕ್ರವಾರ ಕಿತ್ತೂರು ಉತ್ಸವಕ್ಕೆ ತೆರಳಿದ ವೇಳೆ ಕ್ಷೇತ್ರದ ಬೆಳೆಹಾನಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ರೈತರು ಯಾವುದೇ ಕಾರಣಕ್ಕೂ ಹೆದರುವ ಅಶ್ಯಕತೆಯಿಲ್ಲ. ಕಳೆದ ಬಾರಿ ಬೆಳೆಹಾನಿ ಪರಿಹಾರ ಬಹುತೇಕ ರೈತರಿಗೆ ದೊರೆತಿಲ್ಲ ಎನ್ನುವ ಮನವಿಗಳು ರೈತರಿಂದ ತಿಳಿದು ಬಂದಿದೆ. ಅವುಗಳನ್ನು ಸಹ ಶೀಘ್ರದಲ್ಲಿ ರೈತರಿಗೆ ವಿತರಣೆ ಮಾಡುವ ಕಾರ್ಯ ನಡೆಯಲಿದೆ ಎಂದರು.ಪರಿಹಾರದ ಭರವಸೆ:
ತಾಲೂಕಿನಲ್ಲಿ ಬತ್ತದ ಬೆಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವಸ್ತುಸ್ಥಿತಿ ಅವಲೋಕನ ಮಾಡಿದ್ದೇನೆ. ಎನ್ ಡಿಆರ್ ಎಫ್ ನಿಯಮಗಳ ಪ್ರಕಾರ ಶೇ. ೩೩ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾದರೆ ಹೆಕ್ಟೇರ್‌ಗೆ ₹ ೧೭ಸಾವಿರ ಬೆಳೆ ಪರಿಹಾರ ವಿತರಣೆಗೆ ಅವಕಾಶವಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಶೇ. ೩೩ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರೈತರ ಬೆಳೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. ಶೀಘವೇ ರೈತರ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಸಚಿವ ತಂಗಡಗಿ ರೈತರಿಗೆ ಭರವಸೆ ನೀಡಿದರು.ನವೆಂಬರ್‌ನಲ್ಲಿ ಸಭೆ:
ತುಂಗಭದ್ರಾ ಅಚ್ಚುಕಟ್ಟು ಪದೇಶದ ರೈತರು ಎರಡನೇ ಬೆಳೆಗೆ ನೀರು ಹರಿಸುವ ಸಾಧ್ಯತೆಗಳ ಕುರಿತು ನವೆಂಬರ್ ಮೊದಲ ವಾರದಲ್ಲಿನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಈ ಕುರಿತು ಪಕ್ಕದ ಜಿಲ್ಲೆಗಳ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ. ರೈತರಿಗೆ ಅನುಕೂಲವಾಗಲು ಕ್ರಮವಹಿಸಲಾಗುವುದು. ಕೂಲಂಕುಶವಾಗಿ ಚರ್ಚಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.
ಸಿದ್ದಾಪುರದಿಂದ ಬೆನ್ನೂರು ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೆ ₹೬ ಕೋಟಿ ಅನುದಾನ ಮೀಸಲು ಇಟ್ಟಿದ್ದೇನೆ. ಶೀಘ್ರದಲ್ಲಿ ಕೆಲಸ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ರೈತರು ಬತ್ತ ಕಟಾವು ಮಾಡುತ್ತಿದ್ದು, ದಾಸ್ತಾನು ಸಾಗಟಕ್ಕೆ ಸಮಸ್ಯೆಯಾಗಬಾರದು ಎನ್ನುವ ದೃಷ್ಟಿಯಿಂದ ಪ್ಯಾಚ್ ವರ್ಕ್ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸರ್ಕಾರ ಎರಡು ಇಲಾಖೆಗಳ ಜವಾವ್ದಾರಿ ನೀಡಿರುವುದರಿಂದ ಕಾರ್ಯದ ಒತ್ತಡ ಹೆಚ್ಚಿದೆ. ಇನ್ನೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ೨೮ರೊಳಗೆ ಅಂತಿಮಗೊಳಿಸಬೇಕು. ಹೀಗಾಗಿ ನನ್ನ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಲು ಸಾಧ್ಯವಾಗಿಲ್ಲ. ಗ್ರಾಪಂ ಅಧ್ಯಕ್ಷರಿಗೆ ನೀವೇ ಪೂಜೆ ನೆರವೇರಿಸಿ ಎಂದಿದ್ದೇನೆ. ಶೀಘ್ರದಲ್ಲಿ ಎಲ್ಲ ಕೆಲಸ ಮುಗಿಸಿಕೊಂಡು ಕ್ಷೇತ್ರದ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರಡ್ಡಿ, ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಬೆನ್ನೂರು ಗ್ರಾಪಂ ಅಧ್ಯಕ್ಷ ಬಸಪ್ಪ, ಶರಣಪ್ಪ ಸಾಹುಕಾರ, ಶರಣೇಗೌಡ ಪೊಲೀಸ್ ಪಾಟೀಲ್, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಅಂಬಣ್ಣ ನಾಯಕ, ಕೆ. ಸಿದ್ದನಗೌಡ, ವಿರುಪಾಕ್ಷಿ ವಡ್ಡಿನ್, ಡಾ. ಕೆ.ಎನ್. ಪಾಟೀಲ್, ಬೀರಪ್ಪ, ಹನುಮಂತಪ್ಪ ಶಾಲಿಗನೂರು, ತಹಶೀಲ್ದಾರ್ ಎಂ. ಕುಮಾರಸ್ವಾಮಿ, ಕೃಷಿ ಇಲಾಖೆ ಎ.ಡಿ ಸಂತೋಷ್ ಪಟ್ಟದಕಲ್ಲು, ಕೃಷಿ ಅಧಿಕಾರಿ ಮಾರುತಿ ಸೇರಿ ಇತರರಿದ್ದರು.