ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಧೋರಣೆಗಳನ್ನು ಜನರಿಗೆ ಮನವರಿಕೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕಾಂಗ್ರೆಸ್ ಪಕ್ಷ ಕಟ್ಟಲು ಸೈದ್ಧಾಂತಿಕ ಗಟ್ಟಿ ನಿಲುವು ಹೊಂದಿರಬೇಕು. ಸಂವಿಧಾನವನ್ನು ಬದಲಿಸಬೇಕು ಎಂಬುದನ್ನು ಸದ್ದಿಲ್ಲದೆ ಬಿಜೆಪಿ ಮಾಡುತ್ತಿದ್ದು, ಇದರ ವಿರುದ್ಧ ಕಾಂಗ್ರೆಸ್ ಗಟ್ಟಿಯಾಗಿ ನಿಲ್ಲಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ನಗರದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಜಂಟಿಯಾಗಿ ಭಾನುವಾರ ಆಯೋಜಿಸಿದ್ದ 140ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಬಿಜೆಪಿ ಧೋರಣೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಬಿಜೆಪಿ ನಿಲುವುಗಳು ಜನರಿಗೆ ಅರ್ಥವಾದರೆ ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ದೇಶದ ಪ್ರಥಮ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ ದೇಶದ ಜನತೆಗೆ ಮನೆ ಕೊಟ್ಟರು. ಜನಪರವಾದ ನಾನಾ ಯೋಜನೆಗಳನ್ನು ಜಾರಿಗೆ ತಂದರು. ಭೂಮಿ ಹಂಚಿದರು. ಆರ್ಥಿಕ ವಿಚಾರವೇ ಬೇರೆ. ಜಾತಿ ಧರ್ಮವೇ ಬೇರೆ ವಿಚಾರ. ಆದರೆ, ಬಿಜೆಪಿಯವರು ಜಾತಿ, ಧರ್ಮ ನೋಡಿ ಎನ್ನುತ್ತಿದ್ದಾರೆ. ಇದು ಅಪಾಯಕಾರಿ ಎಂದು ಅವರು ಎಚ್ಚರಿಸಿದರು.

ಇಡೀ ನಮ್ಮ ಕುಟುಂಬವೇ ಕಾಂಗ್ರೆಸ್ ಪಕ್ಷ. ನಮ್ಮ ಮನೆಗೆ ಆರ್‌ ಎಸ್‌ಎಸ್ ಪುಸ್ತಕ ಬರುತ್ತದೆ. ಕಾಂಗ್ರೆಸ್ ನಿಲುವುಗಳ ಬಗ್ಗೆ ಇರುವ ಒಂದೇ ಒಂದು ಪುಸ್ತಕವನ್ನು ನಾವು ಜನರಿಗೆ ಕೊಡುತ್ತಿಲ್ಲ. ಕಾಂಗ್ರೆಸ್ ಬದ್ಧತೆ, ಜನಪರವಾದ ಕೆಲಸಗಳನ್ನು ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.

ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳನ್ನು ತಿಳಿಯಬೇಕು. ಮನೆ ಮನೆಗೆ ಅವರ ವಿಚಾರಗಳನ್ನು ತಲುಪಿಸಬೇಕು. ಡಾ. ಅಂಬೇಡ್ಕರ್ ಅವರು ಬರದಿದ್ದರೆ 500 ವರ್ಷಗಳಾದರೂ ಒಬ್ಬನೇ ಒಬ್ಬ ದಲಿತ, ಹಿಂದುಳಿದ ವರ್ಗಗಳ ವ್ಯಕ್ತಿ ಶಾಸಕನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ಸ್ವಾತಂತ್ರ್ಯ ಚಳವಳಿಗೆ ಗಾಂಧೀಜಿ ಪ್ರವೇಶಕ್ಕೂ ಮುನ್ನ ಹಿಂದೂ ಮಹಾಸಭಾ, ಮುಸ್ಲಿಂ ಲೀಗ್ ಸೇರಿ ಬೇರೆ ಬೇರೆ ಸಂಘಟನೆಗಳು ಬಿಡಿ ಬಿಡಿಯಾಗಿ ಹೋರಾಟ ಮಾಡುತ್ತಿದ್ದವು. ಸ್ವಾತಂತ್ರ್ಯ ಚಳವಳಿಗೆ ಎಲ್ಲಾ ಧರ್ಮ, ಜಾತಿಯ ಜನರನ್ನು ಸೇರಿಸಿದ್ದು ಗಾಂಧಿ. ಸಾರ್ವಕರ್ ಹಿಂಸೆ ಪ್ರಚೋದಿಸುತ್ತಾರೆ. ಅಹಿಂಸೆ ಆಧಾರದಿಂದಲೇ ಬೌದ್ಧ ಧರ್ಮ ಬೆಳೆಯಲಿಲ್ಲ ಎಂದು ಹೇಳಿದ್ದಾರೆ. ಆದರೆ, ಗಾಂಧೀಜಿ ಅಹಿಂಸಾ ಹೋರಾಟದಿಂದಲೇ ಭಾರತವನ್ನು ದಾಸ್ಯದಿಂದ ಬಿಡುಗಡೆ ಮಾಡಿದರು ಎಂದು ಅವರು ಹೇಳಿದರು.

ವಿದೇಶಗಳಲ್ಲಿ ಗಾಂಧೀಜಿಯನ್ನು ಗೌರವಿಸಲಾಗುತ್ತಿದೆ. 36 ಸಾವಿರಕ್ಕೂ ಅಧಿಕ ಪುಸ್ತಕಗಳು ಬಂದಿವೆ. 52 ನೊಬೆಲ್ ಪ್ರಶಸ್ತಿ ಪಡೆದವರು ಜಗತ್ತಿಗೆ ಗಾಂಧೀಜಿ ಅನಿವಾರ್ಯ ಎಂದು ಹೇಳಿದ್ದಾರೆ. ಮಹಾತ್ಮನ ಬಗ್ಗೆ ತಿಳಿಯದ ಪ್ರಧಾನಿ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಏನೇನೋ ಮಾತಾಡುತ್ತಾರೆ ಎಂದು ಅವರು ಕಿಡಿಕಾರಿದರು.

ಅಂತರ್ಜಾತಿ ವಿವಾಹಗಳಾಗದೇ ಜಾತಿ ವ್ಯವಸ್ಥೆ ನಿರ್ಮೂಲನೆಯಾಗುವುದಿಲ್ಲ ಎಂದು ಗಾಂಧೀಜಿ ನಂಬಿದ್ದರು. ಆಶ್ರಮದಲ್ಲಿ ಅಂತರ್ಜಾತಿ ವಿವಾಹಕ್ಕೆ ಮಾತ್ರ ಅವಕಾಶ ನೀಡಿದರು. ಅಲ್ಲದೇ ಅಂತರ್ಜಾತಿ ವಿವಾಹಗಳಲ್ಲಿ ಮಾತ್ರ ಭಾಗವಹಿಸುವುದಾಗಿ ಘೋಷಿಸಿದ್ದರು ಎಂದರು.

ಜಾತಿ ಬೇಡ ಎಂದರೆ ಇವತ್ತು ದೇಶದ್ರೋಹ ಎಂದು ಬಿಜೆಪಿ ಬಿಂಬಿಸುತ್ತಿದೆ. ಜಾತಿ ಇರಬೇಕು ಎಂದು ಬಿಜೆಪಿ ಆರ್ ಎಸ್ಎಸ್ ಹೇಳುತ್ತದೆ. ಅದನ್ನೇ ಅಂಬೇಡ್ಕರ್ ಅವರು ಪ್ರಬಲವಾಗಿ ವಿರೋಧಿಸಿ ಬಹಿರಂಗವಾಗಿ ಮನುಸ್ಮೃತಿಯನ್ನು ಸುಟ್ಟರು. ಒಕ್ಕೂಟ ವ್ಯವಸ್ಥೆಯನ್ನು ತೆಗೆದು ಹಾಕಬೇಕು ಎಂಬ ನಿಲುವು ಆರ್ ಎಸ್ಎಸ್ ಮತ್ತು ಬಿಜೆಪಿಯದ್ದು. ಮುಸ್ಲಿಂ ಮತ್ತು ಕ್ರೈಸ್ತರನ್ನು ಬೈದರೆ ಬಿಜೆಪಿಯಲ್ಲಿ ಸೀಟು ಹಾಗೂ ವೋಟ್ ಸಿಗುತ್ತದೆ ಎಂದು ಅವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ, ಅವರು ಸಂಘಟನೆ ಮಾಡಲು ಹೆಚ್ಚು ಕಷ್ಟಪಡುತಿಲ್ಲ, ಬರಿ ಬಯ್ಯುವುದೇ ಅವರ ಕೆಲಸ ಎಂದು ಅವರು ಕುಟುಕಿದರು.

ಇದೇ ವೇಳೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದನ್ ಕುಮಾರ್ ಅವರು ಐದು ಮಂದಿ ಹಿರಿಯ ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ ಸಂಸ್ಥಾಪನ ದಿನದ ಅಂಗವಾಗಿ ಗೌರವಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ ಕುಮಾರ್, ಶಾಸಕರಾದ ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ಮುಖಂಡರಾದ ಪುಷ್ಪಲತಾ ಚಿಕ್ಕಣ್ಣ, ಲತಾ ಸಿದ್ದಶೆಟ್ಟಿ, ಈಶ್ವರ್ ಚಕ್ಕಡಿ, ಶಿವಪ್ರಸಾದ್, ಎಡತಲೆ ಮಂಜುನಾಥ್, ತಲಕಾಡು ಮಂಜುನಾಥ್, ಶಾಮ ಯೋಗೀಶ್, ಎಂ.ಕೆ. ಅಶೋಕ್, ಮೋದಾಮಣಿ, ರವಿ ಮಂಚೇಗೌಡನ ಕೊಪ್ಪಲು, ಮೋಹನ್, ರಮೇಶ್, ಸೋಮಶೇಖರ್ ಮೊದಲಾದವರು ಇದ್ದರು.

----

ಕೋಟ್...

ದೇಶದಲ್ಲಿ ಓದಿದವರೇ ಹೆಚ್ಚು ಅಪಾಯಕಾರಿಯಾಗಿದ್ದಾರೆ. 3- 4 ಪದವಿ ಪಡೆದವರೂ ಮಾನವೀಯತೆ ವಿಷಯದಲ್ಲಿ ಏನೇನು ಕಲಿತಿಲ್ಲ. ಬುದ್ಧಿವಂತರೆನಿಸಿಕೊಂಡವರು ಕೂಲಿ ಕೆಲಸ ಮಾಡುವವರಿಂದ ದೇಶ ಹಾಳಾಯಿತೆಂದು ಟೀಕೆ ಮಾಡುತ್ತಾರೆ. ದೇಶದಲ್ಲಿ ಇವತ್ತಿಗೂ 40 ಕೋಟಿ ಬಡವರಿದ್ದಾರೆ. ಎಲ್ಲರಿಗೂ ಶಿಕ್ಷಣ ದೊರೆತಿದೆ. ಉದ್ಯೋಗ ಕೊಡಲು ಸಾಧ್ಯವಾಗಿಲ್ಲ. ಇದು ದೇಶದ ವಿವಿಧ ಸಮಸ್ಯೆಗಳಿಗೆ ಕಾರಣವಾಗಿದೆ.

- ಕಿಮ್ಮನೆ ರತ್ನಾಕರ, ಮಾಜಿ ಸಚಿವ