ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಕಳೆದ 5 ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 141 ಮಂದಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಮುಳುಗಿ ಮೃತಪಟ್ಟಿದ್ದಾರೆ. ಇದು ಆತಂಕಕಾರಿ ವಿಷಯ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮೀನುಗಾರರು ಜೀವರಕ್ಷಕ ಸಾಧನಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿನಂತಿಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮೀನುಗಾರಿಕೆಯಲ್ಲಿ ಜೀವರಕ್ಷಕ ಸಾಧನಗಳ ಪ್ರಾಮುಖ್ಯತೆ ಬಗ್ಗೆ ಮೀನುಗಾರರಲ್ಲಿ ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ, ಜೀವರಕ್ಷಕ ಸಾಧನಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಮೀನುಗಾರರು ತಮ್ಮನ್ನು ಅವಲಂಭಿಸಿರುವ ಕುಟುಂಬದ ಉದರಪೋಷಣೆಗಾಗಿ ಜೀವದ ಹಂಗು ಬಿಟ್ಟು ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದು ಅನಿವಾರ್ಯವಾಗಿದೆ. ಅನೇಕ ಬಾರಿ ಸಮುದ್ರದಲ್ಲಿ ಹವಾಮಾನದ ವೈಪರೀತ್ಯದ ಬಗ್ಗೆ ಮುನ್ಸೂಚನೆ ನೀಡಿದರೂ ಮೀನುಗಾರರು ಸಮುದ್ರಕ್ಕೆ ತೆರಳುತ್ತೀರಿ, ಜೀವರಕ್ಷಕ ಸಾಧನೆಗಳನ್ನೂ ಬಳಸುವುದಿಲ್ಲ. ಆದರೆ ಅವಘಡವಾದರೆ ನಿಮ್ಮನ್ನೇ ಅಲವಂಭಿಸಿರುವ ಕುಟುಂಬ ಬೀದಿ ಪಾಲಾಗುತ್ತದೆ ಎಂಬುದನ್ನು ಮರೆಯಬೇಡಿ. ಈ ಕಾರಣಕ್ಕಾಗಿಯೇ ಸರ್ಕಾರ ಜೀವರಕ್ಷಕ ಸಾಧನಗಳ ನೀಡುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಇನ್ನಾದರೂ ನಿಮ್ಮ ಜೀವವನ್ನು ಮತ್ತು ನಿಮ್ಮ ಕುಟುಂಬಗಳನ್ನೂ ಉಳಿಸಿಕೊಳ್ಳಿ ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 95 ಕಿ.ಮೀ. ಉದ್ದದ ಸಮುದ್ರತೀರ ಇದೆ. 2114 ಯಾಂತ್ರಿಕ ದೋಣಿಗಳು, 5510 ನಾಡದೋಣಿಗಳು, 2044 ಪಾತಿ ದೋಣಿಗಳು ಮೀನುಗಾರಿಕೆ ನಡೆಸುತ್ತವೆ. ಲಕ್ಷಕ್ಕೂ ಅಧಿಕ ಮಂದಿ ತಮ್ಮ ಕುಲಕಸುಬಾದ ಮೀನುಗಾರಿಕೆ ನಡೆಸುತ್ತಾರೆ. ಕಳೆದ 5 ವರ್ಷಗಳಲ್ಲಿ 141 ಮಂದಿ ಮೀನುಗಾರರು ಸಮುದ್ರಕ್ಕೆ ಬಲಿಯಾಗಿದ್ದಾರೆ.
ಇನ್ನು ಮುಂದೆ ಹೀಗಾಗಬಾರದು ಈ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೀನುಗಾರಿಕಾ ಇಲಾಖೆಯ ಜಂಟಿ ಉಪನಿರ್ದೇಶಕ ವಿವೇಕ್ ಆರ್. ಸ್ವಾಗತಿಸಿದರು. ವೇದಿಕೆಯಲ್ಲಿ ಎಸ್ಪಿ ಹರಿರಾಮ್ ಶಂಕರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್, ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಊಡಾ ಅಧ್ಯಕ್ಷ ದಿನಕರ್ ಹೆರೂರು, ಮೀನುಗಾರಿಕಾ ಇಲಾಖೆಯ ಮೀನುಗಾರ ಸಂಕಷ್ಟ ನಿಧಿ ಸಮಿತಿ ಸದಸ್ಯ ಮದನ್ ಕುಮಾರ್ ಉಪಸ್ಥಿತರಿದ್ದರು.