ಜ.25 ರಂದು 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ: ಜಿಪಂ ಸಿಇಒ ಕೆ.ಎಂ. ಗಾಯತ್ರಿ

| Published : Jan 19 2024, 01:45 AM IST

ಜ.25 ರಂದು 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ: ಜಿಪಂ ಸಿಇಒ ಕೆ.ಎಂ. ಗಾಯತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಮತದಾರರ ದಿನಾಚರಣೆಯು ಜ. 25 ರಂದು ಕಲಾಮಂದಿರದಲ್ಲಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಈ ಬಾರಿಯ ಮತದಾರರ ದಿನ ವಿಶೇಷವಾಗಿರಲಿದೆ. ದಿನಾಚರಣೆ ಅರ್ಥಪೂರ್ಣವಾಗಿರುವುದರೊಂದಿಗೆ ಯುವ ಮತದಾರರಲ್ಲಿ ಮತದಾನದ ಬಗೆಗೆ ಹುಮ್ಮಸ್ಸು ಹಾಗೂ ಜಾಗೃತಿ ಮೂಡಿಸುವಂತಿರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರೀಯ ಮತದಾರರ ದಿನಾಚರಣೆಯು ಜ. 25 ರಂದು ಕಲಾಮಂದಿರದಲ್ಲಿ ನಡೆಯಲಿದೆ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ಹೇಳಿದರು.

ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಸಮಿತಿಯ ಮತದಾರರ ದಿನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ ಈ ಬಾರಿಯ ಮತದಾರರ ದಿನ ವಿಶೇಷವಾಗಿರಲಿದೆ. ದಿನಾಚರಣೆ ಅರ್ಥಪೂರ್ಣವಾಗಿರುವುದರೊಂದಿಗೆ ಯುವ ಮತದಾರರಲ್ಲಿ ಮತದಾನದ ಬಗೆಗೆ ಹುಮ್ಮಸ್ಸು ಹಾಗೂ ಜಾಗೃತಿ ಮೂಡಿಸುವಂತಿರಬೇಕು ಎಂದರು.

ಅಂದು ಬೆಳಗ್ಗೆ 10 ಗಂಟೆಗೆ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿ ಹಾಗೂ ಚುನಾವಣಾ ರಾಯಭಾರಿಗಳಾದ ಜಾವಗಲ್ ಶ್ರೀನಾಥ್, ಪೊಲೀಸ್ ಆಯುಕ್ತರು ಹಾಗೂ ಚುನಾವಣಾ ಐಕಾನ್ ಗಳನ್ನು ಆಹ್ವಾನಿಸಲಾಗುವುದು. ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸುವುದಾಗಿ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮತದಾನದ ಜಾಗೃತಿಯ ಬಗೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ನವ ಮತದಾರರಿಗೆ ಬಹುಮಾನ ವಿತರಿಸಲಾಗುವುದು.

ಹೊಸದಾಗಿ ನೋಂದಾಯಿಸಿಕೊಂಡಿರುವ ಯುವ ಮತದಾರರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ನೀಡಲಾಗುವುದು ಮತ್ತು ಅಂಚೆ ಮತಪತ್ರ ಸೌಲಭ್ಯ ಕಲ್ಪಿಸಲಾಗುವುದು. ಶಾಲಾ ಹಂತ,ಮತಗಟ್ಟೆ ವ್ಯಾಪ್ತಿ ಹಾಗೂ ತಾಲೂಕು ಹಂತದಲ್ಲಿಯೂ ಕಾರ್ಯಕ್ರಮ ನಡೆಯಬೇಕು. ಹಿರಿಯ ನಾಗರೀಕರು, ವಿಶೇಷಚೇತನರು, ದುರ್ಬಲ ವರ್ಗದವರು, ತೃತೀಯ ಲಿಂಗಿಗಳು ಹೆಚ್ಚು ಮತದಾನ ಮಾಡುವಂತೆ ಪ್ರೇರೇಪಿಸುವಂತಹ ಕಾರ್ಯಕ್ರಮ ಆಯೋಜಿಸಬೇಕು ಎಂದರು.

ಕಾರ್ಯಕ್ರಮದ ಯಶಸ್ಸಿಗೆ ಎನ್.ಸಿ.ಸಿ, ಎನ್.ಎಸ್.ಎಸ್, ವೈದ್ಯಕೀಯ ಕಾಲೇಜು, ಎಂಜನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಚುನಾವಣಾ ಸಾಕ್ಷರತಾ ಕ್ಲಬ್ಗಳ ಸದಸ್ಯರು, ಪ್ಯಾರಾಮೆಡಿಕಲ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ತೊಡಗಿಸಿಕೊಂಡು ಕಾರ್ಯಕ್ರಮ ಯಶಸುಗೊಳಿಸಬೇಕು ಎಂದು ಅವರು ಹೇಳಿದರು.

ನಗರದ ಪ್ರಮುಖ ವೃತ್ತಗಳಲ್ಲಿ ಬ್ಯಾನರ್, ಪೋಸ್ಟರ್ಸ್, ರೇಡಿಯೋ ಜಾಕಿಗಳ ಮೂಲಕ ಹೆಚ್ಚು ಪ್ರಚಾರ ನೀಡುವುದರೊಂದಿಗೆ ವಿವಿಧ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.

ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಅರ್ಶಾದ್ ಉಲ್ಲಾ ರೆಹಮಾನ್‌ ಷರೀಫ್, ಉಪ ಆಯುಕ್ತ ಸೋಮಶೇಖರ್, ತೋಟಗಾರಿಕೆ ಇಲಾಖೆಯ ಶಾಂತಾ, ಚುನಾವಣಾ ಶಿರಸ್ತೇದಾರ್ ಸುರೇಶ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.