ಮಲಪ್ರಭೆಗೆ 15 ಸಾವಿರ ಕ್ಯುಸೆಕ್‌ ನೀರುನದಿ ಪಾತ್ರದ ಗ್ರಾಮಗಳಲ್ಲಿ ಹೆಚ್ಚಿದ ಆತಂಕ

| Published : Aug 28 2024, 12:54 AM IST

ಸಾರಾಂಶ

ನರಗುಂದ ತಾಲೂಕಿನ ಮಲಪ್ರಭಾ ನದಿ ತೀರದ ಗ್ರಾಮಗಳಲ್ಲಿ ತೀವ್ರ ಪ್ರವಾಹ ಭೀತಿ

ನರಗುಂದ: ಉತ್ತರ ಕರ್ನಾಟಕದ ಜೀವನಾಡಿ ಮಲಪ್ರಭಾ ನದಿಗೆ ಅಡ್ಡವಾಗಿ ನಿರ್ಮಿಸಿರುವ ನವಿಲುತೀರ್ಥ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಮಲಪ್ರಭಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದ 10 ಸಾವಿರಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹೊರ ಬಿಡಲಾಗಿದೆ.

ಸಧ್ಯ ಒಳ ಹರಿವಿನ ಪ್ರಮಾಣ ಪ್ರತಿ ತಾಸಿಗೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿ ಪಾತ್ರಕ್ಕೆ 15 ಸಾವಿರ ಕ್ಯುಸೆಕ್‌ ನಷ್ಟು ನೀರನ್ನು ಹರಿಸುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಮಲಪ್ರಭಾ ನದಿ ತೀರದ ಗ್ರಾಮಗಳಲ್ಲಿ ತೀವ್ರ ಪ್ರವಾಹ ಭೀತಿ ಸೃಷ್ಠಿಯಾಗಿದೆ.

ಸದ್ಯ ಜಲಾಶಯಕ್ಕೆ 10ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಮಂಗಳವಾರ ಮಧ್ಯಾಹ್ನದವರೆಗೂ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿತ್ತು. ಈಗಾಗಲೇ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಒಳಹರಿವಿನಷ್ಟೇ ನೀರನ್ನು ನದಿ ಪಾತ್ರಕ್ಕೆ ಹರಿಸುವ ಅನಿವಾರ್ಯತೆ ಎದುರಾಗಿದೆ.

ಮಂಗಳವಾರ ರಾತ್ರಿ 7.45 ರ ವೇಳೆಗೆ ನದಿಗೆ ಹರಿಸುವ ನೀರಿನ ಪ್ರಮಾಣವನ್ನು 15 ಸಾವಿರ ಕ್ಯುಸೆಕ್‌ ಗೆ ಹೆಚ್ಚಿಸಲಾಗಿದ್ದು. ನದಿ ಪಕ್ಕದ ಗ್ರಾಮಗಳಿಗೆ ಬುಧವಾರ ಬೆಳಗಿನ ಜಾವದ ವೇಳೆಗೆ ನೀರು ತಲುಪುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಾಲೂಕಿನ ನದಿ ಪಕ್ಕದ ಗ್ರಾಮಗಳಾದ ಲಖಮಾಪೂರ, ಬೆಳ್ಳೇರಿ, ವಾಸನ, ಕೊಣ್ಣೂರ, ಬೂದಿಹಾಳ, ಕಪ್ಪಲಿ, ಕೊಲ್ಲಾಪುರ, ಶಿರೋಳ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟ ಮಾಹಿತಿ ಬಂದ ತಕ್ಷಣ ತಾಲೂಕಿನ ಎಲ್ಲ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿ ಹಾಗೂ ವಾಲೀಕಾರರ ಮೂಲಕ ನದಿಗೆ ಹೆಚ್ಚುವರಿ ನೀರು ಬರುವುದನ್ನು ತಿಳಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ ಎಂದು ನರಗುಂದ ತಹಸೀಲ್ದಾರ್‌ ಶ್ರೀಶೈಲ ತಳವಾರ ತಿಳಿಸಿದ್ದಾರೆ.