ಗ್ರಾಮ ಪಂಚಾಯತ್ ಸ್ವಂತ ನಿಧಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಮೀಸಲಿಟ್ಟಿರುವ ಶೇ.25 ಅನುದಾನ ಬಳಕೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನವನ್ನು ತ್ವರಿತವಾಗಿ ಬಿಡುಗಡೆ

ಮಂಗಳೂರು: ಗ್ರಾಮ ಪಂಚಾಯತ್ ಸ್ವಂತ ನಿಧಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಮೀಸಲಿಟ್ಟಿರುವ ಶೇ.25 ಅನುದಾನ ಬಳಕೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನವನ್ನು ತ್ವರಿತವಾಗಿ ಬಿಡುಗಡೆಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಪಂಚಾಯತ್ ರಾಜ್) ಕಾರ್ಯದರ್ಶಿಗಳಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮನವಿ ಸಲ್ಲಿಸಿದ್ದಾರೆ.

ಗ್ರಾಮ ಪಂಚಾಯತ್‌ಗಳ ಸ್ವಂತ ನಿಧಿಯಲ್ಲಿ ಶೇ.25 ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಕುರಿತು ಜಾರಿಯಲ್ಲಿರುವ ಮಾರ್ಗಸೂಚಿಗಳು 2015ರ ಸುತ್ತೋಲೆಯ ಆಧಾರದಲ್ಲಿದ್ದು, ಇವುಗಳು ಇಂದಿನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗೆ ಹೊಂದಿಕೆಯಾಗದಂತಾಗಿವೆ ಎಂದು ಶಾಸಕರು ತಮ್ಮ ಮನವಿಯಲ್ಲಿ ಸ್ಪಷ್ಟಪಡಿಸಿದರು. ಹಳೆಯ ಮಾರ್ಗಸೂಚಿಗಳಿಂದಾಗಿ ಗ್ರಾಮ ಪಂಚಾಯತ್‌ಗಳಿಗೆ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗೂ ಫಲಾನುಭವಿಗಳಿಗೆ ತಲುಪಬೇಕಾದ ಸೌಲಭ್ಯಗಳು ವಿಳಂಬವಾಗುತ್ತಿವೆ ಎಂಬುದನ್ನೂ ಅವರು ಗಮನಕ್ಕೆ ತಂದರು.ಅಲ್ಲದೆ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಕಾರ್ಯಗಳಿಗೆ ಅತ್ಯಂತ ಮಹತ್ವದಾದ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ವಿಳಂಬವಾಗುತ್ತಿರುವುದರಿಂದ ಅನೇಕ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿರುವ ಸ್ಥಿತಿಯಿದೆ ಎಂದು ಶಾಸಕರು ವಿವರಿಸಿದರು. ಆದ್ದರಿಂದ ಗ್ರಾಮ ಪಂಚಾಯತ್‌ಗಳಿಗೆ ಅಗತ್ಯವಾದ ಆರ್ಥಿಕ ಬಲ ಒದಗಿಸುವ ನಿಟ್ಟಿನಲ್ಲಿ ಈ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಅವರು ಒತ್ತಾಯಿಸಿದರು.

ಶಾಸಕರ ಮನವಿಗೆ ಪೂರಕವಾಗಿ ಸ್ಪಂದಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ರಂದೀಪ್ ಅವರು, ಶೇ.25 ಅನುದಾನ ಬಳಕೆಗೆ ಸಂಬಂಧಿಸಿದ 2015ರ ಸುತ್ತೋಲೆಯನ್ನು ತಕ್ಷಣವೇ ಪರಿಶೀಲಿಸಿ, ಇಂದಿನ ಕಾಲಕ್ಕೆ ಅನುಗುಣವಾಗಿ ಪರಿಷ್ಕರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಜೊತೆಗೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಕುರಿತಾಗಿಯೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಗ್ರಾಮ ಪಂಚಾಯತ್‌ಗಳ ಕಾರ್ಯಕ್ಷಮತೆ ಹೆಚ್ಚಿಸಲು ಹಾಗೂ ಪರಿಶಿಷ್ಟ ಜಾತಿ-ಪಂಗಡದ ಜನರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುವಂತೆ ಮಾಡಲು ಈ ಪರಿಷ್ಕರಣೆ ಅತ್ಯಂತ ಅಗತ್ಯವಾಗಿದ್ದು, ಸರ್ಕಾರ ಈ ದಿಸೆಯಲ್ಲಿ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.