ಸಾರಾಂಶ
ಕಮಲಾಪುರ ಪಟ್ಟಣದ ಪುರಸಭೆ ವ್ಯಾಪ್ತಿಯ 21 ವಾರ್ಡ್ ಗಳಿಗೆ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಗೆ ₹15 ಕೋಟಿ ಬಿಡುಗಡೆ ಮಾಡಲಾಗಿದೆ
ಹೊಸಪೇಟೆ: ಕಮಲಾಪುರ ಪಟ್ಟಣದ ಪುರಸಭೆ ವ್ಯಾಪ್ತಿಯ 21 ವಾರ್ಡ್ ಗಳಿಗೆ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಗೆ ₹15 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ತಾಲೂಕಿನ ಕಮಲಾಪುರ ಪುರಸಭೆ ಆವರಣದಲ್ಲಿ ನೂತನವಾಗಿ ₹1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪುರಸಭೆ ಕಚೇರಿಯ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಶುಕ್ರವಾರ ಅವರು ಮಾತನಾಡಿದರು. ಕಮಲಾಪುರದ ಪ್ರತಿ ವಾರ್ಡ್ ಗಳಲ್ಲಿ ಸಿಸಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಡಿ ಮಾಸಾಂತ್ಯದೊಳಗೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕಮಲಾಪುರ ಪುರಸಭೆ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಮಾಜಿ ಶಾಸಕ ಆನಂದ ಸಿಂಗ್ ಬಹಳಷ್ಟು ಆದ್ಯತೆ ನೀಡಿದ್ದಾರೆ. ವಿಶ್ವವಿಖ್ಯಾತ ಪಾರಂಪರಿಕ ತಾಣವಾದ ಹಂಪಿ ವೀಕ್ಷಣೆಗೆ ಹೆಚ್ಚು ಪ್ರವಾಸಿಗರು ಆಗಮಿಸುವ ನಿಟ್ಟಿನಲ್ಲಿ ಕಮಲಾಪುರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಈ ಭಾಗದ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.ಪುರಸಭೆಯ ಎಲ್ಲ ಜನಪ್ರತಿನಿಧಿಗಳು ಕಮಲಾಪುರದ ಅಗತ್ಯತೆ ಬಗ್ಗೆ ಕಾಳಜಿ ವಹಿಸಿದ್ದಾರೆ. ಕಮಲಾಪುರ ಬಸ್ ನಿಲ್ದಾಣದ ಅಭಿವೃದ್ಧಿಗೆ ಅನುದಾನ ಲಭ್ಯತೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಸ್ಥಳೀಯ ನಿವಾಸಿಗಳಿಗೆ ಬದುಕು ಕಟ್ಟಿಕೊಳ್ಳಲು ಅವಕಾಶಗಳನ್ನು ಕಲ್ಪಿಸಬೇಕಿದೆ. ಹಳೇ ಬಸ್ ನಿಲ್ದಾಣ ಆವರಣದಲ್ಲಿ ಫುಡ್‌ಕೋರ್ಟ್ ನಿರ್ಮಾಣಕ್ಕೆ ₹10 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಹಂಪಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆಯಿಂದ ಕೆಲ ಅನುಮತಿಗಳು ಸಿಗಬೇಕಿದೆ. ಶೀಘ್ರದಲ್ಲಿ ಚಾಲನೆ ನೀಡಲು ಕ್ರಮ ವಹಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಆರ್ಥಿಕ ಅಭಿವೃದ್ಧಿಗೆ ಹೊಟೇಲ್‌ಗಳು, ವ್ಯಾಪಾರ ಅಭಿವೃದ್ಧಿಗೆ ಅಗತ್ಯ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ. ಸ್ಥಳೀಯ ಪುರಸಭೆ ಸದಸ್ಯರಿಗೆ ಸದಾ ಸಹಕಾರ ಇರಲಿದೆ ಎಂದರು.ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, 2022-23ನೇ ಸಾಲಿನ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಹಂತ-4ರಲ್ಲಿ ಮಂಜೂರಾದ ಕಮಲಾಪುರ ಪುರಸಭೆ ನೂತನ ಕಟ್ಟಡ ಕಚೇರಿ ನಿರ್ಮಾಣಕ್ಕೆ ₹1.80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವುದು ಆಡಳಿತಾತ್ಮಕ ಕಾರ್ಯಗಳಿಗೆ ಸಹಕಾರಿಯಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಸ್ಥಳೀಯರ ಕುಂದುಕೊರತೆಗಳಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು. ನೂತನ ಪುರಸಭೆ ಕಚೇರಿ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಸಂಸದ ಈ.ತುಕಾರಾಂ, ಶಾಸಕಿ ಅನ್ನಪೂರ್ಣ, ಎಸ್ಪಿ ಎಸ್.ಜಾಹ್ನವಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಪುರಸಭೆ ಅಧ್ಯಕ್ಷೆ ಅಮೀನಾ, ಉಪಾಧ್ಯಕ್ಷ ಎಚ್.ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯಕುಮಾರ್, ಸದಸ್ಯರಾದ ರಾಜ, ಸೈಯದ್ ಅಮಾನುಲ್ಲಾ, ಜಿ.ಅನ್ವರ್, ಕೆ.ವಿ.ಸರಿತಾ, ಮುಕ್ತಿಯಾರ್ ಪಾಷಾ, ಪಿ.ರವಿಕುಮಾರ್, ಪಾರ್ವತಿ, ಪಾಲಯ್ಯ, ಬಿ.ಕಿಶೋರ್ ಕುಮಾರ, ಗೌಸಿಯಾ ಬೇಗಂ, ಮಮತಾ, ಈಶ್ವರಮ್ಮ, ಬೋರಮ್ಮ, ರಾಮಸ್ವಾಮಿ ಮಾಳಗಿ, ಎಂ.ಲಿಂಗಪ್ಪ, ಎನ್.ಗಂಗಮ್ಮ, ಜ್ಯೋತಿಬಾಯಿ. ನಾಮನಿರ್ದೇಶಿತ ಸದಸ್ಯರಾದ ಕನ್ನೇಶ್ವರ, ಟಿ.ಚಾಂದ್ ಬಾಷಾ, ಜೆ.ಚೆನ್ನಪ್ಪ, ಎಂ.ಜಂಬಯ್ಯ, ಕೆ.ಸೋಮಶೇಖರ್, ಮಾಜಿ ಅಧ್ಯಕ್ಷರಾದ ದೇಸಾಯಿ ಗೂಂಡುರಾವ್, ಜಿಲ್ಲಾ ಕೆಡಿಪಿ ಸದಸ್ಯ ಕಾಳಪ್ಪ, ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಎಂ.ಎಸ್.ಮನೋಹರ್, ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ ಭಾಗವಹಿಸಿದ್ದರು.