ಸಾರಾಂಶ
Adequate facilities, education and treatment will be provided by the government to the endosulfan beneficiaries of the state. They should not have any trouble
ಭಟ್ಕಳ:
ಎಂಡೋಸಲ್ಫಾನ್ ಫಲಾನುಭವಿಗಳಿಗೆ ಮಂಕಿಯಲ್ಲಿ ಸರ್ಕಾರದಿಂದ ₹ 15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಎಂಡೋಸಲ್ಫಾನ್ ಫಲಾನುಭವಿಗಳ ಗುರುತಿಸುವಿಕೆ ಮತ್ತು ಅವರಿಗೆ ತಜ್ಞ ವೈದ್ಯರಿಂದ ಸೂಕ್ತ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಟ್ಕಳದಲ್ಲಿ ಎಂಡೋಸಲ್ಫಾನ್ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಮತ್ತು ಚಿಕಿತ್ಸೆಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ಬೆಳಕೆಯಲ್ಲಿ ಸರ್ಕಾರದಿಂದ ಆರೈಕೆ ಕೇಂದ್ರ ಮಂಜೂರು ಮಾಡಿಸಿಕೊಂಡು ಬರಲು ಪ್ರಯತ್ನಿಸಿದ್ದೆ. ಆದರೆ ಅಂದು ಆಗಿರಲಿಲ್ಲ. ಇದೀಗ ನನಗೆ ಅವಕಾಶ ಸಿಕ್ಕಿದ್ದು ಮಂಕಿಯಲ್ಲಿ ಎಂಡೋಸಲ್ಫಾನ್ ಫಲಾನುಭವಿಗಳು ಮತ್ತು ಅವರ ಪಾಲಕರಿಗಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದರು.ತಾಲೂಕು, ಜಿಲ್ಲೆ, ರಾಜ್ಯದ ಎಂಡೋಸಲ್ಫಾನ್ ಫಲಾನುಭವಿಗಳಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ, ಶಿಕ್ಷಣ ಮತ್ತು ಚಿಕಿತ್ಸೆ ದೊರಕಿಸಿಕೊಡಲಾಗುವುದು. ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಹೇಳಿದರು. ಎಂಡೋಸಲ್ಫಾನ್ ಮೇಲ್ವಿಚಾರಕ ಡಾ. ಸತೀಶ ಶೇಟ್ ಉಪನ್ಯಾಸ ನೀಡಿದರು. ಡಿಎಚ್‌ಒ ಡಾ. ನೀರಜ್, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ, ತಹಸೀಲ್ದಾರ್ ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಎಂಡೋಸಲ್ಫಾನ್ ಫಲಾನುಭವಿಗಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಯಿತು.