ಗ್ಯಾರಂಟಿಗಳಿಂದ ಫಲಾನುಭವಿಗಳಿಗೆ ಪ್ರತಿ ತಿಂಗಳು 15 ಕೋಟಿ ಸಂದಾಯ: ಮೂಡ್ಲೀಗೌಡ

| Published : Nov 29 2024, 01:01 AM IST

ಗ್ಯಾರಂಟಿಗಳಿಂದ ಫಲಾನುಭವಿಗಳಿಗೆ ಪ್ರತಿ ತಿಂಗಳು 15 ಕೋಟಿ ಸಂದಾಯ: ಮೂಡ್ಲೀಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರೊಂದಿಗೆ ಇಲಾಖೆಯ ಸಿಬ್ಬಂದಿ ಸಹನೆಯಿಂದ ನಡೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಆಗಮಿಸುವ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಾರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಿಂದ ತಾಲೂಕಿನ ಫಲಾನುಭವಿಗಳಿಗೆ ಪ್ರತಿ ತಿಂಗಳು 15 ಕೋಟಿ ರು.ಗೂ ಹೆಚ್ಚು ಹಣ ಸಂದಾಯವಾಗುತ್ತಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೂತನ ಅಧ್ಯಕ್ಷ ಮೂಡ್ಲೀಗೌಡ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಎಲ್ಲ ವರ್ಗಗಳ ಬಡಜನರಿಗಾಗಿ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದು ಎಲ್ಲರಿಗೂ ತಲುಪುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ 46 ಸಾವಿರಕ್ಕೂ ಹೆಚ್ಚು ಕುಟುಂಬಗಳ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಪ್ರತಿ ತಿಂಗಳು 89.66 ಕೋಟಿ ರು. ಹಣ ಜಿಲ್ಲೆಯ ಮಹಿಳೆಯರಿಗೆ ತಲುಪುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ ಮಾತನಾಡಿ, ಶಕ್ತಿ ಯೋಜನೆಯಲ್ಲಿ ನಾಗಮಂಗಲ ಘಟಕದ ಸಾರಿಗೆ ಬಸ್‌ಗಳಲ್ಲಿ 1.8 ಕೋಟಿ ರು. ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದ ಇಲಾಖೆಗೆ 31.66 ಲಕ್ಷ ರು. ಲಾಭ ಬಂದಿದೆ ಎಂದರು.

ಪ್ರಯಾಣಿಕರ ಅನುಕೂಲಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ನಾಗಮಂಗಲ ಘಟಕಕ್ಕೆ 9 ಹೊಸ ಬಸ್‌ಗಳನ್ನು ಕೊಡಿಸಿದ್ದಾರೆ. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಎಲ್ಲಾ ಚಾಲಕರು ಮತ್ತು ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಗೃಹ ಜ್ಯೋತಿ ಯೋಜನೆಯಡಿ 53 ಸಾವಿರಕ್ಕೂ ಹೆಚ್ಚು ಗ್ರಾಹಕರು ಯೋಜನೆ ಲಾಭ ಪಡೆಯುತ್ತಿದ್ದಾರೆ. ಒಂದು ತಿಂಗಳಲ್ಲಿ 19 ಲಕ್ಷ ಯೂನಿಟ್ ವಿದ್ಯುತ್ ಉಚಿತವಾಗಿ ತಾಲೂಕಿನ ಗ್ರಾಹಕರಿಗೆ ಲಭ್ಯವಾಗುತ್ತಿದೆ ಎಂದು ಸೆಸ್ಕಾಂ ನಾಗಮಂಗಲ ಮತ್ತು ಬೆಳ್ಳೂರು ಉಪ ವಿಭಾಗಗಳ ಎಇಇಗಳಾದ ಮಹದೇವ್ ಮತ್ತು ತಿಲಕ್ ಮಾಹಿತಿ ನೀಡಿದರು.

ಅನ್ನ ಭಾಗ್ಯ ಯೋಜನೆಯಡಿ ತಾಲೂಕಿನ 45,122 ಪಡಿತರ ಚೀಟಿದಾರರಿಗೆ ಒಟ್ಟು 2.62 ಕೋಟಿ ರು. ಹಣ ಪ್ರತಿ ತಿಂಗಳು ಸಂದಾಯವಾಗುತ್ತಿದೆ ಎಂದು ಆಹಾರ ನಿರೀಕ್ಷಕ ಅನಿಲ್ ಕುಮಾರ್ ಮಾಹಿತಿ ನೀಡಿದರು.

ಸಮಿತಿ ಸದಸ್ಯೆ ನೀಲಾ ಶಿವಮೂರ್ತಿ ಮಾತನಾಡಿ, ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರೊಂದಿಗೆ ಇಲಾಖೆಯ ಸಿಬ್ಬಂದಿ ಸಹನೆಯಿಂದ ನಡೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಆಗಮಿಸುವ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಾರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿರುವ ಅರ್ಹ ಫಲಾನಭವಿಗಳನ್ನು ಗುರುತಿಸಿ, ಅವರಿಗೆ ಯೋಜನೆಯ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ತಾಪಂ ಇಒ ಸತೀಶ್ ಮಾತನಾಡಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್, ಸಮಿತಿಯ ಸದಸ್ಯರಾದ ಎ.ಎನ್.ದಿನೇಶ್, ರವಿಕಾಂತೇಗೌಡ, ವಿನಯ್‌ಗೌಡ, ಶ್ರೀಧರ್, ಬಾಲಕೃಷ್ಣ, ಮಹಮ್ಮದ್ ಯಾಸಿನ್, ಪಿ.ಗೀತಾ, ನವೀನ್, ತಮ್ಮಣ್ಣಗೌಡ, ಸಿ.ಎನ್.ರಾಘವೇಂದ್ರ, ಸಿ.ಧನರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.