- ಸರ್ಕಾರಿ ನೌಕರಿ ಆಮಿಷವೊಡ್ಡಿದ ಚನ್ನಗಿರಿಯ ನಾಲ್ವರಿಂದ ₹50-₹60 ಕೋಟಿ ವಂಚನೆ: ಚಿನ್ನಸಮುದ್ರ ಶೇಖರ ನಾಯ್ಕ

- - - - ಬೆಸ್ಕಾಂ, ಆರ್‌ಡಿಪಿಆರ್, ಅಬಕಾರಿ ಇನ್ನಿತರ ಇಲಾಖೆಗಳ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ನೀಡಿದ್ದ ವಂಚಕರು

- ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಸಿಪಿಐ ರವೀಶ್, ಕೆಲ ಸಿಬ್ಬಂದಿ ದೂರುದಾರರಿಗೆ ಏಕೆ ನ್ಯಾಯ ಕೊಡಿಸುತ್ತಿಲ್ಲ?

- ರೈತ ಸಂಘ, ಹಸಿರು ಸೇನೆ, ರಾಜ್ಯ ರೈತಮಿತ್ರ ಸಂಘದಿಂದ ಡಿಸಿ ಕಚೇರಿ, ಜಿಲ್ಲಾ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ಎಚ್ಚರಿಕೆ

- - -


ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರಿ ನೌಕರಿ ಕೊಡಿಸುವುದಾಗಿ ನೂರಾರು ನಿರುದ್ಯೋಗಿಗಳಿಗೆ ಸುಮಾರು ₹50-₹60 ಕೋಟಿಗಳನ್ನು ವಂಚಿಸಿರುವ ಚನ್ನಗಿರಿ ತಾಲೂಕಿನ ಹಿರೇಉಡ ತಾಂಡಾದ ನಾಲ್ವರ ವಿರುದ್ಧ 15 ದಿನದಲ್ಲೇ ಕ್ರಮ ಕೈಗೊಂಡು, ವಂಚಕರ ಗಾಡ್ ಫಾದರ್ ರೀತಿ ವರ್ತಿಸುತ್ತಿರುವ ಚನ್ನಗಿರಿ ವೃತ್ತ ನಿರೀಕ್ಷಕರ ಪಾತ್ರದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರಾಜ್ಯ ರೈತಮಿತ್ರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರ ನಾಯ್ಕ ಎಚ್ಚರಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಿರೇಉಡ ತಾಂಡಾದ ಮಂಜಾನಾಯ್ಕ, ರಾಘವೇಂದ್ರ ನಾಯ್ಕ, ಸುನೀತಾ ಹಾಗೂ ಸಚಿನ್ ಎಂಬವರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕರೇ ಭರವಸೆ ನೀಡಿದ್ದರು. ಆದರೆ, ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ, ಯಾವುದೇ ಕಾನೂನು ಕ್ರಮವನ್ನೂ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.

ನೂರಾರು ಅಮಾಯಕ ನಿರುದ್ಯೋಗಿಗಳಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ₹50ರಿಂದ ₹60 ಕೋಟಿ ವಂಚಿಸಿ, ಹಣ ಕೊಟ್ಟವರ ನಂಬಿಕೆ ಗಿಟ್ಟಿಸಿಕೊಳ್ಳಲು ಚೆಕ್‌ಗಳನ್ನು ಕೊಟ್ಟು, ವಿವಿಧ ಇಲಾಖೆಗಳ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶ ನೀಡಿದ್ದಾರೆ. ಇಂತಹ ವಂಚಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ ಸಿಪಿಐ ರವೀಶ್ ಹಾಗೂ ಕೆಲ ಸಿಬ್ಬಂದಿ ದೂರುದಾರರಿಗೆ ಏಕೆ ನ್ಯಾಯ ಕೊಡಿಸುತ್ತಿಲ್ಲ? ಆರೋಪಿಗಳು ಪಾಪರ್ ಚೀಟಿ ಆಗಿದ್ದಾರೆಂದು ಹೇಳಿ, ಅವರಿಗೆ ರಕ್ಷಣೆ ನೀಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣ‍ವಾಗಿದೆ ಎಂದು ದೂರಿದರು.

ನಕಲಿ ನೇಮಕಾತಿ ಆದೇಶ ಪ್ರತಿ:

ವಂಚನೆಗೆ ಒಳಗಾದವರು ದೂರು ನೀಡಿದಾಗ ಸ್ವತಃ ಹಿರಿಯ ಅಧಿಕಾರಿಗಳ ಮುಂದೆ ಆರೋಪಿಗಳು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೀನಾ-ಮೇಷ ಎಣಿಸುತ್ತಿರುವುದು ಏಕೆ? ಬೆಸ್ಕಾಂ, ಆರ್‌ಡಿಪಿಆರ್, ಅಬಕಾರಿ ಇಲಾಖೆಗಳಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಆರೋಪಿಗಳು ವಂಚಿಸಿದ್ದಾರೆ. ಸಂತ್ರಸ್ಥ ಪದವೀಧರನೊಬ್ಬನಿಗೆ ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್ ಹುದ್ದೆಯ ನಕಲಿ ನೇಮಕಾತಿ ಆದೇಶ ಪ್ರತಿ ನೀಡಿರುವುದೇ ಇದಕ್ಕೆ ಸಾಕ್ಷಿ. ಸರ್ಕಾರಿ ನೌಕರಿ ಆಸೆಗೆ ದುಡ್ಡು ಕೊಟ್ಟವರನ್ನು ನಂಬಿಸಲು, ಬಸ್‌ ಟಿಕೆಟ್ ನೀಡಿದಂತೆ ಧಾರಾಳವಾಗಿ ಚೆಕ್‌ಗಳನ್ನು ನೀಡಿದ್ದಾರೆಂದರೆ, ವಂಚನೆ ಆರೋಪಿಗಳು ಅದ್ಯಾವ ಪರಿ ಪಳಗಿದ್ದಾರೆ ಎಂಬುದು ತಿಳಿಯುತ್ತದೆ. ವಂಚನೆಯಿಂದ ಪಡೆದ ಹಣದಲ್ಲಿ ಚನ್ನಗಿರಿ ಇತರೆಡೆ ಬಂಗಲೆ, ಜಮೀನು, ತೋಟಗಳ ಖರೀದಿಸಿದ್ದಾರೆ. ಈ ಬಗ್ಗೆ ಎಲ್ಲ ದಾಖಲೆ ಶೀಘ್ರವೇ ಬಯಲಿಗೆ ಇಡುತ್ತೇವೆ ಎಂದು ಚಿನ್ನಸಮುದ್ರ ಶೇಖರ ನಾಯ್ಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ರಾಜ್ಯ ಸಂಚಾಲಕ ವಸಂತಕುಮಾರ, ಕರ್ನಾಟಕ ರೈತ ಮಿತ್ರ ಸಂಘದ ಹರಪನಹಳ್ಳಿ ಎಚ್.ವೆಂಕಟೇಶ, ಹರಿಹರ ಸಂತೋಷಕುಮಾರ, ಚನ್ನಗಿರಿ ಕಾಳೇಶ ಯಲೋದಹಳ್ಳಿ, ಎಂ.ಪ್ರದೀಪಕುಮಾರ, ಶ್ರೀನಿವಾಸ ಆಂಜನೇಯ ಮಿಲ್‌, ಶಿವಮೂರ್ತಿ, ಗಾಳೆಪ್ಪ, ರವಿಗೌಡ ಇತರರು ಇದ್ದರು.

- - -

(ಬಾಕ್ಸ್‌) * ಮೋಸ ಹೋದವರಲ್ಲಿ ಲಂಬಾಣಿಗರೇ ಅಧಿಕ ಮಂದಿ

ಪ್ರತಿಯೊಬ್ಬರಿಂದ ₹10 ಲಕ್ಷದಿಂದ ₹20 ಲಕ್ಷವರೆಗೆ ಪಡೆದುಕೊಂಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಜನರಿಗೆ ಇದೇ ರೀತಿ ವಂಚಿಸಿದ್ದಾರೆ. ಮೋಸ ಹೋದವರಲ್ಲಿ ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯದವರಿಗೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು 15 ದಿನದೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿ, ಅಮಾಯಕ ಹಾಗೂ ಬಡ ಕುಟುಂಬಗಳಿಗೆ ಹಣ ಕೊಡಿಸಿ, ಸಂತ್ರಸ್ಥರಿಗೆ ನ್ಯಾಯ ಕೊಡಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ, ಡಿಸಿ- ಎಸ್‌ಪಿ ಕಚೇರಿಗಳಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸುವುದಾಗಿ ಶೇಖರ ನಾಯ್ಕ ಎಚ್ಚರಿಸಿದರು.

- - -

-17ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರ ನಾಯ್ಕ ಸುದ್ದಿಗೋಷ್ಠಿ ನಡೆಸಿ, ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ವಂಚಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.