ನಗರದ ಅಜ್ಜರಕಾಡಿನಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಉದ್ಘಾಟನೆ ದಿನಾಂಕವನ್ನು ಸರ್ಕಾರ 15 ದಿನಗಳಲ್ಲಿ ಪ್ರಕಟಿಸಬೇಕು, ಇಲ್ಲದಿದ್ದಲ್ಲಿ ಜಿಲ್ಲೆಯ ಐದೂ ಬಿಜೆಪಿ ಶಾಸಕರು ಸೇರಿ ಜನರ ಪರವಾಗಿ ಹೋರಾಟ ನಡೆಸುತ್ತೇವೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಎಚ್ಚರಿಕೆ ನೀಡಿದರು.
ಉಡುಪಿ: ನಗರದ ಅಜ್ಜರಕಾಡಿನಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಉದ್ಘಾಟನೆ ದಿನಾಂಕವನ್ನು ಸರ್ಕಾರ 15 ದಿನಗಳಲ್ಲಿ ಪ್ರಕಟಿಸಬೇಕು, ಇಲ್ಲದಿದ್ದಲ್ಲಿ ಜಿಲ್ಲೆಯ ಐದೂ ಬಿಜೆಪಿ ಶಾಸಕರು ಸೇರಿ ಜನರ ಪರವಾಗಿ ಹೋರಾಟ ನಡೆಸುತ್ತೇವೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆ ಕಾಮಗಾರಿ ಸಂಪೂರ್ಣಗೊಳಿಸಲು ಇನ್ನೂ 30 ಕೋಟಿ ರು. ಅನುದಾನ ಬೇಕು, ಸರ್ಕಾರದ ಬಳಿ ಹಣ ಇಲ್ಲದಿದ್ದರೇ ಒಪ್ಪಿಕೊಳ್ಳಲಿ, ನಾವು ದಾನಿಗಳ, ದೊಡ್ಡ ಸಂಸ್ಥೆಗಳ ಸಿಎಸ್ಆರ್ ನಿಧಿ ತೆಗೆದುಕೊಂಡು ಆಸ್ಪತ್ರೆಯನ್ನು ಪೂರ್ಣಗೊಳಿಸುತ್ತೇವೆ ಎಂದವರು ಸವಾಲು ಹಾಕಿದರು.ಇದುವರೆಗೆ ತಾಲೂಕು ಆಸ್ಪತ್ರೆಯಾಗಿದ್ದು, ಅದನ್ನೀಗ 250 ಹಾಸಿಗೆಗಳ ಜಿಲ್ಲಾಸ್ಪತ್ರೆ ದರ್ಜೆಗೇರಿಸಲು ಈ ಕಟ್ಟಡ ನಿರ್ಮಾಣವಾಗಿದೆ. ಕಳೆದ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳಬೇಕಾಗಿದ್ದ ಆಸ್ಪತ್ರೆಗೆ ಪೂರಕ ವೈದ್ಯರ - ಸಿಬ್ಬಂದಿಗಳ ನೇಮಕವಾಗಿಲ್ಲ, ಅಗತ್ಯಕ್ಕನುಗುಣವಾಗಿ ಆಧುನಿಕ ಯಂತ್ರೋಪಕರಣಗಳ ಪೂರೈಕೆಯಾಗಿಲ್ಲ, ಚಿಕಿತ್ಸೆಗೆ ಬೇಕಾದ ಮೂಲಭೂತ ಸೌಕರ್ಯಗಳಿಲ್ಲ ಎಂದವರು ಆಸಮಾಧಾನ ವ್ಯಕ್ತಪಡಿಸಿದರು.ಬೋರ್ಡ್ ಬೇಡ, ಸೌಲಭ್ಯ ಬೇಕು: ತಾಲೂಕು ಆಸ್ಪತ್ರೆಯ 30 ವರ್ಷಗಳ ಹಳೆಯ ಮಂಚ, ಯಂತ್ರೋಪಕರಣಗಳನ್ನು ಈ ಹೊಸ ಆಸ್ಪತ್ರೆಗೆ ಸ್ಥಳಾಂತರಿಸುವುದಕ್ಕೆ ಅಧಿಕಾರಿಗಳು ಯತ್ನಿಸಿದ್ದು, ಅದನ್ನು ಸ್ಥಗಿತಗೊಳಿಸಲಾಗಿದೆ. ಈಗ ಕೇವಲ ಜಿಲ್ಲಾಸ್ಪತ್ರೆ ಎಂದು ಬೋರ್ಡ್ ಹಾಕಿ, ಪ್ರಚಾರಕ್ಕಾಗಿ ಉದ್ಘಾಟನೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಟೆಂಡರ್ನಲ್ಲಿ ಇರುವ ಷರತ್ತುಗಳಂತೆ ಎಲ್ಲ ಅಧುನಿಕ ಸೌಲಭ್ಯಗಳನ್ನು ಒದಗಿಸಿ, ಅಗತ್ಯ ಸಿಬ್ಬಂದಿಗಳೊಂದಿಗೆ ಆಸ್ಪತ್ರೆಯನ್ನು ಸಂಪೂರ್ಣ ಸುಸಜ್ಜಿತಗೊಳಿಸಿ, ಜಿಲ್ಲೆಯ ಬಡ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡುವಂತೆ ಮಾಡಿ ಉದ್ಘಾಟಿಸಬೇಕು, ಆದ್ದರಿಂದ 15ರೊಳಗೆ ಉದ್ಘಾಟನೆಯ ದಿನಾಂಕವನ್ನು ಸರ್ಕಾರ ಘೋಷಿಸಬೇಕು ಎಂದವರು ಒತ್ತಾಯಿಸಿದರು.ಮಾಜಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಗ್ರಾಮೀಣ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಪ್ರಮುಖರಾದ ಗಿರೀಶ್ ಅಂಚನ್, ಜಗದೀಶ ಆಚಾರ್ಯ, ಬಾಲಕೃಷ್ಣ ಶೆಟ್ಟಿ ಮುಂತಾದವರಿದ್ದರು.