ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆದಿವಾಸಿ ಸಮುದಾಯಗಳ ಸಮಸ್ಯೆಗಳಿಗೆ ಮುಂದಿನ 15 ದಿನಗಳೊಳಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನೂರಾರು ಆದಿವಾಸಿಗಳು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಆದಿವಾಸಿ ಮುಖಂಡರು ಎಚ್ಚರಿಕೆ ನೀಡಿದ್ದಾರೆ.ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಜೇನುಕುರುಬ, ಬೆಟ್ಟಕುರುಬ, ಸೋಲಿಗ, ಯರವ, ಮಲೆಕುಡಿಯ ಸೇರಿದಂತೆ ಆದಿವಾಸಿ ಸಮುದಾಯಕ್ಕೆ ಸೇರಿದ ಜನರು ತಲೆತಲಾಂತರಗಳಿಂದ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಇವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿ ಆದಿವಾಸಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಕೆ.ಚಂದ್ರ ಅವರ ನೇತೃತ್ವದಲ್ಲಿ ಹಲವು ಹಾಡಿಗಳ ನಿವಾಸಿಗಳು ಇತ್ತೀಚೆಗೆ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿದ್ದರೂ ಕೊಡಗು ಜಿಲ್ಲೆಯ ಮೂಲ ನಿವಾಸಿಗಳಾದ ಆದಿವಾಸಿಗಳು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಂದಿಗೂ ಸ್ವಂತ ಸೂರಿಲ್ಲದೆ, ಟಾರ್ಪಲ್ ಶೀಟ್ ನಂತಹ ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಶುದ್ಧ ಕುಡಿಯುವ ನೀರು ಕೂಡ ಲಭಿಸದ ದುಸ್ಥಿತಿ ಇದೆ. ಆದಿವಾಸಿಗಳು ದುರ್ಬಲ ಸಮುದಾಯಕ್ಕೆ ಸೇರಿದವರಾಗಿದ್ದು, ಸ್ವಾವಲಂಬಿಗಳಾಗಿ ಬದುಕುವ ಹಕ್ಕನ್ನು ಇಂದಿನ ಸಮಾಜ ಕಸಿದುಕೊಳ್ಳುತ್ತಿದೆ. ತೋಟಗಳಲ್ಲಿ ಮತ್ತು ಉದ್ದಿಮೆಗಳಲ್ಲಿ ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿರುವ ಆದಿವಾಸಿಗಳು ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಆದಿವಾಸಿಗಳ ಕುಟುಂಬಗಳ ಮಕ್ಕಳು ವಿದ್ಯಾವಂತರಾಗಿದ್ದರೂ ಉದ್ಯೋಗ ಲಭಿಸದೆ ಕೂಲಿ ಕೆಲಸವನ್ನೇ ಅವಲಂಬಿಸುವಂತಾಗಿದೆ ಎಂದು ಆರ್.ಕೆ.ಚಂದ್ರ ಆರೋಪಿಸಿದರು.ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ಹೀನಾಯ ಬದುಕು ಸಾಗಿಸುತ್ತಿರುವ ಆದಿವಾಸಿ ಕುಟುಂಬಗಳಿಗೆ ಇಂದಿಗೂ ಕುಡಿಯುವ ನೀರು, ವಿದ್ಯುತ್ ಮತ್ತು ರಸ್ತೆ ಸೌಲಭ್ಯಗಳಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳೆಲ್ಲವೂ ಆದಿವಾಸಿಗಳ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಹಣವನ್ನು ಮೀಸಲಿಟ್ಟಿರುವುದಾಗಿ ಘೋಷಿಸಿಕೊಳ್ಳುತ್ತಿವೆ. ಆದರೆ ಇಲ್ಲಿಯವರೆಗೆ ಈ ಹಣದಿಂದ ಆದಿವಾಸಿ ಸಮುದಾಯದ ಅಭಿವೃದ್ಧಿಯಾಗಿಲ್ಲ.
ಮಾವುತರು, ಕಾವಾಡಿಗರಿಗೂ ಕಷ್ಟ: ಆದಿವಾಸಿ ಸಮುದಾಯಕ್ಕೆ ಸೇರಿದ ಮಾವುತರು ಹಾಗೂ ಕಾವಾಡಿಗರು ದುಬಾರೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರಿಗೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡಿರುವುದಿಲ್ಲ. ಸಾಕಾನೆ ಶಿಬಿರಗಳಲ್ಲಿ ಕಾಡಾನೆಗಳನ್ನು ಪಳಗಿಸಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹಾಗೂ ಮೈಸೂರು ದಸರಾದಂತಹ ಜಂಬೂಸವಾರಿ ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸುತ್ತಿರುವ ಮಾವುತರು ಹಾಗೂ ಕಾವಡಿಗರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.ದಸರಾ ಸಂದರ್ಭದಲ್ಲಿ ಮಾತ್ರ ಭೂರಿ ಭೋಜನವನ್ನು ನೀಡುವ ಸರ್ಕಾರ ಇತರ ದಿನಗಳಲ್ಲಿ ಇವರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ದುಬಾರೆ ವ್ಯಾಪ್ತಿಯ ಹಾಡಿಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಜಂಗಲ್ ಲಾಡ್ಜ್ ರೆಸಾರ್ಟ್‌ಗಳಿಗೆ ರಸ್ತೆ ನಿರ್ಮಿಸಲು ಅವಕಾಶ ನೀಡಿರುವ ಆಡಳಿತ ವ್ಯವಸ್ಥೆ ದುಬಾರೆಯಲ್ಲೇ ಹುಟ್ಟಿ ಬೆಳೆದಿರುವ ಮೂಲ ನಿವಾಸಿ ಆದಿವಾಸಿಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಮತ್ತಿತರ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದೆ.
ದುಬಾರೆ ವ್ಯಾಪ್ತಿಯ ಹಾಡಿಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಟ್ಟೆಹಾಡಿ, ಮಾವಿನ ಹಳ್ಳ, ಹೊಸಪಟ್ಟಣ, ಮೀನುಕೊಲ್ಲಿ ಹಾಗೂ ವಿರಾಜಪೇಟೆ ತಾಲೂಕಿನ ಗೇಟ್‌ಹಾಡಿ, ಚೊಟ್ಟೆಪಾರೆ, ವಾಲ್ನೂರು ಗ್ರಾಮ ಪಂಚಾಯಿತಿಗೆ ಒಳಪಡುವ ಬಾಳೆಗುಂಡಿ, ತ್ಯಾಗತ್ತೂರು ಈ ಹಾಡಿಗಳ ವ್ಯಾಪ್ತಿಯಲ್ಲಿರುವ ಕುಟುಂಬಗಳಿಗೆ ಇಲ್ಲಿಯವರೆಗೆ ಹಕ್ಕುಪತ್ರ ಮತ್ತು ಆರ್‌ಟಿಸಿ ದೊರೆತ್ತಿಲ್ಲ. ವಿದ್ಯುತ್, ಕುಡಿಯುವ ನೀರು, ರಸ್ತೆ ಸೌಲಭ್ಯ ಇರುವುದಿಲ್ಲ ಎಂದು ಆರ್.ಕೆ.ಚಂದ್ರ ಆರೋಪಿಸಿದರು.ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಂದರ್ಭ ಆದಿವಾಸಿಗಳಿಗೆ ಬೆಂಬಲವಾಗಿ ಹಾಜರಿದ್ದ ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು ನೊಂದ ಆದಿವಾಸಿಗಳ ಸಮಸ್ಯೆಗಳಿಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ತಾವೂ ಕೂಡ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಮುಂದಿನ 15 ದಿನಗಳೊಳಗೆ ಜಿಲ್ಲಾಧಿಕಾರಿಗಳು ಖುದ್ದು ಹಾಡಿಗಳಿಗೆ ಭೇಟಿ ನೀಡಿ ಆದಿವಾಸಿಗಳ ಸಮಸ್ಯೆಗಳನ್ನು ಅರಿತುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.ಹಾಡಿ ನಿವಾಸಿಗಳಾದ ಜೆ.ಕೆ.ಅಣ್ಣಪ್ಪ, ಅಪ್ಪು, ಜೆ.ಎ.ಪುಟ್ಟರಾಜು, ಚಿನ್ನಪ್ಪ, ಜೆ.ಟಿ.ಈರ, ವಿಜಯ, ಶಂಕರ ಮತ್ತಿತರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.
ಬೇಡಿಕೆಗಳುಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಹಾಡಿಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಗ್ರಾಮ ಸಭೆ ನಡೆಸಬೇಕು.
ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ನಿಯೋಜಿಸಿ ಹಾಡಿಗಳ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು.ಮುಂದಿನ ಒಂದು ತಿಂಗಳ ಒಳಗೆ ಹಕ್ಕುಪತ್ರ, ಆರ್‌ಟಿಸಿ, ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು.
ಪಿಯುಸಿ ಮತ್ತು ಪದವಿ ಪಡೆದಿರುವ ಆದಿವಾಸಿ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ದೊರಕಿಸಿಕೊಡಲು ಮತ್ತು ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.ಪ್ರತಿ ತಿಂಗಳು ಆರೋಗ್ಯ ಅಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿ ಹಾಡಿ ನಿವಾಸಿಗಳ ಆರೋಗ್ಯದ ಮೇಲೆ ನಿಗಾ ವಹಿಸಬೇಕು.
ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಆದಿವಾಸಿಗಳಿಗೆ ಕಾರ್ಮಿಕ ಇಲಾಖೆ ನಿಯಮದಂತೆ ವೇತನ ದೊರೆಯುತ್ತಿದೆಯೇ ಅಥವಾ ವೇತನ ಮತ್ತು ನಿಯಮದಂತೆ ಸೌಲಭ್ಯ ದೊರೆಯದೆ ವಂಚನೆಗೊಳಗಾಗುತ್ತಿದ್ದಾರೆಯೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು.ಹಾಡಿಗಳಲ್ಲಿ ಪೊಲೀಸ್ ಜಾಗೃತಿ ಸಭೆಗಳನ್ನು ನಡೆಸಿ ಕಾನೂನು ಅರಿವು ಮೂಡಿಸಬೇಕು.
ಗಿರಿಜನರ ಅಭಿವೃದ್ಧಿಗಾಗಿ ಇಲ್ಲಿಯವರೆಗೆ ಕೊಡಗು ಜಿಲ್ಲೆಗೆ ಬಿಡುಗಡೆಯಾದ ಅನುದಾನ ಮತ್ತು ಖರ್ಚಾದ ಹಣದ ಕುರಿತು ಮಾಹಿತಿ ಒದಗಿಸಬೇಕು.ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಆದಿವಾಸಿ ಮುಖಂಡರುಗಳ ಸಭೆ ನಡೆಸಬೇಕು.
ಇತ್ತೀಚಿಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಆದಿವಾಸಿ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.ಬಾಕಿ ಉಳಿದಿರುವ ಆದಿವಾಸಿ ಅರಣ್ಯ ಹಕ್ಕು ಮಸೂದೆಯ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಆದಿವಾಸಿಗಳಿಗೆ ಭೂಮಿಯ ಹಕ್ಕನ್ನು ನೀಡಬೇಕು.