ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪುರಿ ಶ್ರೀ ಜಗನ್ನಾಥನ ರಥದ ಮಾದರಿಯಲ್ಲಿ ಸುಮಾರು 15 ಲಕ್ಷ ರು. ವೆಚ್ಚದಲ್ಲಿ ನೂತನ ರಥ ನಿರ್ಮಿಸಲು ಪುರಿ ಸಂಪ್ರದಾಯದಂತೆ ಅಕ್ಷಯ ತೃತೀಯ ದಿನದಂದು ಇಲ್ಲಿ ಸಂಕಲ್ಪ ಮಾಡಿ, ಪೂಜೆ ಮಾಡಲಾಗಿದೆ ಎಂದು ಇಸ್ಕಾನ್ ಸಂಸ್ಥೆ ದಾವಣಗೆರೆ ಶಾಖೆ ಮುಖ್ಯಸ್ಥ ಅವಧೂತ ಚಂದ್ರಹಾಸ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ವರ್ಷಗಳಲ್ಲಿ ಶ್ರೀ ಜಗನ್ನಾಥನ ದರ್ಶನಕ್ಕೆ ರಥವನ್ನು ಬೇರೆ ಊರುಗಳ ಇಸ್ಕಾನ್ ದೇವಸ್ಥಾನದಿಂದ ತರಿಸುತ್ತಿದ್ದು, ಈ ಸಲ ನೂತನ ರಥ ಇಲ್ಲಿಯೇ ನಿರ್ಮಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ನೂತನ ಜಗನ್ನಾಥನ ರಥ ನಿರ್ಮಿಸಲು ಸುಮಾರು 15 ಲಕ್ಷ ರು. ಧನಸಹಾಯದ ಅಗತ್ಯವಿದೆ. ದಾವಣಗೆರೆಯಲ್ಲೇ ರಥ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಎಲ್ಲಾ ಭಕ್ತಾದಿಗಳು ತಮ್ಮ ಸಹಕಾರ ನೀಡುವ ಮೂಲಕ ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ಮೂಲಕ ಭಗವಂತ ಜಗನ್ನಾಥನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.ದಾನಿಗಳು, ಭಕ್ತಾದಿಗಳ ಸಹಕಾರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ, ಶ್ರೀ ರಾಮ ನವಮಿ, ಗೀತಾ ಜಯಂತಿ, ಪುರಿ ಜಗನ್ನಾಥ ರಥ ಯಾತ್ರೆ ಸೇರಿ ಹಲವಾರು ಧಾರ್ಮಿಕ ಕಾರ್ಯಕ್ರಮ, ಹಲವಾರು ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ ಇಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈಗ ನೂತನ ಪುರಿ ಜಗನ್ನಾಥ ರಥ ನಿರ್ಮಿಸಲು ದಾನಿಗಳು, ಸರ್ವ ಭಕ್ತಾದಿಗಳು ತನು, ಮನ, ಧನದೊಂದಿಗೆ ಸ್ಪಂದಿಸಬೇಕು ಎಂದು ತಿಳಿಸಿದರು.
ವಿಶ್ವಾದ್ಯಂತ ಇಸ್ಕಾನ್ ಸಂಸ್ಥೆ ಕೇವಲ ಆಧ್ಯಾತ್ಮಿಕ ಉನ್ನತಿಯಷ್ಟೇ ಅಲ್ಲ, ಸರ್ವ ಆಯಾಮದಲ್ಲೂ ಸಾಮಾಜಿಕ ಉನ್ನತಿ ಮುಖಾಂತರ ಜನರ ಜೀವನದಲ್ಲಿ ಶ್ರೇಷ್ಟತೆ ತರಲು ಶ್ರಮಿಸುತ್ತಿದೆ. ಇಸ್ಕಾನ್ ಸಂಸ್ಥೆಯು ಸಾಮಾಜಿಕ ದತ್ತಿ ಕಾರ್ಯಗಳಲ್ಲಿ ತೊಡಗಿರುವ ಜಗತ್ತಿನ ಮೊದಲ ಹತ್ತು ಎನ್‌ಜಿಓಗಳಲ್ಲಿ ಸ್ಥಾನ ಪಡೆದಿದೆ. ದಾವಣಗೆರೆಯಲ್ಲಿ 2 ವರ್ಷದಿಂದ ಶ್ರೀ ಜಗನ್ನಾಥನ ರಥಯಾತ್ರೆ ನೆಡೆಸುತ್ತಾ ಬಂದಿದೆ ಎಂದು ಚಂದ್ರದಾಸ ಮಾಹಿತಿ ನೀಡಿದರು.ಹಿಂದು ಪರ ಸಂಘಟನೆಗಳ ಹಿರಿಯ ಮುಖಂಡರಾದ ಕೆ.ಬಿ.ಶಂಕರ ನಾರಾಯಣ, ಮಾಜಿ ಮೇಯರ್ ಎಸ್.ಟಿ.ವೀರೇಶ, ಚಿನ್ನಾಭರಣ ವರ್ತಕ ನಲ್ಲೂರು ರಾಜಕುಮಾರ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಸತ್ಯನಾರಾಯಣ ರೆಡ್ಡಿ ಇತರರು ಇದ್ದರು.
ಪುರಿ ಶ್ರೀ ಜಗನ್ನಾಥ ರಥ ನಿರ್ಮಾಣಕ್ಕೆ ದೇಣಿಗೆ ನೀಡಲು ಇಚ್ಛಿಸುವವರು ಇಸ್ಕಾನ್ ಲ್ಯಾಂಡ್ ಬಿಲ್ಡಿಂಗ್ಸ್ ಅಂಡ್ ಕನ್ಸ್‌ಫಂಡ್, ಖಾತೆ ಸಂಖ್ಯೆ: 017601002964, ಐಎಫ್‌ಎಸ್‌ಸಿ ಕೋಡ್: 9421224448, ಐಸಿಐಸಿಐ ಬ್ಯಾಂಕ್‌ಗೆ ಕಳಿಸಬಹುದು.ಅವಧೂತ ಚಂದ್ರಹಾಸ ದಾವಣಗೆರೆ ಶಾಖೆ ಇಸ್ಕಾನ್ ಮುಖ್ಯಸ್ಥರು.