ಕನ್ನಡಪ್ರಭ ವಾರ್ತೆ ಬೆಂಗಳೂರು:

ಇರಾನ್‌-ಇಸ್ರೇಲ್‌ ಯುದ್ಧದ ಹಿನ್ನೆಲೆಯಲ್ಲಿ ದುಬೈನಲ್ಲಿ ಬಳ್ಳಾರಿಯ ಒಂದೇ ಕುಟುಂಬದ 15 ಜನರು ಸಿಲುಕಿಕೊಂಡಿದ್ದು, ಗ್ರಾಮೀಣ ಪ್ರದೇಶವೊಂದರ ತಾಣದಲ್ಲಿ ಸುರಕ್ಷಿತವಾಗಿದ್ದಾರೆ.ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಕುಟುಂಬದ ಐವರು ಸೇರಿದಂತೆ ಜಿಲ್ಲೆಯ ಒಟ್ಟು 32 ಜನರಿದ್ದಾರೆ. ಈ ಪೈಕಿ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ಹಾಗೂ ಹಿರಿಯ ವೀರಶೈವ ಸಮಾಜದ ಮುಖಂಡ ಮೇಟಿ ಪಂಪನಗೌಡ ಕುಟುಂಬದವರೇ 15 ಜನರಿದ್ದಾರೆ. ಮೇಟಿ ಪಂಪನಗೌಡ, ಪತ್ನಿ ಸೇರಿದಂತೆ ಒಂದೇ ಕುಟುಂಬದ 15 ಜನರು ಇದೇ ಮೊದಲ ಬಾರಿಗೆ ದುಬೈ ವೀಕ್ಷಿಸಲು ತೆರಳಿದ್ದರು.

ದುಬೈ ಕನ್ನಡಿಗರ ಸಂಘದ ಪದಾಧಿಕಾರಿಗಳು ಬಳ್ಳಾರಿ ಸೇರಿದಂತೆ ಕರ್ನಾಟಕದಿಂದ ಪ್ರವಾಸಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವವರ ನೆರವಿಗೆ ಮುಂದಾಗಿದ್ದಾರೆ. ಬಳ್ಳಾರಿ ನಗರ ಶಾಸಕ ಹಾಗೂ ಗ್ರಾಮೀಣ ಶಾಸಕರು ನಿರಂತರವಾಗಿ ಪ್ರವಾಸಿಗರ ಜತೆ ಸಂಪರ್ಕದಲ್ಲಿದ್ದು, ಧೈರ್ಯ ತುಂಬುತ್ತಿದ್ದಾರೆ.ಆದಾಗ್ಯೂ, ದುಬೈನಲ್ಲಿ ಲಾಕ್ ಆಗಿರುವ ಬಳ್ಳಾರಿಯ ಪ್ರವಾಸಿಗರು ಆತಂಕ ಎದುರಿಸುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಶೆಲ್ ದಾಳಿಯ ಸದ್ದು ಕೇಳಿಸುತ್ತಿರುವುದು ಜೀವಭಯದ ದುಗುಡ ಶುರುವಾಗಿದೆ. ಕೇಂದ್ರ ಸರ್ಕಾರ ತಮ್ಮನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಆತಂಕ ಪಡಬೇಡಿ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ರಾಯಭಾರಿ ಕಚೇರಿಯ ಸಿಬ್ಬಂದಿ ಧೈರ್ಯ ತುಂಬಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಲದೆ, ದುಬೈನಲ್ಲಿ ವಾಸವಾಗಿರುವ ಅನೇಕ ಕನ್ನಡ ಉದ್ಯಮಿಗಳು ಕರ್ನಾಟಕದ ಪ್ರವಾಸಿಗರನ್ನು ಭೇಟಿ ಮಾಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿದ್ದಾರೆ ಎಂದು ಪ್ರವಾಸಿಗರು ಹೇಳಿದ್ದಾರೆ.ನಾವಿದ್ದ ಸ್ಥಳದಲ್ಲಿ ಐದಾರು ಬಾರಿ ಡ್ರೋನ್‌ದಿಂದ ಸ್ಫೋಟದ ಶಬ್ಧ:ನಾವಿರುವ ಕಟ್ಟಡದ ಬಳಿಯೇ ಶನಿವಾರ ಸಂಜೆಯಿಂದ ಭಾನುವಾರ ಮಧ್ಯಾಹ್ನದವರೆಗೆ ಐದಾರು ಬಾರಿ ಡ್ರೋನ್‌ಗಳಿಂದ ದಾಳಿ ಆಗಿದೆ. ವಾಸವಿರುವ ಕಟ್ಟಡದ ಮೇಲಿನಿಂದಲೇ ಡ್ರೋನ್ ಹಾರಿದ ದೃಶ್ಯ ನೋಡಿ ಕೆಲಕಾಲ ಭಯಗೊಂಡಿದ್ದೆವು ಎಂದು ದುಬೈನಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸಂಜೀವ ಮುನ್ನೋಳ್ಳಿ ತಿಳಿಸಿದ್ದಾರೆ.

ಸದ್ಯ ದುಬೈನ ಬರ್ ದುಬೈ ಪ್ರದೇಶದಲ್ಲಿ ಇವರು ವಾಸವಿದ್ದಾರೆ. ‘ದುಬೈನ ಮಿಡಿಯಾ ಸಿಟಿಯಿಂದ ನೋಡಿದಾಗ ಜುಮೇರಾ ಪ್ರದೇಶದಲ್ಲಿ ಡ್ರೋನ್ ಮೂಲಕ ದಾಳಿ ನಡೆದಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಅಬುದಾಬಿ, ಕತಾರ್, ಬಹ್ರೇನ್ ಸೇರಿದಂತೆ ಮಧ್ಯ ಪ್ರಾಚ್ಯ ದೇಶಗಳಲ್ಲಿರುವ ಅಮೆರಿಕನ್ ಬೇಸ್ ಮೇಲೆ ದಾಳಿಯಾಗುತ್ತಿದೆ. ಭಾನುವಾರ ಮಧ್ಯಾಹ್ನ ಊಟ ತರಲೆಂದು ಹೊರಗಡೆ ಹೋದಾಗ ಸಮೀಪದಲ್ಲೇ ಡ್ರೋನ್ ಅಟ್ಯಾಕ್ ಆಯ್ತು. ನಾವಿರುವ ಪ್ರದೇಶದಲ್ಲಿಯೇ ಭಾರತ, ಪಾಕಿಸ್ತಾನ ಸೇರಿದಂತೆ ಇತರ ದೇಶಗಳ ರಾಯಭಾರಿ ಕಚೇರಿಗಳಿವೆ. ಅವುಗಳ ಸಮೀಪವೇ ಈ ದಾಳಿ ನಡೆದ ಶಬ್ದ ಕೇಳಿಸಿದೆ’ ಎಂದು ಅವರು ತಿಳಿಸಿದರು. ನಾವು ಸುರಕ್ಷಿತವಾಗಿದ್ದೇವೆ. ಇಲ್ಲಿನ ಸರ್ಕಾರ ಕಟ್ಟೆಚ್ಚರದಿಂದಿರಲು ಆದೇಶ ಮಾಡಿದೆ ಎಂದು ಸಂಜೀವ ಪತ್ರಿಕೆಗೆ ಮಾಹಿತಿ ನೀಡಿದರು.


‘ಈ ಕ್ಷಣಕ್ಕೆ ಬದುಕಿದ್ದೇವೆ, ಮುಂದೆ ಗೊತ್ತಿಲ್ಲ’

‘ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಬಿಗುಡಾಯಿಸುತ್ತಿದ್ದು, ಈ ಕ್ಷಣಕ್ಕೆ ಬದುಕಿದ್ದೇವೆ ಎಂದಷ್ಟೇ ಹೇಳಬಹುದು. ಮರು ಕ್ಷಣ ಏನಾಗಲಿದೆ ಎಂಬುದು ಗೊತ್ತಿಲ್ಲ.’ ಇದು ಕತಾರ್‌ನಲ್ಲಿ ಸಿಲುಕಿರುವ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಿಂಗಟಗೆರೆ ಮೂಲದ ನೇತ್ರಾ ಮಧುಕುಮಾರ್‌ ‘ಕನ್ನಡಪ್ರಭ’ ದೊಂದಿಗೆ ಹಂಚಿಕೊಂಡ ತಮ್ಮ ದುಗುಡ.ನೇತ್ರಾ ಪತಿ ಮಧುಕುಮಾರ್‌ ಅವರು ಕತಾರ್‌ ಏರ್‌ಪೋರ್ಟ್‌ನಲ್ಲಿ ಉದ್ಯೋಗಿ ಆಗಿದ್ದು, ಈ ದಂಪತಿ ಹಲವು ವರ್ಷದಿಂದ ಕತಾರ್‌ನಲ್ಲಿಯೇ ವಾಸವಾಗಿದ್ದಾರೆ. ಸೋಮವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ನೇತ್ರಾ, ಕತಾರ್‌ನಲ್ಲಿ ಸದ್ಯ ಅಮೆರಿಕ ಏರ್‌ಬೇಸ್‌ ಗುರಿಯಾಗಿಸಿಕೊಂಡು ದಾಳಿ ಆಗುತ್ತಿದೆ. ದಟ್ಟ ಹೊಗೆ ಹರಡಿದ್ದು, ನಿಮ್ಮದೊಂದಿಗೆ ಮಾಹಿತಿ ಹಂಚಿಕೊಳ್ಳುವ ಈ ವೇಳೆ ಕಣ್ಣಳತೆ ದೂರದಲ್ಲಿ ಕ್ಷಿಪಣಿ ದಾಳಿ ಆಯಿತು. ಇದನ್ನು ನೋಡಿದರೆ, ‘ಯಾವಾಗ ಏನು ಆಗಲಿದೆ ಎಂಬುದು ಗೊತ್ತಿಲ್ಲ. ಈ ಕ್ಷಣಕ್ಕೆ ಮಾತ್ರ ಜೀವಂತವಾಗಿದ್ದೇವೆ ಅಷ್ಟೇ’ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ 3 ದಿನಗಳಿಂದ ಅಮೆರಿಕ ಏರ್‌ಬೇಸ್‌ ಗುರಿಯಾಗಿಸಿಕೊಂಡು ನೂರಾರು ಕ್ಷಿಪಣಿ ದಾಳಿ ಆಗುತ್ತಿದೆ. ಇದೀಗ ನಾಗರಿಕ ವಿಮಾನಯಾನದ ಏರ್‌ಪೋರ್ಟ್‌ ಕಡೆಗೂ ದಾಳಿ ಆರಂಭವಾಗಿದೆ. ಅದರಲ್ಲೂ ಹೆಚ್ಚಿನ ಜನ ದಟ್ಟಣೆ ಇರುವ ಕಟ್ಟಡ, ವಾಣಿಜ್ಯ, ವ್ಯಾಪಾರ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ಆಗುತ್ತಿದೆ ಎಂಬ ಸೂಚನೆ ಬಂದಿದೆ ಎಂದು ತಿಳಿಸಿದರು.

ಸಹಾಯಕ್ಕಾಗಿ ಪರದಾಡುತ್ತಿದ್ದೇವೆ:

ದಾಳಿ ನಡುವೆಯೇ ಪತಿ ಕತಾರ್ ಏರ್‌ಪೋರ್ಟ್‌ಗೆ ಕೆಲಸಕ್ಕೆ ಹೋಗುವ ಸ್ಥಿತಿ ಇದ್ದು, ಅವರು ಇಂದು ಸಹ ಕೆಲಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ಒಬ್ಬಳೆ ಇದ್ದು, ತುಂಬಾ ಭಯವಾಗುತ್ತಿದೆ. ಸ್ಥಳೀಯ ಕನ್ನಡ ಸ್ನೇಹಿತರು ಸಹಕಾರ ನೀಡುತ್ತಿದ್ದಾರೆ. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ನಾಗರಾಜ್‌ ಸೇರಿದಂತೆ ಮೊದಲಾದವರು ಫೋನ್‌ ಮಾಡಿ ಮಾತನಾಡಿದ್ದಾರೆ. ಆದರೆ, ಸುರಕ್ಷಿತ ಸ್ಥಳಕ್ಕೆ ಹೋಗಲು ದುಬೈ ಕನ್ನಡ ಸಂಘ ಸೇರಿದಂತೆ ಕನ್ನಡಿಗರನ್ನು ಸಂಪರ್ಕಿಸುತ್ತಿದ್ದೇವೆ ಎಂದು ನೇತ್ರಾ ವಿವರಿಸಿದರು.

ದಾಳಿಯ ಬಗ್ಗೆ ಮೊಬೈಲ್‌ ಅಲರ್ಟ್‌:ಯಾವ ಪ್ರದೇಶದ ಮೇಲೆ ದಾಳಿ ಆಗಲಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಇಲ್ಲಿನ ಸರ್ಕಾರ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ನೀಡುತ್ತದೆ. ಆ್ಯಂಬುಲೆನ್ಸ್‌ ಕೆಂಪು ದೀಪದಂತೆ ಮೊಬೈಲ್‌ನಲ್ಲಿಯೂ ಕೆಂಪು ದೀಪ ಹಾಗೂ ಸಂದೇಶ ಬರಲಿದ್ದು, ಆ ಸೂಚನೆಯಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ನೇತ್ರಾ ತಿಳಿಸಿದರು.