ಟೆಂಪೋ ಉರುಳಿ 15 ಜನರಿಗೆ ಗಾಯ

| Published : Nov 04 2025, 03:00 AM IST

ಸಾರಾಂಶ

ಕೈಗಾ ಅಣು ವಿದ್ಯುತ್ ಯೋಜನೆಯ 5 ಹಾಗೂ 6ನೇ ಘಟಕ ನಿರ್ಮಾಣ ಕಾಮಗಾರಿಗೆ ಸೋಮವಾರ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಮಲ್ಲಾಪುರ ಹಾಗೂ ಕೈಗಾ ಯೋಜನೆ ಪ್ರದೇಶದ ಮಧ್ಯೆ ರಸ್ತೆ ತೀವ್ರ ತಿರುವಿನಲ್ಲಿ ನಿಯಂತ್ರಣ ತಪ್ಪಿ ಉರುಳಿಬಿದ್ದು 15 ಕಾರ್ಮಿಕರು ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರವಾರ

ಕೈಗಾ ಅಣು ವಿದ್ಯುತ್ ಯೋಜನೆಯ 5 ಹಾಗೂ 6ನೇ ಘಟಕ ನಿರ್ಮಾಣ ಕಾಮಗಾರಿಗೆ ಸೋಮವಾರ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟೆಂಪೋ ಮಲ್ಲಾಪುರ ಹಾಗೂ ಕೈಗಾ ಯೋಜನೆ ಪ್ರದೇಶದ ಮಧ್ಯೆ ರಸ್ತೆ ತೀವ್ರ ತಿರುವಿನಲ್ಲಿ ನಿಯಂತ್ರಣ ತಪ್ಪಿ ಉರುಳಿಬಿದ್ದು 15 ಕಾರ್ಮಿಕರು ಗಾಯಗೊಂಡಿದ್ದಾರೆ.

ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಿರುವಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಟೆಂಪೋ ಉರುಳಿಬಿದ್ದಿದೆ.

ನಂತರ ಮಲ್ಲಾಪುರ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ವಾಹನದೊಳಗೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿ ಹೊರತೆಗೆದಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನವರು ಸ್ಥಳೀಯ ಹಾಗೂ ಹೊರರಾಜ್ಯಗಳಿಂದ ಬಂದ ಕಾರ್ಮಿಕರಾಗಿದ್ದು, ಕೈಗಾ ಯೋಜನೆ ವಿಸ್ತರಣೆ ಮತ್ತು ನಿರ್ವಹಣಾ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲಾ ಗಾಯಾಳುಗಳನ್ನು ತುರ್ತು ಚಿಕಿತ್ಸೆಗಾಗಿ ನಗರದ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಮಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮದುವೆಯಾಗಿಲ್ಲ ಎಂದು ಚೂರಿಯಿಂದ ಆತ್ಮಹತ್ಯೆಗೆ ಯತ್ನ:

ವಿವಾಹವಾಗಿಲ್ಲ ಎಂಬ ಬೇಸರದಲ್ಲಿ ವ್ಯಕ್ತಿ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಕಾರವಾರ ನಗರದ ಬ್ರಾಹ್ಮಣಗಲ್ಲಿಯಲ್ಲಿ ಸಂಭವಿಸಿದೆ.

ಪ್ರಜ್ಞೇಶ್ ಪ್ರಕಾಶ ಶೇಟ್ (45) ಆತ್ಮಹತ್ಯೆಗೆ ಯತ್ನಿಸಿದವರು.ತನ್ನ ನಿವಾಸದಲ್ಲಿಯೇ ಚೂರಿಯಿಂದ ದೇಹದ ಭಾಗಕ್ಕೆ ಇರಿದುಕೊಂಡಿದ್ದಾರೆ. ತೀವ್ರವಾಗಿ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಪ್ರಜ್ಞೇಶ್ ಅವರನ್ನು ತಕ್ಷಣವೇ ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ನೀಡಿದ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

45 ವರ್ಷ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ ಎಂಬ ವಿಷಯವನ್ನು ಪ್ರಜ್ಞೇಶ್ ಹತ್ತಿರದವರಿಗೆ ಹಲವು ಬಾರಿ ಹೇಳಿಕೊಂಡು ದುಃಖಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಖಿನ್ನತೆಯಿಂದಾಗಿಯೇ ಈ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.