ಸಾರಾಂಶ
- ಸಂವಿಧಾನ ಸಮಿತಿಯಲ್ಲಿದ್ದ 15 ಮಹಿಳೆಯರ ಗೌರವಾರ್ಥ ಕಾರ್ಡ್ ಲೋಕಾರ್ಪಣೆಕನ್ನಡಪ್ರಭ ವಾರ್ತೆ, ಬೆಂಗಳೂರು
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತವು ‘ನಮ್ಮ ಸಂವಿಧಾನದ ಸಂಸ್ಥಾಪಕ ತಾಯಂದಿರು’ ವಿಷಯ ಕುರಿತಾಗಿ ಕ್ಯುಆರ್ ಕೋಡ್ ಒಳಗೊಂಡ 15 ಸಚಿತ್ರ ಅಂಚೆ ಕಾರ್ಡ್‌ಗಳು ಮತ್ತು ವಿಶೇಷ ರದ್ಧತಿಯ ಕಾರ್ಡ್ (ಸ್ಪೆಷಲ್ ಕ್ಯಾನ್ಸಲೇಷನ್ ಕಾರ್ಡ್) ಬಿಡುಗಡೆ ಮಾಡಿದೆ.ಶುಕ್ರವಾರ ನಗರದ ಅಂಬೇಡ್ಕರ್ ವೀದಿಯಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್ ಅವರು ಈ ವಿಶೇಷ ಅಂಚೆ ಕಾರ್ಡ್‌ಗಳನ್ನು ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಭಾರತದ ಸಂವಿಧಾನವು 75 ವರ್ಷಗಳನ್ನು ಪೂರೈಸಿದ ಈ ಸುಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತವು ಸಂವಿಧಾನ ಸಭೆಯ 15 ಮಹಿಳಾ ಸದಸ್ಯರ ಕೊಡುಗೆಯನ್ನು ಗುರುತಿಸಿ ಗೌರವಿಸಿದೆ ಎಂದರು.ಅಂತಾರಾಷ್ಟ್ರೀಯ ಮಹಿಳಾ ದಿನದಂದೇ 15 ಸಚಿತ್ರ ಪೋಸ್ಟ್‌ಕಾರ್ಡ್ ಮತ್ತು ವಿಶೇಷ ರದ್ಧತಿಯ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಅವರು ಸಂವಿಧಾನಕ್ಕೆ ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು.
389 ಸದಸ್ಯರ ಸಂವಿಧಾನ ಸಭೆಯಲ್ಲಿ ಮಹಿಳೆಯರು ಕೇವಲ ಶೇ.3.85 ರಷ್ಟಿದ್ದರೂ, ಅವರ ಗುಣಾತ್ಮಕ ಕೊಡುಗೆ ಶ್ಲಾಘನೀಯವಾಗಿದೆ. ಅಮ್ಮು ಸ್ವಾಮಿನಾಥನ್, ಹಂಸಾ ಮೆಹ್ತಾ, ರೇಣುಕಾ ರೇ, ಕಮಲಾ ಚೌಧರಿ, ಬೇಗಂ ಐಜಾಜ್ ರಸೂಲ್, ರಾಜಕುಮಾರಿ ಅಮೃತ್ ಕೌರ್, ಅನ್ನಿ ಮ್ಯಸ್ಕರೀನ್, ಲೀಲಾ ರಾಯ್, ಸರೋಜಿನಿ ನಾಯ್ಡು, ದಾಕ್ಷಾಯಣಿ ವೇಲಾಯುಧನ್, ದುರ್ಗಾಬಾಯಿ ದೇಶ್ಮುಖ್, ಸುಚೇತಾ ಕೃಪಲಾನಿ, ಮಾಲತಿ ಚೌಧರಿ, ಪೂರ್ಣಿಮಾ ಬ್ಯಾನರ್ಜಿ, ವಿಜಯಲಕ್ಷ್ಮಿ ಪಂಡಿತ್ ಸೇರಿದಂತೆ 15 ಸದಸ್ಯೆಯರು ವಿವಿಧ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರಾಗಿದ್ದರು ಎಂದರು.ರದ್ದತಿ ಇಲ್ಲದ ಸಚಿತ್ರ ಪೋಸ್ಟ್ ಕಾರ್ಡ್‌ಗಳ ಬೆಲೆ 300 ರು. ಮತ್ತು ರದ್ದತಿ ಸಹಿತ ಸಚಿತ್ರ ಪೋಸ್ಟ್‌ಕಾರ್ಡ್‌ಗಳ ಬೆಲೆ 400 ರು.ಗಳಾಗಿವೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ರದ್ದತಿ ಕಾರ್ಡ್‌ಗಳು ಅಂಚೆಚೀಟಿಗಳ ಸಂಗ್ರಹಾಲಯಗಳಾದ ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಅಂಚೆಚೀಟಿ ಸಂಗ್ರಹಕಾರರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟಕ್ಕೆ ಲಭ್ಯವಿರುತ್ತವೆ.
ಕಾರ್ಯಕ್ರಮದಲ್ಲಿ ಕರ್ನಾಟಕ ವೃತ್ತದ ಅಂಚೆ ಸೇವೆಯ ನಿರ್ದೇಶಕಿ ಕೈರಾ ಅರೋರಾ, ಏರೋಸ್ಪೇಸ್ ಎಂಜಿನಿಯರ್ ವಿನಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.