ಮಲಪ್ರಭಾ ನದಿಗೆ 15 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

| Published : Aug 02 2024, 12:47 AM IST

ಸಾರಾಂಶ

ಜಮೀನುಗಳಲ್ಲಿರುವ ಪಂಪ್‌ಸೆಟ್‌, ಜಾನುವಾರು ಸಮೇತ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದರು

ನರಗುಂದ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಲಪ್ರಭಾ ನದಿಯ ಉಗಮ ಸ್ಥಾನ ಕಣಕುಂಬಿ ಗ್ರಾಮದ ಮೇಲ್ಭಾಗದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಜಲಾಶಯದ ಅಧಿಕಾರಿಗಳು ಜು. 31ರಂದು 12 ಸಾವಿರ ನೀರು ಬಿಟ್ಟಿದ್ದರು. ಆ. 1ರಂದು ಮತ್ತೆ ಹೆಚ್ಚುವರಿ 3 ಸಾವಿರ ಕ್ಯುಸೆಕ್‌ ನೀರು ಹೊರ ಬಿಟ್ಟಿದ್ದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಶುರುವಾಗಿದೆ.

ಲಖಮಾಪುರ, ಬೆಳ್ಳೇರಿ, ಕೊಣ್ಣೂರ, ವಾಸನ, ಕಪ್ಪಲಿ, ಕಲ್ಲಾಪುರ, ಶಿರೋಳ ಗ್ರಾಮಗಳಿಗೆ ತಾಪಂ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಮಲಪ್ರಭಾ ನದಿ ಮೇಲ್ಭಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಇನ್ನೂ ಹೆಚ್ಚಿನ ನೀರು ಬರುವ ಸಾಧ್ಯತೆ ಇದೆ. ಜಲಾಶಯ ಭರ್ತಿಗೆ 2 ಅಡಿ ಮಾತ್ರ ಬಾಕಿ ಇದೆ. ಯಾವುದೇ ಕ್ಷಣದಲ್ಲಿ ನದಿಗೆ ಹೆಚ್ಚುವರಿ ನೀರು ಹೊರಗಡೆ ಬಿಡಬಹುದು. ಆದರಿಂದ ಎಲ್ಲ ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿರುವ ಪಂಪ್‌ಸೆಟ್‌, ಜಾನುವಾರು ಸಮೇತ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಿದರು.

ತಾಲೂಕಿನಿಂದ ಬಾಗಲಕೋಟೆ ಜಿಲ್ಲೆ ಸಂಪರ್ಕಿಸುವ ಹಳೆಯ ಸೇತುವೆ ಮುಳಗಡೆಯಾಗಿದೆ. ಗ್ರಾಮಸ್ಥರು ನದಿಯಲ್ಲಿ ಈಜುವುದು, ಜಾನುವಾರುಗಳ ಮೈ ತೊಳೆಯುವುದನ್ನು ಮಾಡಬಾರದು ಎಂದು ತಾಪಂ ಅಧಿಕಾರಿ ಎಸ್‌.ಕೆ. ಇನಾಮದಾರ ಗ್ರಾಮಸ್ಥರಿಗೆ ಸೂಚಿಸಿದರು.

ತಹಸೀಲ್ದಾರ್‌ ಶ್ರೀಶೈಲ ತಳವಾರ, ಕಂದಾಯ ನಿರೀಕ್ಷಕ ಐ.ವೈ. ಕಳಸನ್ನವರ, ಎಂ.ಎಚ್. ಮಲಘಾಣ, ಟಿ.ಆರ್. ಪಾಟೀಲ, ಎಸ್.ಎಂ. ಹೂಗಾರ, ಪಿಡಿಒ ಎಂ.ಎ ವಾಲಿ, ಶಂಕರಗೌಡ ನಡಮನಿ, ಸೋಮನಗೌಡ, ಯೋಗಪ್ಪ, ಬಸನಗೌಡ, ಶಂಕರಗೌಡ ಯಲ್ಲಪ್ಪಗೌಡ್ರ, ಪರಪ್ಪ ಸಹಕಾರ, ಸಿ.ಆರ್. ಸಾಲಿಗೌಡ್ರ, ಸುನೀಲ ಕಳಸನ್ನವರ, ಶಂಕರಗೌಡ ಅಜಗುಂಡಿ, ನೇತಾಜಿಗೌಡ್ರ, ಕೋರಿಗನ್ನವರ, ಕೊಟ್ರೇಶ, ವೀರನಗೌಡ ಹಿರೇಗೌಡ್ರ, ಶ್ರೀಕಾಂತಯ್ಯ, ಈರಣ್ಣ ಹುರಕಡ್ಲಿ, ಗ್ರಾಪಂ ಸದಸ್ಯರು ಇದ್ದರು.