ಯುಜಿಡಿ ನಿರ್ಮಾಣಕ್ಕೆ 150 ಕೋಟಿ ಮಂಜೂರು

| Published : Feb 16 2025, 01:49 AM IST

ಸಾರಾಂಶ

ರಾಮನಗರ: ನಗರದಲ್ಲಿ ಯುಜಿಡಿ(ಒಳಚರಂಡಿ) ನಿರ್ಮಾಣ ಮಾಡಲು ಅಮೃತ್ - 2 ಯೋಜನೆಯಡಿ 150 ಕೋಟಿ ರುಪಾಯಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರ: ನಗರದಲ್ಲಿ ಯುಜಿಡಿ(ಒಳಚರಂಡಿ) ನಿರ್ಮಾಣ ಮಾಡಲು ಅಮೃತ್ - 2 ಯೋಜನೆಯಡಿ 150 ಕೋಟಿ ರುಪಾಯಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ನಗರಸಭೆ ವ್ಯಾಪ್ತಿಯ ನೈಸ್ ರಸ್ತೆಯಿಂದ ಹುಣಸನಹಳ್ಳಿ ಕಡೆ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಯುಜಿಡಿ ಸಮಸ್ಯೆಯಿದೆ. ಶೇ.30ರಷ್ಟು ಭಾಗ ಯುಜಿಡಿ ಆಗಿದ್ದು, ಇನ್ನುಳಿದ ಶೇ.70ರಷ್ಟು ಭಾಗದಲ್ಲಿ ಯುಜಿಡಿ ಸಂಪರ್ಕವಿಲ್ಲದೆ ಪಿಟ್‌ಗಳನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ನಗರಾಭಿವೃದ್ಧಿ ಇಲಾಖೆಯಿಂದ ಮಂಜೂರಾಗಿರುವ 150 ಕೋಟಿ ಅನುದಾನದ ಬಗ್ಗೆ ನನಗೆ ಪತ್ರ ಬಂದಿದ್ದು, ಘಟಕಗಳ ಸ್ಥಾಪನೆಗೆ ಸೂಕ್ತ ಸ್ಥಳ ಬೇಕಾಗಿದೆ. ಸ್ಥಳ ಗುರುತಿಸುವಂತೆ ತಹಸೀಲ್ದಾರ್ ಮತ್ತು ನಗರಸಭೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.

ನಗರದಿಂದ ಹುಣಸನಹಳ್ಳಿ ಮಾರ್ಗದಲ್ಲಿ 35 ಹಳ್ಳಿಗಳಿಗೆ ಸಾಗುವ ಬಹುಮುಖ್ಯ ರಸ್ತೆ ಇದಾಗಿದೆ. ತಾವು ಶಾಸಕರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಕಾಮಗಾರಿಯಾಗಿ ಈ ರಸ್ತೆ ಅಭಿವೃಧ್ದಿಗೆ ಮುಂದಾಗಿದ್ದು. 10 ಕೋಟಿ ರು. ವೆಚ್ಚದಲ್ಲಿ 1.5 ಕಿಮೀ ಗುಣಮಟ್ಟದ ರಸ್ತೆ ಅಭಿವೃದ್ಧಿಯಾಗಲಿದೆ. ಒತ್ತುವರಿ ತೆರವು, ಭೂಮಿಯಲ್ಲಿದ್ದ ಕೇಬಲ್ ಗಳು, ವಿದ್ಯುತ್ ಕಂಬಗಳ ಸ್ಥಳಾಂತರ. ಹೊಸದಾಗಿ ಚರಂಡಿಗಳ ನಿರ್ಮಾಣ ಕಾಮಗಾರಿಯಿಂದಾಗಿ ರಸ್ತೆ ಅಭಿವೃದ್ದಿ ಕಾರ್ಯ ಸ್ವಲ್ಪ ತಡವಾಗಿದ್ದು, ಗುಣಮಟ್ಟದ ರಸ್ತೆ ಆಗಲಿದೆ ಎಂದು ಹೇಳಿದರು.

ಅರ್ಕಾವತಿ ನದಿಯಂಚಿನಲ್ಲಿ ಸುಮಾರು 157 ಕೋಟಿ ರು.ವೆಚ್ಚದ ಉದ್ಯಾನವನ ನಿರ್ಮಾಣಕ್ಕೆ ಭೂ ಸ್ವಾಧೀನ ಕಾರ್ಯ ಪ್ರಾರಂಭವಾಗಿದೆ. ಹಳೇ ಬಸ್ ನಿಲ್ದಾಣದ ಬಳಿ ತಮ್ಮ ಭೂಮಿಯೂ ಸಹ ಇದೆ. ಉದ್ಯಾನವನ ನಿರ್ಮಾಣಕ್ಕಾಗಿ ತಮಗೂ ನೋಟಿಸ್ ಬಂದಿದೆ. 100 ಕೋಟಿ ರು. ವೆಚ್ಚದಲ್ಲಿ ನಗರ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ 58 ಕಿಮೀ ಉದ್ದದಷ್ಟು ಕಾಂಕ್ರೀಟ್ ರಸ್ತೆಗಳು ಇರಲಿವೆ. ಫ್ಲಡ್ ರಿಲೀಫ್ ಯೋಜನೆಯಡಿ 5.40 ಕೋಟಿ ರು. ಹಣ ಇತ್ತು. ಈ ಹಣವನ್ನು ಬಳಸಿ ವಾರ್ಡ್ 11 ಮತ್ತು 20 ಮುಂತಾದ ವಾರ್ಡುಗಳಲ್ಲಿ ರಸ್ತೆ, ಚರಂಡಿಗಳು ನಿರ್ಮಾಣವಾಗಿದೆ. 1 ಕೋಟಿ ರು.ನಲ್ಲಿ ಉಳಿದ ಹಣದಲ್ಲಿ ಬನ್ನಿಮಹಾಕಾಳಿ ಅಮ್ಮನವರ ದೇವಾಲಯದ ಬಳಿಯ ರಸ್ತೆಗೆ ಬಳಕೆ ಮಾಡಲಾಗುತ್ತಿದೆ ಎಂದು ಶಾಸಕ ಇಕ್ಬಾಲ್ ವಿವರಿಸಿದರು.

ನಗರವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ದಿಗೆ ಇನ್ನು ಸುಮಾರು 30 ಕೋಟಿ ರು. ಹಣ ಬೇಕಾಗಿದೆ. ಹೀಗಾಗಿ ನಗರಾಭಿವೃದ್ದಿ ಸಚಿವರಿಗೆ, ಮಾಜಿ ಸಂಸದ ಡಿ.ಕೆ.ಸುರೇಶ್ ಮೂಲಕ ಮನವಿ ಮಾಡಿದ್ದೇನೆ. ಸಚಿವರು ಸಹ ಸ್ಪಂದಿಸುವ ಭರವಸೆ ಇದೆ. ರಸ್ತೆ, ಚರಂಡಿ, ಕುಡಿಯುವ ನೀರಿನ ಯೋಜನೆ ನಿರ್ಮಾಣ ಕಾಮಗಾರಿಗಳಲ್ಲಿ ತಮಗೆ ಗುಣಮಟ್ಟ ಕಾಣದಿದ್ದರೆ ತಕ್ಷಣ ಕೆಲಸ ನಿಲ್ಲಿಸುತ್ತೇನೆ. ನಗರದಲ್ಲಿ ಜಲಮಂಡಳಿ ನಿರ್ಮಿಸಿರುವ ರಸ್ತೆ ಕಾಮಗಾರಿ ತಮಗೆ ತೃಪ್ತಿ ನೀಡಿಲ್ಲ. ಈ ಬಗ್ಗೆ ತಾವು ಜಲಮಂಡಳಿ ಅಧಿಕಾರಿಗಳಿಗೆ ಹಲವಾರು ಬಾರಿ ಗಮನ ಸೆಳೆದರೂ ಉಪಯೋಗವಾಗಿಲ್ಲ. ಹೀಗಾಗಿ ಇನ್ನು 3-4 ದಿನಗಳಲ್ಲಿ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಇಕ್ಬಾಲ್ ಹುಸೇನ್ ಪುನರುಚ್ಚರಿಸಿದರು.

ಮಾಜಿ ಶಾಸಕ ಕೆ.ರಾಜು, ನಗರಸಭಾಧ್ಯಕ್ಷ ಕೆ.ಶೇಷಾದ್ರಿ, ಉಪಾಧ್ಯಕ್ಷೆ ಆಯಿಷಾಭಾನು, ಸದಸ್ಯರಾದ ಪೈರೋಜ್, ಅಸ್ಮದ್, ಬೈರೇಗೌಡ, ಸಮದ್, ಹುಲಿಕೆರೆ-ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್, ಮುಖಂಡರಾದ ಶಿವಕುಮಾರಸ್ವಾಮಿ, ವಾಸು, ನಾಗೇಶ್, ಲೋಕೋಪಯೋಗಿ ಇಲಾಖೆ ಎಇಇ ಪಳಿನಿಸ್ವಾಮಿ, ಇಂಜಿನಿಯರ್ ಶೆಟ್ಟರ್ ಹಾಜರಿದ್ದರು.

ಕೋಟ್ .............

ನೈಸ್ ರಸ್ತೆಯಿಂದ ಹುಣಸನಹಳ್ಳಿಗೆ ಹೋಗುವ ರಸ್ತೆಯಲ್ಲಿ ವಿಭಜಕ, ವಿದ್ಯುತ್ ದೀಪ ಅಳವಡಿಸಿ ಮಾದರಿ ರಸ್ತೆಯನ್ನಾಗಿಸಿ ಸೌಂದರ್ಯ ವೃದ್ಧಿಸುವ ಚಿಂತನೆಯಿದೆ. ಜಲ ಮಂಡಳಿಯವರು ನೀರು ಪೂರೈಸಿದಾಗ ರಸ್ತೆ ಮಧ್ಯೆ ಭಾಗದಲ್ಲಿಯೇ ವಾಲ್ವ್ ಗಳನ್ನು ಅಳವಡಿಸುವುದು ನನ್ನ ಗಮನಕ್ಕೆ ಬಂದಿದೆ. ಅವುಗಳ ಸ್ಥಳಾಂತರಕ್ಕೆ ಕ್ರಮ ವಹಿಸುತ್ತೇನೆ.

-ಇಕ್ಬಾಲ್ ಹುಸೇನ್, ಶಾಸಕರು

15ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ನಗರಸಭೆ ವ್ಯಾಪ್ತಿಯ ನೈಸ್ ರಸ್ತೆಯಿಂದ ಹುಣಸನಹಳ್ಳಿ ಕಡೆ ಹೋಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.