ಬಿಎಂಟಿಸಿಗೆ 1,500+ ಹೊಸ ಬಸ್‌ ಸೇರ್ಪಡೆ

| Published : Jan 30 2024, 02:03 AM IST

ಸಾರಾಂಶ

ಬಿಎಂಟಿಸಿಗೆ ಹೊಸದಾಗಿ 1500 ಸೇರ್ಪಡೆಗೆ ನಿರ್ಧರಿಸಲಾಗಿದೆ. ಇದರಿಂದ ಬೆಂಗಳೂರಿನ ನಿವಾಸಿಗಳಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಯೋಜನೆ ರೂಪಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಎಂಟಿಸಿ ತನ್ನ ಸೇವೆಯನ್ನು ಉತ್ತಮಗೊಳಿಸಲು ಹೊಸದಾಗಿ 1,500ಕ್ಕೂ ಹೆಚ್ಚಿನ ಬಸ್‌ಗಳ ಸೇರ್ಪಡೆಗೆ ಮುಂದಾಗಿದ್ದು, ಅದರಲ್ಲಿ ಬಹುತೇಕ ಬಸ್‌ಗಳನ್ನು ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌ (ಜಿಸಿಸಿ) ಮಾದರಿಯಲ್ಲಿ ಪಡೆಯಲಿದೆ.

ಹೊಸ ಬಸ್‌ಗಳ ಸೇರ್ಪಡೆ ಮೂಲಕ ಬಿಎಂಟಿಸಿಯ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ಬಿಎಂಟಿಸಿಗೆ ಹೊಸದಾಗಿ 1,500ಕ್ಕೂ ಹೆಚ್ಚಿನ ಬಸ್‌ಗಳನ್ನು ಸೇರ್ಪಡೆ ಮಾಡಲಿದೆ. ಪ್ರಮುಖವಾಗಿ 400ಕ್ಕೂ ಹೆಚ್ಚಿನ ಬಿಎಸ್‌- 6 ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಅದರ ಜತೆಗೆ 20 ಮಿಡಿ ಬಸ್‌ಗಳು, 10 ಡಬ್ಬಲ್‌ ಡೆಕ್ಕರ್‌ ಬಸ್‌, 921 ಎಲೆಕ್ಟ್ರಿಕ್‌ ಬಸ್‌ಗಳನ್ನು ಜಿಸಿಸಿ ಆಧಾರದಲ್ಲಿ ಪಡೆಯಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕ್‌ ಬಸ್‌ಗಳ ಪೈಕಿ ಈಗಾಗಲೇ 100 ಬಸ್‌ಗಳು ಪೂರೈಕೆಯಾಗಿದ್ದು, ಉಳಿದ ಬಸ್‌ಗಳ ಈ ಆರ್ಥಿಕ ವರ್ಷದ ಅಂತ್ಯದೊಳಗೆ ಬಿಎಂಟಿಸಿ ಪಡೆಯಲಿದೆ.

ಕೊರೋನಾ ಪೂರ್ವದಲ್ಲಿ ಬಿಎಂಟಿಸಿ 6,185 ಬಸ್‌ಗಳ ಮೂಲಕ ಸೇವೆ ನೀಡುತ್ತಿತ್ತು. ಆದರೆ, ಕೊರೋನಾ ನಂತರ ಆ ಸಂಖ್ಯೆ 5,587ಕ್ಕೆ ಇಳಿದಿದೆ. ಒಟ್ಟು 598 ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಅದರ ಜತೆಗೆ ಗುಜರಿಗೆ ಹೋಗಬೇಕಾದ ಬಸ್‌ಗಳನ್ನು ಸೇವೆಯಿಂದ ಹೊರಗಿಡಲೂ ನಿರ್ಧರಿಸಲಾಗಿದೆ. ಹೀಗಾಗಿ ಬಿಎಂಟಿಸಿ ಹೊಸ ಬಸ್‌ಗಳನ್ನು ಪಡೆಯಲು ಮುಂದಾಗಿದೆ.