ಸಾರಾಂಶ
ಕಾರಟಗಿ: ಕನಕಗಿರಿ ಕ್ಷೇತ್ರಕ್ಕೆ ಪ್ರಸಕ್ತ ೧೫೦೦ ಮನೆಗಳನ್ನು ಈ ಅವಧಿಯಲ್ಲಿ ಮಂಜೂರು ಮಾಡಿಸಿದ್ದು, ಆದ್ಯತೆಯ ಮೇರೆಗೆ ಕ್ಷೇತ್ರದಲ್ಲಿ ಅರ್ಹರಿಗೆ ಮನೆ ಹಂತ ಹಂತವಾಗಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ತಾಲೂಕಿನ ಹುಳ್ಕಿಹಾಳ ಗ್ರಾಪಂ ವ್ಯಾಪ್ತಿಯ ಹುಳ್ಕಿಹಾಳ್ ಕ್ಯಾಂಪ್ ಮತ್ತು ಹುಳ್ಕಿಹಾಳ ಗ್ರಾಮದಲ್ಲಿ ಶುಕ್ರವಾರ ನಡೆದ ಅಭಯಹಸ್ತ ಜನ ಸಂಪರ್ಕ ಸಭೆಗೆ ಚಾಲನೆ ನೀಡಿ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು. ಕನಕಗರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದು, ಆ ಪೈಕಿ ಬಡವರಿಗೆ ಮನೆಗಳನ್ನೂ ನೀಡಿದೆ. ಇನ್ನು ಕೆಲವು ದಿನಗಳಲ್ಲಿ ಹಾಕಿಕೊಂಡ ಯೋಜನೆಗಳನ್ನು ಜಾರಿಗೆ ತರಲು ಸೂಕ್ತ ನೀಲನಕ್ಷೆ ಸಿದ್ಧಪಡಿಸಿ ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.ಹುಳ್ಕಿಹಾಳ ಕ್ಯಾಂಪ್: ಪ್ರತಿಯೊಂದು ವಾರ್ಡ್‌ಗೂ ಸಿಸಿ ರಸ್ತೆ, ಒಳಚರಂಡಿ ನಿರ್ಮಾಣವಾಗಬೇಕು, ರುದ್ರಭೂಮಿಗೆ ತೆರಳಲು ಸಮರ್ಪಕ ರಸ್ತೆ ಬೇಕು, ಸರ್ವೇ ನಂ. ೭೩ರಲ್ಲಿ ರಸ್ತೆ ಜಾಗ ಒತ್ತುವರಿ ಮಾಡಿದ್ದು, ಜನರು ಓಡಾಡಲು ಕಷ್ಟವಾಗಿದೆ ಎಂದು ಕ್ಯಾಂಪ್‌ನ ನಿವಾಸಿಗಳು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಸಚಿವ ತಂಗಡಗಿ, ಕ್ಯಾಂಪ್‌ನ ಜನರ ಮನವಿಯಂತೆ ಸಿಸಿ ರಸ್ತೆ, ಡ್ರೈನೇಜ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ, ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಎಂಜಿನಿಯರ್ ವಿಜಯಕುಮಾರ್, ಪಿಡಿಒ ವೆಂಕಟೇಶ್ ಅವರಿಗೆ ಸೂಚಿಸಿದರು.ಗ್ರಾಮದಲ್ಲಿ ಎಸ್‌ಟಿ ಸಮುದಾಯಕ್ಕೆ ಒಂದು ವಾಲ್ಮೀಕಿ ಭವನ ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡರು. ೨೦೧೯ರಲ್ಲಿಯೇ ಭೂಮಿ ಸರ್ವೇಗೆ ಅರ್ಜಿ ಸಲ್ಲಿಸಿದ್ದರೂ ನಮ್ಮ ಭೂಮಿಯ ಸರ್ವೇ ಮಾಡಿಲ್ಲ ಎಂದು ಮುಖಂಡ ಶ್ರೀನಿವಾಸ್ ದೂರಿದರು. ಇದಕ್ಕೆ ಸರ್ವೇಯರ್ ರಾಜಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಕೂಡಲೇ ಸರ್ವೇ ಮುಗಿಸಿಕೊಡಿ, ಇಲ್ಲದಿದ್ದರೆ ನಿನ್ನ ಮೇಲೆ ಕ್ರಮ ತೆಗೆದುಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಅಹವಾಲು ಸ್ವೀಕಾರ: ಹುಳ್ಕಿಹಾಳ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದ ಆವರಣದ ಕಲ್ಯಾಣ ಮಂಟಪದಲ್ಲಿ ಸಚಿವರು ಜನರ ಮನವಿ, ಅಹವಾಲುಗಳನ್ನು ಸ್ವೀಕರಿಸಿದರು.ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಓಡಾಟಕ್ಕೆ ಬಸ್‌ನ ವ್ಯವಸ್ಥೆ, ೨ನೇ ವಾರ್ಡನಲ್ಲಿ ಸಿಸಿ ರಸ್ತೆ, ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್, ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣ, ವಾಲ್ಮೀಕಿ ಗುಡಿ ಹತ್ತಿರ ಅಂಗನವಾಡಿ ಕೇಂದ್ರ ತೆರೆಯಬೇಕು, ಶಾಲೆಗೆ ಕಂಪೌಂಡ್ ನಿರ್ಮಾಣ, ಚಾಮುಂಡೇಶ್ವರಿ ಕ್ಯಾಂಪ್ ಸೇರಿದಂತೆ ಗ್ರಾಮದಲ್ಲಿ ವಿದ್ಯುತ್ ಕಂಬಗಳನ್ನು ಹಾಕುವ ಬಗ್ಗೆ ಜನರು ಮನವಿ ಸಲ್ಲಿಸಿದರು. ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆ ಮಂಜೂರು ಮಾಡಿಸಿದರೆ ಸುಮಾರು ಒಂದು ಸಾವಿರ ಎಕರೆ ಭೂಮಿಗೆ ನೀರು ಲಭ್ಯವಾಗುತ್ತದೆ. ಕಾರಣ ಈ ಯೋಜನೆಯನ್ನು ಜಾರಿ ಮಾಡಿ ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿಕೊಂಡರು.ತಹಸೀಲ್ದಾರ್ ಎಂ. ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ, ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಪಂಚಾಯತ್ ರಾಜ್ ಎಂಜಿನಿಯರ್ ವಿಜಯಕುಮಾರ್, ಸಿಡಿಪಿಒ ವಿರೂಪಾಕ್ಷಿ, ಪಿಡಬ್ಯೂಡಿ ಎಂಜಿನಿಯರ್ ವಿಶ್ವನಾಥ್ ಜಮತ್ನಳ್ಳಿ, ಸಣ್ಣ ನೀರಾವರಿಯ ಸೆಲ್ವಕುಮಾರ್, ಗ್ರಾಪಂ ಅಧ್ಯಕ್ಷ ರಾಘವೇಂದ್ರ ನಾಯಕ್, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ಅಯ್ಯಪ್ಪ ಉಪ್ಪಾರ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣೇಗೌಡ ಪೊಲೀಸ್‌ಪಾಟೀಲ್, ಬಾಪುಗೌಡ, ಸಿದ್ದನಗೌಡ, ಸೋಮನಾಥ ದೊಡ್ಡಮನಿ, ಶರಣಪ್ಪ ಪರಕಿ, ನಾಗರಾಜ ಅರಳಿ, ಗ್ರಾಪಂ ಸದಸ್ಯೆ ದೀಪಾ ರಾಥೋಡ್ ಇದ್ದರು.