ಸಾರಾಂಶ
ಪಾಂಡವಪುರ : ಬೆಂಗಳೂರಿನ ಕಸದ ಟೆಂಡರ್‌ನಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರದ ಆರೋಪವನ್ನು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ. ತಮ್ಮ ಕೈಗೆ ಪೆನ್ನು, ಪೇಪರ್ ಕೊಡಿ ಎಂದು ಹೇಳಿ ಅಧಿಕಾರ ಕೇಳಿದವರು ಕಸದ ಟೆಂಡರ್‌ನಲ್ಲಿ 15 ಸಾವಿರ ಕೋಟಿ ರು. ಕಿಕ್ ಬ್ಯಾಕ್ ಪಡೆಯಲು ಹೊರಟಿದ್ದಾರೆ ಎಂದು ದೂರಿದ್ದಾರೆ.
ಪಟ್ಟಣದ ಪಾಂಡವ ಕ್ರೀಡಾಂಗಣದ ಎದುರು ಜೆಡಿಎಸ್ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಈ ವಿಚಾರ ತಿಳಿಸಿದರು. ಈ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರೆತ್ತದೆ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಕಸ ಎತ್ತಲು ಕಪ್ಪುಪಟ್ಟಿಯಲ್ಲಿರುವ ಗುತ್ತಿಗೆದಾರರೊಬ್ಬರಿಗೆ 30 ವರ್ಷದ ಗುತ್ತಿಗೆ ನೀಡಿದ್ದಾರೆ. 45 ಸಾವಿರ ಕೋಟಿ ರುಪಾಯಿಗೆ ಟೆಂಡರ್ ಕೊಟ್ಟು ಅದರಲ್ಲಿ 15 ಸಾವಿರ ಕೋಟಿ ರು. ಕಿಕ್ ಬ್ಯಾಕ್ ಪಡೆಯಲು ಹೊರಟಿದ್ದಾರೆ. ನನ್ನ ಕೈಗೂ ಪೆನ್ನು, ಪೇಪರ್ ಕೊಡಿ ಎಂದವರು ಈ ಕಿಕ್‌ಬ್ಯಾಕ್ ಪಡೆಯಲು ಹೊರಟಿದ್ದಾರೆ ಎಂದು ಟೀಕಿಸಿದರು.
ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ‘ನನ್ನ ಕೈಗೂ ಪೆನ್ನು, ಪೇಪರ್ (ಅಧಿಕಾರ) ಕೊಡಿ. ಯಾವ ರೀತಿ ಅನುಕೂಲ ಮಾಡಿಕೊಡಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಒಕ್ಕಲಿಗರ ಸಮುದಾಯದವರಿಗೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದರು.