ಸವಣೂರು ಪಟ್ಟಣದಲ್ಲಿರುವ ದೊಡ್ಡ ಹುಣಸೆ ಕಲ್ಮಠದ ಆವರಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜ. 24 ಮತ್ತು 25ರಂದು ಎರಡು ದಿನಗಳ ಕಾಲ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.
ಹಾವೇರಿ: ಸವಣೂರು ಪಟ್ಟಣದಲ್ಲಿರುವ ದೊಡ್ಡ ಹುಣಸೆ ಕಲ್ಮಠದ ಆವರಣದ ಶ್ರೀ ಚನ್ನಬಸವೇಶ್ವರ ಮಂಗಲ ಭವನದಲ್ಲಿ ಜ. 24 ಮತ್ತು 25ರಂದು ಎರಡು ದಿನಗಳ ಕಾಲ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸವಣೂರು ತಾಲೂಕು ಘಟಕಗಳ ಆಶ್ರಯದಲ್ಲಿ ಸಮ್ಮೇಳನ ನಡೆಯಲಿದೆ. ಜ. 24ರಂದು ಬೆಳಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಪರಿಷತ್ ಧ್ವಜ ಹಾಗೂ ಸವಣೂರು ತಾಲೂಕು ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ ನಾಡ ಧ್ವಜಾರೋಹಣ ಮಾಡುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಸವಣೂರು ಎಸಿ ಶುಭಂ ಶುಕ್ಲಾ, ತಹಸೀಲ್ದಾರ್ ರವಿ ಕೊರವರ, ತಾಪಂ ಇಒ ಬಿ.ಎಸ್. ಶಿಡೇನೂರ ಆಗಮಿಸಲಿದ್ದಾರೆ. 8.30ಕ್ಕೆ ನಾಡದೇವಿಗೆ ಅಡವಿಸ್ವಾಮಿಮಠದ ಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಎಸ್ಪಿ ಯಶೋದಾ ವಂಟಗೋಡಿ ಚಾಲನೆ ನೀಡುವರು. ಸಮ್ಮೇಳನಾಧ್ಯಕ್ಷರಾದ ಡಾ.ಎಚ್.ಐ. ತಿಮ್ಮಾಪುರ ಅವರ ಮೆರವಣಿಗೆಗೆ ಭರಮಲಿಂಗೇಶ್ವರ ವೃತ್ತದಲ್ಲಿ ಚಾಲನೆ ನೀಡಲಾಗುವುದು. ಈ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಡಾ. ವಿ.ಕೃ. ಗೋಕಾಕ ವೇದಿಕೆಯ ಚಂದ್ರಶೇಖರ ಪಾಟೀಲ ಸಭಾಂಗಣಕ್ಕೆ ಆಗಮಿಸಲಿದೆ ಎಂದು ಮಾಹಿತಿ ನೀಡಿದರು.ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ ಹಾಗೂ ಕಲ್ಮಠದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಮಾರಂಭ ಉದ್ಘಾಟಿಸಲಿದ್ದು, ಶಾಸಕ ಯಾಸೀರ್‌ಖಾನ್ ಪಠಾಣ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಉಪಸ್ಥಿತರಿರುವರು. ಇದೇ ವೇಳೆ ಸಭಾಂಗಣವನ್ನು ವಿಧಾನಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ, ಪುಸ್ತಕ ಮಳಿಗೆಗಳನ್ನು ಬಸವರಾಜ ಶಿವಣ್ಣನವರ, ವಾಣಿಜ್ಯ ಮಳಿಗೆಗಳನ್ನು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಪುಸ್ತಕಗಳನ್ನು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಉದ್ಘಾಟಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸವಣೂರು ತಾಲೂಕು ಕಸಾಪ ಅಧ್ಯಕ್ಷ ಚಂದ್ರಗೌಡ ಪಾಟೀಲ, ನಿಕಟಪೂರ್ವ ಅಧ್ಯಕ್ಷ ಪ್ರಭು ಅರಗೋಳ, ಹೋಬಳಿ ಅಧ್ಯಕ್ಷ ಬಸನಗೌಡ ಪಾಟೀಲ ಇದ್ದರು.ಎಂಟು ಗೋಷ್ಠಿಗಳ ಆಯೋಜನೆ: ಈ ಸಮ್ಮೇಳನದಲ್ಲಿ ಕನ್ನಡ ಕನ್ನಡ ರ‍್ರಿ ನಮ್ಮ ಸಂಗಡ, ಸ್ತ್ರೀ ಪರ ಚಿಂತನೆಗಳು, ವೈವಿಧ್ಯತೆ ಗೋಷ್ಠಿ, ಕವಿಗೋಷ್ಠಿ, ನೇಗಿಲಯೋಗಿ, ಸಂಕೀರ್ಣ ಗೋಷ್ಠಿ, ದಮನಿತರ ಧ್ವನಿ, ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಎಂಬ ವಿವಿಧ ವಿಷಯಗಳ ಮೇಲೆ ಒಟ್ಟು 8 ಗೋಷ್ಠಿಗಳು ನಡೆಯಲಿದ್ದು, ಜ. 25ರಂದು ಸಂಜೆ 5.45ಕ್ಕೆ ಬಹಿರಂಗ ಅಧಿವೇಶನ ಜರುಗಲಿದೆ. ಅಲ್ಲದೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕೂಡ ಜರುಗಲಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳು, ಕನ್ನಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಾವೇರಿ ಜಿಲ್ಲೆಯ 15ನೇ ಕನ್ನಡ ಜಾತ್ರೆ ಯಶಸ್ವಿಗೊಳಿಸಿ ಕೊಡಬೇಕು ಎಂದು ಮನವಿ ಮಾಡಿದರು.