15ರಿಂದ ರಾಷ್ಟ್ರೀಯ ನವಜಾತು ಶಿಶು ಸಪ್ತಾಹ

| Published : Nov 14 2023, 01:15 AM IST

ಸಾರಾಂಶ

ನ.15 ರಿಂದ 21ರವರೆಗೆ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಗುವಿನ ಉಳಿವು, ವಿಕಾಸ ಮತ್ತು ಆರೈಕೆಯ ಪ್ರಾಮುಖ್ಯತೆ ಬಗ್ಗೆ ಜನಜಾಗೃತಿ ಮೂಡಿಸುವ ಸದುದ್ದೇಶದಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನ.15 ರಿಂದ 21ರವರೆಗೆ ರಾಷ್ಟ್ರೀಯ ನವಜಾತ ಶಿಶು ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ಈ ಸಪ್ತಾಹ ಸಂದರ್ಭ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವೇದಿಕೆಗಳು, ಸಮುದಾಯ ವ್ಯಾಪ್ತಿ, ಮನೆಗಳು ಮತ್ತಿತರರಿಗೆ ಪೋಷಣೆಯ ಮಾಹಿತಿ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಗುಣಮಟ್ಟ, ಸುರಕ್ಷತೆ, ಸೌಲಭ್ಯ, ನವಜಾತ ಶಿಶುಗಳ ಆರೈಕೆಯ ಸಂಪರ್ಕ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಸಂಬಂಧಿಸಿದ ಚಟುವಟಕೆಗಳನ್ನು ಆಯೋಜಿಸುವಂತೆ ಜಿಲ್ಲೆಯ ಎಲ್ಲ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಅನಾರೋಗ್ಯಪೀಡಿತ ನವಜಾತ ಶಿಶುಗಳಿಗೆ ದಿನದ 24 ಗಂಟೆ ಸೇವೆ ಒದಗಿಸುವ ವ್ಯವಸ್ಥೆ ಜಿಲ್ಲಾದ್ಯಂತ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಸೂಚಿಸಲಾಗಿದೆ. ನವಜಾತ ಶಿಶುಗಳ ಆರೈಕೆ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳುವಂತೆ ಹೆರಿಗೆ ಕೊಠಡಿಗಳು ಮತ್ತು ಪ್ರಸೂತಿ ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ನವಜಾತ ಶಿಶುಗಳ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ. ಸಾರ್ವಜನಿಕರು ಈ ಸೌಲಭ್ಯದ ಲಾಭ ಪಡೆಯಲು ತಿಳಿಸಿದರು.

ನ್ಯೂಮೋನಿಯಾ ನಿರ್ವಹಣೆ:

ಶಿಶು ಮರಣಕ್ಕೆ ಕಾರಣವಾಗುವ ಮಾರಣಾಂತಿಕ ಸೋಂಕುಗಳಲ್ಲಿ ಬಾಲ್ಯಾವಧಿ, ನ್ಯೂಮೋನಿಯಾ (ಶ್ವಾಸಕೋಶ ಸೋಂಕು)ವು ಪ್ರಮುಖವಾದುದಾಗಿದೆ. ಶಿಶುಮರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯಕ್ಕೆ ಅರಿವು ಮೂಡಿಸುವ ಅಗತ್ಯವಿದೆ. ಉತ್ತಮ ಆರೋಗ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವುದರೊಂದಿಗೆ ಆರೋಗ್ಯ ಸೇವೆಗಳನ್ನು ಬಲಪಡಿಸಿ, 2025ರ ವೇಳೆಗೆ ನ್ಯೂಮೋನಿಯಾದಿಂದ ಸಂಭವಿಸುವ ಸಾವುಗಳ ಸಂಖ್ಯೆಯನ್ನು 1000 ಜೀವಂತ ಜನನಕ್ಕೆ 3ಕ್ಕಿಂತಲೂ ಕಡಮೆ ಮಾಡುವ ಉದ್ದೇಶ ಆರೋಗ್ಯ ಇಲಾಖೆ ಹೊಂದಿದೆ ಎಂದರು.

ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ:

ನ.15ರಿಂದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಜಿಲ್ಲಾದ್ಯಂತ ನಡಿಯಲಿದೆ. ಮಕ್ಕಳ ಮರಣಕ್ಕೆ ಕಾರಣವಾಗುವ ಆರೋಗ್ಯ ಸಮಸ್ಯೆಗಳಲ್ಲಿ ಇದು ಮುಖ್ಯವಾಗಿದೆ. ಆದಕಾರಣ ಇದನ್ನು ತಡೆಗಟ್ಟಲು ದೇಶ ರಾಜ್ಯ, ಜಿಲ್ಲಾದ್ಯಂತ ಏಕಕಾಲದಲ್ಲ ಅಭಿಯಾನ ರೂಪದಲ್ಲಿ ಸಮುದಾಯ ಜಾಗೃತಿ- ಸೇವೆ ನೀಡಲು ವಿಶೇಷ ಪಾಕ್ಷಿಕ ಕಾರ್ಯಕ್ರಮವನ್ನು ಅನುಷ್ಟಾನಕ್ಕೆ ತರಲಾಗಿದೆ ಎಂದು ತಿಳಿಸಿದರು.

- - - (-ಫೋಟೋ: ಡಾ.ಸೆಲ್ವಮಣಿ, ಜಿಲ್ಲಾಧಿಕಾರಿ)