ಸಾರಾಂಶ
ಬೆಂಗಳೂರು : ದುಷ್ಕರ್ಮಿಗಳು ಮುಖವನ್ನು ಬೆಡ್‌ಶೀಟ್‌ನಿಂದ ಮುಚ್ಚಿಕೊಂಡು ಎಟಿಎಂ ಕೇಂದ್ರಕ್ಕೆ ನುಗ್ಗಿ ಎಟಿಎಂ ಯಂತ್ರ ಮುರಿದು 16.56 ಲಕ್ಷ ರು. ದರೋಡೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ಆಕ್ಸಿಸ್ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಶನಿವಾರ ಮುಂಜಾನೆ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರ ಮೂರು ವಿಶೇಷ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ನೋಂದಣಿ ಸಂಖ್ಯೆಯ ಕಾರಿನಲ್ಲಿ ಎಟಿಎಂ ಕೇಂದ್ರದ ಬಳಿ ಬಂದಿರುವ ಇಬ್ಬರು ದುಷ್ಕರ್ಮಿಗಳು, ಮುಖವನ್ನು ಬೆಡ್‌ಶೀಟ್‌ನಿಂದ ಮುಚ್ಚಿಕೊಂಡು ಎಟಿಎಂ ಕೇಂದ್ರದ ಸಿಸಿ ಟೀವಿ ಕ್ಯಾಮರಾಗಳಿಗೆ ಕಪ್ಪು ಬಣ್ಣ ಸ್ಪ್ರೇ ಮಾಡಿದ್ದಾರೆ. ನಂತರ ಗ್ಯಾಸ್ ಕಟರ್ ಮುಖಾಂತರ ಎಟಿಎಂ ಯಂತ್ರದ ಕ್ಯಾಶ್ ಬಾಕ್ಸ್ ಕತ್ತರಿಸಿ 16.56 ಲಕ್ಷ ರು. ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಗುರುತು ಸಿಸಿ ಟೀವಿಯಲ್ಲಿ ಸೆರೆ:
ದುಷ್ಕರ್ಮಿಗಳು ಮುಖವನ್ನು ಬೆಡ್‌ಶೀಟ್‌ನಿಂದ ಮುಚ್ಚಿಕೊಂಡು ಎಟಿಎಂ ಕೇಂದ್ರ ಪ್ರವೇಶಿಸಿರುವುದು, ಸಿಸಿಟಿವಿ ಕ್ಯಾಮರಾಗಳಿಗೆ ಕಪ್ಪು ಬಣ್ಣದ ದ್ರಾವಣ ಸ್ಪ್ರೇ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ದುಷ್ಕರ್ಮಿಗಳ ಗುರುತು ಪತ್ತೆಯಾಗಿದೆ. ಹರಿಯಾಣ ಅಥವಾ ಉತ್ತರ ಭಾರತದ ಮೂಲದ ವ್ಯಕ್ತಿಗಳು ಈ ಕೃತ್ಯ ಎಸೆಗಿರುವ ಶಂಕೆ ವ್ಯಕ್ತವಾಗಿದೆ.
ಮೂರು ತಂಡದಿಂದ ಶೋಧ
ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರು ತಮಿಳುನಾಡು ನೋಂದಣಿ ಸಂಖ್ಯೆ ಹೊಂದಿದ್ದು, ಈ ಬಗ್ಗೆ ಪರಿಶೀಲಿಸಿದಾಗ ದುಷ್ಕರ್ಮಿಗಳನ್ನು ಆ ಕಾರನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ. ದುಷ್ಕರ್ಮಿಗಳ ಬಂಧನಕ್ಕೆ ರಚಿಸಲಾಗಿರುವ ಮೂರು ವಿಶೇಷ ತಂಡಗಳು ಬೆಂಗಳೂರು, ನೆರೆಯ ತಮಿಳುನಾಡು ಸೇರಿದಂತೆ ವಿವಿಧೆಡೆ ಶೋಧ ಕಾರ್ಯದಲ್ಲಿ ತೊಡಗಿವೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.