ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ ಬದಲಿಸಲು ಬೇಕಿದೆ ₹165 ಕೋಟಿ

| Published : Aug 15 2024, 01:46 AM IST

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ ಬದಲಿಸಲು ಬೇಕಿದೆ ₹165 ಕೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಲಾಶಯದ ಗೇಟ್‌ಗಳು ಈಗ ತೀರಾ ಹಳೆಯದಾಗಿವೆ. 1955ರಲ್ಲೇ ಜಲಾಶಯ ನಿರ್ಮಾಣ ಮಾಡಲಾಗಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ಗಳು ಹಳೆಯದಾಗಿರುವ ಹಿನ್ನೆಲೆಯಲ್ಲಿ ಈ ಗೇಟ್‌ಗಳನ್ನು ಸಂಪೂರ್ಣವಾಗಿ ಬದಲಿಸಬೇಕಿದ್ದರೆ ಈಗ ₹165 ಕೋಟಿ ಅನುದಾನ ಬೇಕಿದೆ. ಮೂರೂ ರಾಜ್ಯಗಳು ಸೇರಿ ಈ ಅನುದಾನ ಮಂಜೂರು ಮಾಡಿದರೆ ಜಲಾಶಯದ ಗೇಟ್‌ಗಳಿಗೆ ಬಲ ದೊರೆಯಲಿದೆ.

ಆ.10ರ ರಾತ್ರಿ 19ನೇ ನಂ. ಕ್ರಸ್ಟ್‌ ಗೇಟ್‌ ಸರಪಳಿ ತುಂಡಾಗದ ಬಳಿಕ ಜಲಾಶಯದ ಉಳಿದ 32 ಕ್ರಸ್ಟ್‌ ಗೇಟ್‌ಗಳ ಮರು ನಿರ್ಮಾಣದ ಬಗ್ಗೆ ಈಗ ಚರ್ಚೆ ಎದ್ದಿದೆ. ಈ ಜಲಾಶಯದ ಗೇಟ್‌ಗಳ ಜೀವಿತಾವಧಿ 40ರಿಂದ 45 ವರ್ಷಗಳಾಗಿವೆ. ಈ ಜಲಾಶಯದ ಗೇಟ್‌ಗಳು ಈಗ ತೀರಾ ಹಳೆಯದಾಗಿವೆ. 1955ರಲ್ಲೇ ಜಲಾಶಯ ನಿರ್ಮಾಣ ಮಾಡಲಾಗಿದೆ. ದಶಕಗಳ ಹಿಂದೆಯೇ ಗೇಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದರೂ ಬದಲಿಸುವ ಕಾರ್ಯ ಮಾತ್ರ ಇನ್ನೂ ಆಗಿಲ್ಲ.

ನಿರ್ವಹಣೆಯೇ ಜೀವಾಳ:

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳನ್ನು ನಾಜೂಕಾಗಿ ನಿರ್ವಹಣೆ ಮಾಡಿರುವ ಹಿನ್ನೆಲೆಯಲ್ಲಿ ಇದುವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಜಲಾಶಯದ ಕ್ರಸ್ಟ್‌ ಗೇಟ್‌ಗಳಿಗೆ ನಿರ್ವಹಣೆಯೇ ಜೀವಾಳವಾಗಿದೆ. ಹಾಗಾಗಿ ಇದುವರೆಗೆ ಯಾವುದೇ ದೊಡ್ಡ ಪ್ರಮಾದ ಆಗಿರಲಿಲ್ಲ. ಈಗ ಈ ಘಟನೆ ನಡೆದಿದ್ದು, ಎಚ್ಚೆತ್ತು ಉಳಿದ ಕ್ರಸ್ಟ್‌ಗೇಟ್‌ಗಳ ಬಗ್ಗೆಯೂ ಪರಿಶೀಲಿಸಬೇಕಿದೆ. ಈ ಗೇಟ್‌ಗಳನ್ನು ಶಾಶ್ವತವಾಗಿ ಬದಲಿಸುವ ಕೆಲಸ ಆಗಬೇಕಿದೆ ಎಂದು ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಬದಲಿಸಲು ತಲಾ ಒಂದು ಗೇಟ್‌ಗೆ ₹5 ಕೋಟಿ ವೆಚ್ಚ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹಾಗಾಗಿ 33 ಗೇಟ್‌ಗೆ ₹165 ಕೋಟಿ ಆಗಲಿದೆ. ಇದಕ್ಕಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯ ಸರ್ಕಾರಗಳು ಅನುದಾನ ಒದಗಿಸಬೇಕು. ತುಂಗಭದ್ರಾ ಮಂಡಳಿಗೆ ಅನುದಾನ ಒದಗಿಸಿದರೆ ಈ ಗೇಟ್‌ ಗಳನ್ನು ಹಂತ ಹಂತವಾಗಿ ಬದಲಿಸಬಹುದಾಗಿದೆ. ಈ ಗೇಟ್‌ಗಳು ಹಳೇ ಮಾದರಿಯದ್ದಾಗಿವೆ. ಚೈನ್‌ ಹೊಂದಿರುವ ಈ ಗೇಟ್‌ಗಳನ್ನು ಹಗ್ಗಕ್ಕೂ ಬದಲಿಸಬಹುದು. ಈಗಿನ ಆಧುನಿಕ ಶೈಲಿಯ ಡಿಸೈನ್‌ಗೂ ಬದಲಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಜಲಾಶಯ ರಾಜ್ಯದ 10 ಲಕ್ಷ ಎಕರೆ ಸೇರಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ 3 ಲಕ್ಷ ಎಕರೆಗೂ ನೀರು ಒದಗಿಸುತ್ತದೆ. ಇನ್ನು ಕೈಗಾರಿಕೆಗಳು ಮತ್ತು ಕುಡಿಯುವ ನೀರಿಗೂ ಆಸರೆಯಾಗಿದೆ. ಈ ಜಲಾಶಯ ರಾಜ್ಯದ ಪಾಲಿನ ಅನ್ನದ ಬಟ್ಟಲಾಗಿದ್ದು, ಈ ಜಲಾಶಯದ ನೀರಿನಿಂದಲೇ ಸೋನಾಮಸೂರಿ ಅಕ್ಕಿಯನ್ನು ಬೆಳೆಯಲಾಗುತ್ತಿದೆ. ಇನ್ನು ಗಂಗಾವತಿ ಭಾಗದಲ್ಲಿ ಭಾಸುಮತಿ ಅಕ್ಕಿ ಕೂಡ ಬೆಳೆಯಲಾಗುತ್ತದೆ. ಈಗ ಈ ಅನ್ನದ ಬಟ್ಟಲಿಗೆ ಕೊಡಲಿ ಪೆಟ್ಟು ಬಿದ್ದಿದೆ.

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ ಬದಲಿಸಬೇಕು. ತುಂಗಭದ್ರಾ ಮಂಡಳಿಗೆ ಮೂರು ರಾಜ್ಯಗಳ ಸರ್ಕಾರಗಳು ಅನುದಾನ ಒದಗಿಸಬೇಕು. ಇದರಿಂದ ಜಲಾಶಯವನ್ನು ನಾವು ಸಂರಕ್ಷಣೆ ಮಾಡಬಹುದು. ಆಗುವ ಅನಾಹುತಗಳಿಗೆ ಶಾಶ್ವತವಾಗಿ ಪರಿಹಾರ ಒದಗಿಸಬಹುದು ಎನ್ನುತ್ತಾರೆ ಹೊಸಪೇಟೆ ರೈತ ಸಂಘದ ಅಧ್ಯಕ್ಷ ಕಟಗಿ ಜಂಬಯ್ಯ ನಾಯಕ.