೨೧ರಿಂದ ಸ್ವರ್ಣವಲ್ಲೀಯಲ್ಲಿ 16ನೇ ಕೃಷಿ ಜಯಂತಿ

| Published : May 10 2024, 11:49 PM IST

ಸಾರಾಂಶ

ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮಿಗಳು ಕೃಷಿ ಜಯಂತಿಯನ್ನು ಉದ್ಘಾಟಿಸಲಿದ್ದಾರೆ.

ಶಿರಸಿ: ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದನ್ನು ತಪ್ಪಿಸಿ, ಯುವ ಸಮುದಾಯ ಕೃಷಿಯಲ್ಲಿ ತೊಡಗಿಕೊಂಡು ನೆಮ್ಮದಿಯ ಬದುಕು ನೀಡುವ ಬೇಸಾಯ ಮಾಡಬೇಕು ಎಂಬ ಆಶಯದೊಂದಿಗೆ ಆರಂಭಿಸಲಾದ ೧೬ನೇ ವರ್ಷದ ಕೃಷಿ ಜಯಂತಿಯನ್ನು ಲಕ್ಷ್ಮಿನೃಸಿಂಹ ರಥೋತ್ಸವದ ಶುಭ ಸಂದರ್ಭದಲ್ಲಿ ಮೇ ೨೧ ಮತ್ತು ೨೨ರಂದು ಹಮ್ಮಿಕೊಳ್ಳಲಾಗಿದೆ ಎಂದು ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.

ಸ್ವರ್ಣವಲ್ಲೀ ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಟಿಎಸ್‌ಎಸ್ ಶಿರಸಿ, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಗ್ರಾಮಾಭ್ಯುದಯ ಸ್ವರ್ಣವಲ್ಲೀ ಸಹಯೋಗದಲ್ಲಿ ಜೀವವೈವಿಧ್ಯ ಮಂಡಳಿ, ಶಿರಸಿ ತಾಲೂಕು ಪಂಚಾಯಿತಿ ಹಾಗೂ ಸಸ್ಯಲೋಕ ಸ್ವರ್ಣವಲ್ಲೀ ಸಹಕಾರದಲ್ಲಿ ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನದಿಂದ ಕಾರ್ಯಕ್ರಮ ಆರಂಭವಾಗಲಿದೆ. ಮೇ ೨೧ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮಿಗಳು ಕೃಷಿ ಜಯಂತಿಯನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಸಸ್ಯಲೋಕದ ಸಂಚಾಲಕ ಅನಂತ ಹೆಗಡೆ ಅಶೀಸರ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಹೆಗಡೆ, ಬೆಂಗಳೂರು ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಜಗತ್ ರಾಮ್, ಅರಣ್ಯ ಮಹಾವಿದ್ಯಾಲಯದ ಡೀನ್ ಆರ್. ವಾಸುದೇವ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ದೇವರ ಕಾಡು ನಾಮಫಲಕ ಅನಾವರಣ ಹಾಗೂ ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷಾಂಕ ಬಿಡುಗಡೆ ಮತ್ತು ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿ ಪ್ರದಾನ ಕಾರ್ಯ ಜರುಗಲಿದೆ.

ವಿಚಾರಪೂರ್ಣ ಗೋಷ್ಠಿಗಳು: ಮೇ ೨೧ರ ಸಂಜೆ ೪ ಗಂಟೆಗೆ ಬಾಗಲಕೋಟೆ ತೋಟಗಾರಿಕೆ ವಿವಿಯ ವಿಸ್ತರಣಾ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಹೆಗಡೆ ಅಧ್ಯಕ್ಷತೆಯಲ್ಲಿ ಮಲೆನಾಡಿನ ಕೃಷಿಯಲ್ಲಿ ಭವಿಷ್ಯದ ಸವಾಲುಗಳು ಎಂಬ ವಿಷಯದ ಕುರಿತು ಸಿಂಜೆಂಟಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಡಾ. ಸತೀಶ ಹೆಗಡೆ ಹುಳಗೋಳ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಲಿದ್ದಾರೆ. ಯುವ ಪ್ರಗತಿಪರ ಕೃಷಿಕ ಸುಜಯ ಭಟ್ಟ ಹೊಸಳ್ಳಿ ಹಾಗೂ ಚಿನ್ಮಯ್ ಹೆಗಡೆ ಬೊಮ್ಮನಳ್ಳಿ ಯುವ ಕೃಷಿಕರ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಟಿಎಸ್‌ಎಸ್ ಕೃಷಿ ಗ್ರಾಮ ಯೋಜನೆ ಮಾಹಿತಿ ನೀಡಲಾಗುತ್ತದೆ.

ಮೇ ೨೨ರ ಬೆಳಗ್ಗೆ ೧೦.೩೦ ಗಂಟೆಗೆ ಶ್ರೀಮಠದ ಕೃಷಿ ಉಪ ಸಮಿತಿಯ ನೇತೃತ್ವದಲ್ಲಿ ಶ್ರೀಮಠದ ತೋಟ ಮತ್ತು ಗೋಶಾಲೆಯನ್ನು ವೀಕ್ಷಣೆ ಹಾಗೂ ತೋಟಗಾರಿಕೆ ಹಾಗೂ ಹೈನುಗಾರಿಕೆ ಕುರಿತು ಯುವ ಕೃಷಿಕರಿಗೆ ವಿಶೇಷ ಮಾಹಿತಿ ನೀಡಲಾಗುತ್ತದೆ. ಕೃಷಿ ತಜ್ಞರಾದ ಲಿಂಗನಮಕ್ಕಿಯ ಡಾ. ಶ್ರೀಕಾಂತ ರಾವ್ ಮೊಹರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಶಿರಸಿಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರೋಪ ಸಮಾರಂಭ: ಅಂದು ಸಂಜೆ ೫ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿವಿಯ ಶಿಕ್ಷಣ ನಿರ್ದೇಶಕ ಡಾ. ಎನ್.ಕೆ. ಹೆಗಡೆ ಹಾಗೂ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪಾಲ್ಗೊಳ್ಳಲಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಉತ್ತಮ ಕೃಷಿಕ(ಕೃಷಿ ಕಂಠೀರವ), ಸಾಧಕ ಕೃಷಿ ಮಹಿಳೆ, ಉತ್ತಮ ಅವಿಭಕ್ತ ಕೃಷಿ ಕುಟುಂಬ, ಸಾಧಕ ಕೃಷಿ ಕುಶಲಕರ್ಮಿಗಳಿಗೆ ಸನ್ಮಾನ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ, ಸದಸ್ಯ ಎಸ್.ಎಲ್. ತ್ಯಾಗಲಿ, ಸಚ್ಚಿದಾನಂದ ಹೆಗಡೆ, ರವೀಂದ್ರ ಹೆಗಡೆ‌, ರತ್ನಾಕರ ಬಾಡಲಕೊಪ್ಪ, ಶ್ರೀಧರ ಗುಡ್ಡೆಮನೆ ಇತರರು ಇದ್ದರು.ಸಾಂಸ್ಕೃತಿಕ ಉತ್ಸವ

ಮೇ ೨೧ರಂದು ಸಂಜೆ ೬.೩೦ರಿಂದ ಈಶ್ವರ ದಾಸ ಕೊಪ್ಪೇಸರ ಅವರಿಂದ ಕೀರ್ತನೆ ಮೇ ೨೨ರಂದು ಸಮಾರೋಪ ಸಮಾರಂಭದ ಬಳಿಕ ರಾಧಾ ದೇಸಾಯಿ ಧಾರವಾಡ, ಗೀತಾ ಹೆಗಡೆ ಮುಂಡಿಗೇಸರ, ಶ್ರೀಲತಾ ಭಟ್ ಹೆಗ್ಗರ್ಸಿಮನೆ ಭಕ್ತಿ ಸಂಗೀತ ಕಾರ್ಯಕ್ರಮ ಹಾಗೂ ರಥೋತ್ಸವದ ನಂತರದಲ್ಲಿ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ ನೇತೃತ್ವದಲ್ಲಿ ಹೆಸರಾಂತ ಕಲಾವಿದರಿಂದ ಚಂದ್ರಹಾಸ ಚರಿತ್ರೆ ಯಕ್ಷಗಾನ ಬಯಲಾಟ ನಡೆಯಲಿದೆ.ಧಾರ್ಮಿಕ ಉತ್ಸವ

ಮೇ ೨೨ರಂದು ನಡೆಯುವ ಲಕ್ಷ್ಮಿ ನೃಸಿಂಹ ಮಹಾರಥೋತ್ಸವ ಹಿನ್ನೆಲೆ ಹೊರಗಾಣಿಕೆ ಸಮರ್ಪಣೆ, ಫಲಪಂಚಾಮೃತ, ಶತರುದ್ರಾಭಿಷೇಕ, ಪೂಜೆ ಮಂಗಳಾರತಿ, ತೀರ್ಥ ಪ್ರಸಾದ, ರಾತ್ರಿ ಮಹಾ ರಥೋತ್ಸವ, ಅಷ್ಟಾವಧಾನ ಸೇವೆ ನಡೆಯಲಿವೆ.