ಸಾರಾಂಶ
ಮಂಡ್ಯ : ನಾಯಿಗಳು ಅಟ್ಟಾಡಿಸಿದ ವೇಳೆ ಕುರಿಮಂದೆ ಚದುರಿದ ಪರಿಣಾಮ 17 ಕುರಿಗಳು ರೈಲ್ವೆ ಹಳಿ ದಾಟಲು ಯತ್ನಿಸಿದ ವೇಳೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊಸಬೂದನರು ಬಳಿ ಸಂಭವಿಸಿದೆ.
ಹೊಸಬೂದನೂರು ಗ್ರಾಮದ ಜಯಮ್ಮ ಅವರಿಗೆ ಸೇರಿದ 17 ಕುರಿಗಳು ಮೃತಪಟ್ಟಿದ್ದು, ಸುಮಾರು 2 ಲಕ್ಷ ರು.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ. ಜಯಮ್ಮ ಅವರು ಬಯಲಿನಲ್ಲಿ ಕುರಿ ಮಂದೆಯನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಾಯಿಗಳು ಅಟ್ಟಾಡಿಸಿದಾಗ ಚದುರಿದ ಕುರಿಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರಿಂದ ವೈಯಕ್ತಿಕ ಪರಿಹಾರ:
ಘಟನೆಯ ಸುದ್ದಿ ತಿಳಿದ ಶಾಸಕ ಪಿ.ರವಿಕುಮಾರ್‌ಗೌಡ ಅವರು ಕುರಿಗಳನ್ನು ಕಳೆದುಕೊಂಡು ನಷ್ಟಕ್ಕೀಡಾಗಿರುವ ಜಯಮ್ಮ ಅವರಿಗೆ ವೈಯಕ್ತಿಕ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಬೈಕ್ ಡಿಕ್ಕಿ: ಪಾದಚಾರಿ ಮಹಿಳೆಗೆ ತೀವ್ರ ಗಾಯ
ಹಲಗೂರು: ಬೈಕ್ ಡಿಕ್ಕಿಯಾಗಿ ಪಾದಚಾರಿ ಮಹಿಳೆ ತೀವ್ರ ಗಾಯಗೊಂಡಿರುವ ಘಟನೆ ಸಮೀಪದ ಅಗಸನಪುರ ಗ್ರಾಮದಲ್ಲಿ ಇತ್ತೀಚಿಗೆ ನಡೆದಿದೆ. ಗ್ರಾಮದ ನಿವಾಸಿಗಳಾದ ಅಮ್ಮಣ್ಣಿ ಮತ್ರು ರಾಜಮ್ಮ ಅವರು ಕಳೆದ ಜ.22 ರಂದು ಬೆಳಗಿನ ಜಾವ ಕಬ್ಬಾಳಮ್ಮ ದೇವಸ್ಥಾನದ ಬಳಿ ನಡೆದು ಹೋಗುತ್ತಿದ್ದಾಗ ಹಾಡ್ಲಿ ಕಡೆಯಿಂದ ಬಂದ ಬೈಕ್ ಅಮ್ಮಣ್ಣಿ ಅವರಿಗೆ ಡಿಕ್ಕಿ ಹೊಡೆದಿದೆ. ಮೋಟಾರ್ ಬೈಕ್ ಸವಾರ ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಅಮ್ಮಣ್ಣಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.