ಹುಬ್ಬಳ್ಳಿ:

ಇಲ್ಲಿಯ ಲೋಹಿಯಾನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸುತ್ತಿರುವ ಬೃಹತ್ ಕ್ರೀಡಾ ಸಂಕೀರ್ಣದ ಕಾಮಗಾರಿ ಶೇ. 95ರಷ್ಟು ಮುಗಿದಿದೆ. ಇನ್ನುಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕ್ರೀಡಾ ಸಂಕೀರ್ಣದ ಕಾಮಗಾರಿಯನ್ನು ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ₹ 175 ಕೋಟಿ ವೆಚ್ಚದಲ್ಲಿ ಬೃಹತ್ ಕ್ರೀಡಾ ಸಂಕೀರ್ಣದ ಕಾಮಗಾರಿ ಈಗಾಗಲೇ ಶೇ. 95ರಷ್ಟು ಮುಗಿದಿದ್ದು, ಸಣ್ಣ-ಪುಟ್ಟ ಕೆಲಸಗಳು ಬಾಕಿ ಇವೆ. ಶೇ. 91ರಷ್ಟು ಅನುದಾನ ಈಗಾಗಲೇ ಬಿಡುಗಡೆ ಸಹ ಆಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸದಲಾಗಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.ಕ್ರೀಡಾ ಸಂಕೀರ್ಣಕ್ಕೆ ರಾಜ್ಯ ಸರ್ಕಾರ ಭೂಮಿ ನೀಡಿದೆ. ಇದರ ನಿಯಮಗಳ ಜಾರಿಗೆ, ನಿರ್ವಹಣೆ ಹಾಗೂ ಇನ್ನಿತರ ಕಾರ್ಯಗಳನ್ನು ರಾಜ್ಯ ಸರ್ಕಾರ ಮಟ್ಟದಲ್ಲಿ ಆಗಬೇಕಿದೆ. ಕ್ರೀಡಾ ಸಚಿವ ಜಿ. ಪರಮೇಶ್ವರ ಹಾಗೂ ಸಂಬಂಧಿಸಿ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ. ಕೇಂದ್ರದಿಂದ ಏನೇ ಸಹಕಾರ ಬೇಕಿದ್ದರೂ ನಾವು ನೀಡುತ್ತೇವೆ ಎಂದು ಹೇಳಿದರು. ಹುಬ್ಬಳ್ಳಿ-ಧಾರವಾಡ ಮಧ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆದಷ್ಟು ಬೇಗ ಮುಗಿಯಲಿದೆ. ಭೂಸ್ವಾಧೀನ ಸೇರಿದಂತೆ ಹಲವಾರು ತಾಂತ್ರಿಕ ಸಮಸ್ಯೆಗಳಿಂದ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಆಗಿಲ್ಲ. ಸದ್ಯ ಸಮಸ್ಯೆಗಳ ಪರಿಹರಿಸಲಾಗಿದೆ ಎಂದ ಅವರು, ಧಾರವಾಡದಲ್ಲಿ ವಿಧಿವಿಜ್ಞಾನ ಕೇಂದ್ರ ಸ್ಥಾಪನೆಗೆ ಈಗಾಗಲೇ ಟೆಂಡರ್ ನೀಡಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ನಗರದಲ್ಲಿ ಘನತ್ಯಾಜ್ಯ ಸಂಸ್ಕರಿಸಿ ಹಸಿರು ಇದ್ದಿಲು ಉತ್ಪಾದಿಸುವ ಆತ್ಯಾಧುನಿಕ ಘಟಕವನ್ನು ₹ ೭೮ ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ದೇಶದಲ್ಲಿ ವಾರಣಾಸಿ ಬಿಟ್ಟರೆ ಹುಬ್ಬಳ್ಳಿಯಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಕಸಕ್ಕೆ ಮುಕ್ತಿ ದೊರೆಯಲಿದೆ. ಈ ಜಾಗಕ್ಕೆ ಹೋಗಲು ₹ ೩ ಕೋಟಿ ವೆಚ್ಚದಲ್ಲಿ ರಸ್ತೆ ಸಹ ನಿರ್ಮಿಸಲಾಗುತ್ತಿದೆ. ಇದನ್ನು ಸಹ ಶೀಘ್ರದಲ್ಲಿ ಉದ್ಘಾಟಿಸಲಾಗುವುದು ಎಂದು ಕೇಂದ್ರ ಸಚಿವ ಜೋಶಿ ತಿಳಿಸಿದರು.


ಕ್ರೀಡಾ ಸಂಕೀರ್ಣದಲ್ಲಿ ಈಜುಕೋಳ, ಶೂಟಿಂಗ್ ಕೇಂದ್ರ, ಬ್ಯಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್ ಕೋಟ್ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಈ ವೇಳೆ ಅಧಿಕಾರಿಗಳಿಂದ ಕಾಮಗಾರಿ ಯಾವ ಹಂತದಲ್ಲಿದೆ. ಇನ್ನು ಎಷ್ಟು ಬಾಕಿ ಉಳಿದಿದೆ, ಅನುದಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆದು, ಉಳಿದ ಕಾಮಗಾರಿ ತಕ್ಷಣ ಪೂರ್ಣಗೊಳಿಸಲು ಸೂಚಿಸಿದರು.ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೊಷ ಚವ್ಹಾಣ, ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪ್ರಭು ನವಲಗುಂದಮಠ, ಅನುಪ ಬಿಜವಾಡ ಸೇರಿದಂತೆ ಅನೇಕರಿದ್ದರು.

ಕ್ರೀಡಾ ಸಂಕೀರ್ಣದಲ್ಲಿ ಬ್ಯಾಡ್ಮಿಂಟನ್‌, ಶೂಟಿಂಗ್‌ ಆಡುವ ಆಡುವ ಮೂಲಕ ಗಮನ ಸೆಳೆದರು.ಬೈಪಾಸ್‌ನಲ್ಲಿ ರೈಲು ಸಂಚಾರ:

ಮೈಸೂರು- ಪಂಡರಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಗೋಲ್ ಗುಂಬಜ್ ರೈಲು ಸಂಚಾರವನ್ನು ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದಿಂದ ಸಂಚರಿಸಲಿದೆ. ವಿಜಯಪುರ ಹಾಗೂ ಬಾಗಲಕೋಟೆ ಸಂಸದರ ಬಹುದಿನ ಬೇಡಿಕೆ ಇದ್ದಾಗಿತ್ತು. ಈ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿಯ ಮಧ್ಯೆ ಸಾಕಷ್ಟು ರೈಲುಗಳಿವೆ. ಇದರಿಂದ ಹುಬ್ಬಳ್ಳಿ ಅವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.