ಮಹೇಶ ಛಬ್ಬಿ

ಮುಳಗುಂದ: ಬಯಲು ಬಹಿರ್ದೆಸೆ ಮುಕ್ತವಾಗಿಸಲು ಗ್ರಾಮೀಣ ಮಟ್ಟದಲ್ಲಿ ಪಂಚಾಯಿತಿಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ನೀಡುತ್ತದೆ. ಆದರೆ, ಸ್ಥಳೀಯ ಪಪಂ ಜನತೆ ಈ ಯೋಜನೆಯಿಂದ ವಂಚಿತರಾಗಿದ್ದು, ಪಟ್ಟಣದಲ್ಲಿ ಬಯಲು ಬಹಿರ್ದೆಸೆಗೆ ಕಡಿವಾಣ ಇಲ್ಲದಂತಾಗಿದೆ.

ಗ್ರಾಪಂ ವ್ಯಾಪ್ತಿಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಲು ಪಜಾ, ಪಪಂ ಕೇಂದ್ರ ಸರ್ಕಾರದಿಂದ ₹7200, ರಾಜ್ಯ ಸರ್ಕಾರದಿಂದ ₹12800 ಒಟ್ಟು ₹20000 ಹಾಗೂ ಇತರೆ ಜನಾಂಗಕ್ಕೆ ಕೇಂದ್ರ ಸರ್ಕಾರದಿಂದ ₹7200, ರಾಜ್ಯ ಸರ್ಕಾರದಿಂದ ₹4800 ಒಟ್ಟು ₹12000 ಹೀಗೆ ಸಹಾಯಧನ ಸಿಗುತ್ತದೆ.

ಪಪಂ ವ್ಯಾಪ್ತಿಯ ಜನರಿಗೆ ಈ ಹಿಂದೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸಹಾಯ ಧನ ನೀಡುತ್ತಿತ್ತು, ಆದರೆ, ಕಳೆದ 3- 4 ವರ್ಷಗಳಿಂದ ಯಾವುದೇ ಅನುದಾನ ಇಲ್ಲದಿರುವುದರಿಂದ ಬಡವರು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲದೇ ಶೌಚಕ್ಕೆ ಸಂಕಟ ಪಡುವಂತಾಗಿದೆ. ಜನತೆ ಪಟ್ಟಣದ ಅಬ್ಬಿಕೆರೆ, ಹರ್ತಿ ರಸ್ತೆ ಹೀಗೆ ವಿವಿಧ ಪ್ರದೇಶಗಳಲ್ಲಿ ಶೌಚಕ್ಕೆ ತೆರಳುತ್ತಾರೆ. ವಿಶೇಷವಾಗಿ 17ನೇ ವಾರ್ಡ್‌ನಲ್ಲಿರುವ ಪಪಂ ಉದ್ಯಾನವನವೇ ಶೌಚಕ್ಕೆ ಬಳಕೆಯಾಗುತ್ತಿದ್ದು, ಈ ಬಗ್ಗೆ ಪಪಂ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ನಿರ್ವಹಣೆ ಇಲ್ಲ: ಪಟ್ಟಣದ ವ್ಯಾಪ್ತಿಯಲ್ಲಿ 25 ಸಮುದಾಯ ಶೌಚಾಲಯಗಳಿವೆ. ಅವುಗಳಲ್ಲಿ ನೀರಿನ ಕೊರತೆ, ಅಸ್ವಚ್ಛತೆ ಎದ್ದುಕಾಣುತ್ತಿದ್ದು, ಕೆಲ ಶೌಚಾಲಯಗಳ ಮುಂದೆ ಮುಳ್ಳು ಕಂಟೆ ಬೆಳೆದಿವೆ. ಕೆಲವೆಡೆ ಸಮುದಾಯ ಶೌಚಾಲಯಗಳು ಬಂದ್ ಆಗಿವೆ. ಇನ್ನೂ ಕೆಲ ಸಮುದಾಯ ಶೌಚಾಲಯಗಳು ಸರಿಯಾದ ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾರುತ್ತಿದ್ದು, ಅವುಗಳತ್ತ ಸುಳಿಯದ ಜನತೆ ಜನನಿಬಿಡ ಪ್ರದೇಶಗಳಲ್ಲಿ ಚೊಂಬು ಹಿಡಿದು ನಡೆಯುವುದು ಸಾಮಾನ್ಯವಾಗಿದೆ.


ಹೈಟೆಕ್ ಶೌಚಾಲಯ ಬಂದ್: ಪಟ್ಟಣದ ಹರಣಶಿಕಾರಿ ಓಣಿಯಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ನಿರ್ಮಿಸಿದ ಹೈಟೆಕ್ ಶೌಚಾಲಯದ ಕಿಟಕಿ ಗ್ಲಾಸ್‌ಗಳು, ನೀರಿನ ಪೈಪ್‌ಗಳು ಒಡೆದು, ಶೌಚಾಲಯದಲ್ಲಿ ನೀರಿನ ಕೊರತೆ, ಸರಿಯಾಗಿ ನಿರ್ವಹಣೆ ಇಲ್ಲದೆ ಬಂದ್ ಆಗಿದೆ. ಅಲ್ಲದೇ ಇದರ ಶೌಚಾಲಯದ ಆವಣರದಲ್ಲಿಯೇ ಬಯಲು ಬಹಿರ್ದೆಸೆಗೆ ತೆರಳುತ್ತಾರೆ. ಈ ವ್ಯವಸ್ಥೆಯನ್ನು ಸುಧಾರಿಸಲು ಪಪಂ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.

ಸಂಪೂರ್ಣ ಸ್ವಚ್ಛತೆ ಮರೀಚಿಕೆ: ಪಟ್ಟಣದಲ್ಲಿ ಸ್ವಚ್ಛತೆ ಎನ್ನುವುದು ಸಂಪೂರ್ಣ ಮರೀಚಿಕೆಯಾಗಿದೆ. ಪಟ್ಟಣದ ಚರಂಡಿಗಳ ನಿರ್ವಹಣೆಯಲ್ಲಿ ಪಪಂ ವಿಫಲವಾಗಿದ್ದು, ಮುಖ್ಯ ರಸ್ತೆಗಳಲ್ಲಿನ ಚರಂಡಿಗಳನ್ನು ಮಾತ್ರ ಕಾಲ, ಕಾಲಕ್ಕೆ ಸ್ವಚ್ಛಗೊಳಿಸುತ್ತಾರೆ. ಇನ್ನುಳಿದ ಪಟ್ಟಣದ 19 ವಾರ್ಡ್‌ಗಳಲ್ಲಿನ ಓಣಿಗಳಲ್ಲಿ ಚರಂಡಿಗಳನ್ನು ಯುಗಾದಿ, ಜಾತ್ರೆಗಳು ಹೀಗೆ ಹಬ್ಬ ಹರಿದಿನಗಳಲ್ಲಿ ಮಾತ್ರ ಸ್ವಚ್ಛಗೊಳಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

1754 ಮನೆಗಳಿಗೆ ಶೌಚಾಲಯ ಇಲ್ಲ: ಪಟ್ಟಣದ ಒಟ್ಟು 4954 ಮನೆಗಳ ಪೈಕಿ, 3200 ಮನೆಗಳು ಶೌಚಾಲಯಗಳನ್ನು ಹೊಂದಿದ್ದು, 1754 ಮನೆಗಳಲ್ಲಿ ಶೌಚಾಲಯವಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಜಾಗ ಇಲ್ಲದವರು ಸಮುದಾಯ ಶೌಚಾಲಯಗಳನ್ನು ಬಳಸುತ್ತಾರೆ. ಅವುಗಳನ್ನು ಸರಿಯಾಗಿ ಕಾಲ ಕಾಲಕ್ಕೆ ನಿರ್ವಹಣೆ ಮಾಡಬೇಕು. ಹಾಗೇ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಈ ಹಿಂದೆ ನೀಡುತ್ತಿದ್ದಂತೆ ಸಹಾಯಧನ ನೀಡಿ, ಬಡವರಿಗೆ ಅನುಕೂಲ ಮಾಡಿಕೊಡಬೇಕು. ಅಂದಾಗ ಬಯಲು ಬಹಿರ್ದೇಸೆ ಮುಕ್ತವಾಗಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಅಧಿಕಾರಿಗಳ ನಿರ್ಲಕ್ಷ್ಯ: ಪಟ್ಟಣದಲ್ಲಿ ಸಮುದಾಯ ಶೌಚಾಲಯಗಳಲ್ಲಿ ಸರಿಯಾಗಿ ನಿರ್ವಹಣೆ ಇಲ್ಲದೇ ಇರುವುದು, ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಸಹಜವಾಗಿ ಜನರು ಶೌಚಕ್ಕೆ ಬಯಲೇ ಬಳಸುವಂತಾಗಿದೆ. ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಈ ಹಿಂದೆ ನೀಡುತ್ತಿದ್ದಂತೆ ಪಪಂ ವತಿಯಿಂದ ಸಹಾಯಧನ ನೀಡಬೇಕು ಎಂದು ಪಪಂ ಮಾಜಿ ಸದಸ್ಯ ಮಹಾಂತೇಶ ಎಸ್. ಕಣವಿ ತಿಳಿಸಿದರು.