17ಕ್ಕೆ ಹಲಸಿ ಭೂವರಾಹ ನರಸಿಂಹ ದೇವರ ರಥೋತ್ಸವ

| Published : Oct 14 2024, 01:26 AM IST

ಸಾರಾಂಶ

ಖಾನಾಪುರ ತಾಲೂಕಿನ ಹಲಸಿ ಗ್ರಾಮದ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಭೂವರಾಹ ನರಸಿಂಹ ದೇವಸ್ಥಾನದ ವಾರ್ಷಿಕ ಜಾತ್ರೆ ಅ.17ರಿಂದ ಅ.20ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ಹಲಸಿ ಗ್ರಾಮದ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಭೂವರಾಹ ನರಸಿಂಹ ದೇವಸ್ಥಾನದ ವಾರ್ಷಿಕ ಜಾತ್ರೆ ಅ.17ರಿಂದ ಅ.20ರವರೆಗೆ ನಡೆಯಲಿದೆ. ಈ ಬಾರಿಯ ಜಾತ್ರೆಯಲ್ಲಿ ನೂತನವಾಗಿ ನಿರ್ಮಾಣವಾದ ರಥದಲ್ಲಿ ಭೂವರಾಹ ನರಸಿಂಹ ಸ್ವಾಮಿಯ ರಥೋತ್ಸವ ಆಯೋಜಿಸಲಾಗಿದೆ ಎಂದು ಭೂವರಾಹ ನರಸಿಂಹ ದೇವಸ್ಥಾನದ ಪ್ರಧಾನ ಅರ್ಚಕ ವಿವೇಕಾನಂದ ಪಾರುಪತ್ಯೆದಾರ ತಿಳಿಸಿದ್ದಾರೆ.

ಭಾನುವಾರ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ನಾಲ್ಕು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರಾ ಉತ್ಸವ ಸಮಿತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನದ ಪುರಾತನ ಕಾಲದ ಕಟ್ಟಿಗೆಯ ರಥ ಶಿಥಿಲವಾಗಿದ್ದರಿಂದ ಭಕ್ತರ ಮತ್ತು ದಾನಿಗಳ ಸಹಕಾರಿಂದ ನೂತನ ರಥ ನಿರ್ಮಿಸಲಾಗಿದೆ. ಅ.17ರಂದು ನಡೆಯಲಿರುವ ಜಾತ್ರಾ ಮಹೋತ್ಸವ ನಿಮಿತ್ತ ನೂತನ ರಥವನ್ನು ಶಾಸ್ತ್ರೋಕ್ತವಾಗಿ ಪೂಜಿಸಿದ ಬಳಿಕ ರಥೋತ್ಸವ ನಡೆಯಲಿದ್ದು, ಈ ಮೂಲಕ ವರ್ಷದ ಜಾತ್ರೆಯಲ್ಲಿ ರಥ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಭೂವರಾಹ ನರಸಿಂಹ ದೇವಸ್ಥಾನದ ಜಾತ್ರೆಯ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿನಿತ್ಯ ಭೂವರಾಹ ನರಸಿಂಹಸ್ವಾಮಿಗೆ ವಿಶೇಷ ಅರ್ಚನೆ, ಅಭಿಷೇಕ, ನೈವೇದ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಭಕ್ತರಿಗೆ ಮಹಾಪ್ರಸಾದ ವಿತರಣೆಗೆ ಸಿದ್ಧತೆ ಮಾಡಲಾಗಿದೆ. ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಚ್ಛಿಸುವ ಭಕ್ತರು ಸಾಕಷ್ಟು ಮುಂಚಿತವಾಗಿ ಮೊ.9980087912ಗೆ ಸಂಪರ್ಕಿಸಬಹುದು ಎಂದವರು ಕರೆ ನೀಡಿದರು.ಹಲಸಿಯ ಭೂವರಾಹ ನರಸಿಂಹ ದೇವಾಲಯ ಈ ಭಾಗದ ಅತ್ಯಂತ ಪುರಾತನವಾದ ದೇವಾಲಯವಾಗಿದೆ. ಇದನ್ನು 8ನೇ ಶತಮಾನದಲ್ಲಿ ಕದಂಬ ರಾಜಮನೆತನದ ಅರಸರು ನಿರ್ಮಿಸಿದ್ದಾರೆ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಭಾರತೀಯ ಪುರಾತತ್ವ ಇಲಾಖೆ ಈ ದೇವಾಲಯದ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಈ ಹಿಂದೆ ಎರಡು ಬಾರಿ ಹಲಸಿಯಲ್ಲಿ ಕದಂಬೋತ್ಸವ ನಡೆದಿತ್ತು. ಈ ಬಾರಿಯೂ ಹಲಸಿ ಜಾತ್ರೆಯ ಸಂದರ್ಭದಲ್ಲಿ ಕದಂಬೋತ್ಸವಆಚರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ.

-ವಿಠ್ಠಲ ಹಲಗೇಕರ, ಶಾಸಕರು, ಖಾನಾಪುರ