ಸಾರಾಂಶ
ಮಧ್ಯಾಹ್ನ ಸಮಯದಲ್ಲಿ ತೀರ್ಥೋದ್ಭವವು ಜರುಗಲಿರುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ಮಾತೆಯ ದರ್ಶನವನ್ನು ಪಡೆಯಲು ಆಗಮಿಸುವ ನಿರೀಕ್ಷೆ ಇದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾಗಮಂಡಲದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ರೂಢಿ ಸಂಪ್ರದಾಯದಂತೆ, "ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜಾತ್ರೆಯು ಅ. 17 ರಂದು ಮಧ್ಯಾಹ್ನ 01: 44 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಆಗಮಿಸುತ್ತಾಳೆ. ಈ ವರ್ಷ ಮಧ್ಯಾಹ್ನ ಸಮಯದಲ್ಲಿ ತೀರ್ಥೋದ್ಭವವು ಜರುಗಲಿರುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ಮಾತೆಯ ದರ್ಶನವನ್ನು ಪಡೆಯಲು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆ ಕೈಗೊಳ್ಳುತ್ತಿದೆ. ಜಾತ್ರಾ ಮಹೋತ್ಸದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮ ನಡೆಸಲು ಹಾಗೂ ಇತರೆ ನಿರ್ವಹಣೆಗಾಗಿ ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ 2 ಕೋಟಿ ರು. ಅನುದಾನವನ್ನು ಹಾಗೂ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರದ ವತಿಯಿಂದ ಮುಜರಾಯಿ ಇಲಾಖೆಯ ಮೂಲಕ 75 ಲಕ್ಷ ರು. ಗಳ ಅನುದಾನವನ್ನು ಮಂಜೂರು ಮಾಡಿ ಆದೇಶಿಸಿದೆ. ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ, ಬ್ಯಾರಿಕೇಡ್ ಅಳವಡಿಕೆ, ವೇದಿಕೆ ನಿರ್ಮಾಣ, ಮಳೆಯಿಂದ ರಕ್ಷಣೆಗಾಗಿ ಮೆಟಲ್ ಶೀಟ್, ಪೆಂಡಾಲ್‌ಗಳು, ಹೂವಿನ ಅಲಂಕಾರ, ತೀರ್ಥೋದ್ಭವದ ವೀಕ್ಷಣೆಯ ವೇಳೆ ನೂಕು ನುಗ್ಗಲು ಉಂಟಾಗದಂತೆ ಎಲ್.ಇ.ಡಿ ಪರದೆಗಳು, ಫೋಟೋಗ್ರಾಫಿ ಮತ್ತು ಭಕ್ತಾದಿಗಳ ಭದ್ರತೆಯ ದೃಷ್ಟಿಯಿಂದ ಅವಶ್ಯವಿರುವ ಕಡೆಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಕೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕೆಟಿಪಿಪಿ ರಂತೆ ಇ-ಟೆಂಡರ್ ಅನ್ನು ಆಹ್ವಾನಿಸಿ ಸೂಕ್ತ ಗುತ್ತಿಗೆದಾರರನ್ನು ಗುರುತಿಸಿಕೊಂಡು ಕಾರ್ಯಾದೇಶವನ್ನು ನೀಡಲಾಗಿದೆ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ದೇವಾಲಯಗಳ ಗೋಪುರ, ನೆಲಹಾಸು ಅಲಂಕಾರಿಕ ಕಲ್ಲುಗಳ ಶುಚಿತ್ವ, ಸುಣ್ಣಬಣ್ಣ ಮತ್ತು ಕಾವೇರಿ ನೀರಾವರಿ ನಿಗಮದ ವತಿಯಿಂದ ತ್ರಿವೇಣಿ ಸಂಗ್ರಮ ಸ್ನಾನಘಟ್ಟದಲ್ಲಿ ಹೂಳೆತ್ತುವುದು ಹಾಗೂ ದೇವಾಲಯದ ಆವರಣಗಳು ಮತ್ತು ಭಾಗಮಂಡಲಕ್ಕೆ ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಕಾಡು ಕಡಿದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಕೆಲಸ ಪ್ರಗತಿಯಲ್ಲಿದೆ. ಸೆ. 15 ರಂದು ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ-2025ಕ್ಕೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸೂಚನೆಯಂತೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಜಾತ್ರಾ ಸಂದರ್ಭದಲ್ಲಿ ಒದಗಿಸಲು ನಿರ್ದೇಶನವನ್ನು ನೀಡಲಾಗಿದೆ. ಎಲ್ಲಾ ಭಕ್ತಾದಿಗಳು “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಜಾತ್ರಾ ಮಹೋತ್ಸವನ್ನು ಯಶಸ್ವಿಗೊಳಿಸುವಂತೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.