ಸಾರಾಂಶ
ನಗರಸಭೆ ಸಭಾಂಗಣದಲ್ಲಿ ಪ್ರಧಾನ ಮಂತ್ರಿಯವರ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಟೂಲ್‌ಕಿಟ್ ವಿತರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ವಿಶ್ವಕರ್ಮ ಯೋಜನೆಯಡಿ ₹18.40 ಕೋಟಿಯನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ಪ್ರಧಾನ ಮಂತ್ರಿಯವರ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ನಗರಸಭೆ ಸಭಾಂಗಣದಲ್ಲಿ ಬುಧವಾರ ಟೂಲ್‌ಕಿಟ್ ವಿತರಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 1704 ಜನರಿಗೆ ತಲಾ ಒಂದು ಲಕ್ಷದಂತೆ ಸಾಲ ವಿತರಿಸಲಾಗಿದೆ. 619 ಜನರಿಗೆ ಟೂಲ್‌ಕಿಟ್‌ಗಳನ್ನು ವಿತರಿಸಲಾಗಿದೆ. ಇನ್ನೂ 5803 ಜನರಿಗೆ ಟೂಲ್‌ಕಿಟ್ ಮತ್ತು ಸಾಲ ವಿತರಣೆ ಮಾಡ ಬೇಕಾಗಿದೆ. ಅಂಚೆ ಇಲಾಖೆ ಮೂಲಕ ಟೂಲ್‌ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವೃತ್ತಿಪರ ಕಸುಬುಗಳಿಗೆ ಪೂರಕವಾಗಿ ತರಬೇತಿ ನೀಡಿ ಶೇ.5ರ ಬಡ್ಡಿ ದರದಲ್ಲಿ ತಲಾ ಒಂದು ಲಕ್ಷ ರೂ. ಸಾಲದ ವ್ಯವಸ್ಥೆ ಕಲ್ಪಿಸಿ, ಆರ್ಥಿಕ ಶಕ್ತಿಯೊಂದಿಗೆ 15 ಸಾವಿರ ರೂ. ಮೌಲ್ಯದ ಅಗತ್ಯ ಸಲಕರಣೆಗಳನ್ನು ಒದಗಿಸಿ ಉತ್ತೇಜಿಸುವ ಮೂಲಕ ಸ್ವಂತ ಉದ್ಯೋಗದ ಮೇಲೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕೆನ್ನುವ ಉದ್ದೇಶದಿಂದ ಪ್ರಧಾನಿಯವರು ವಿಶ್ವಕರ್ಮ ಯೋಜನೆ ಘೋಷಣೆ ಮಾಡಿದ್ದಾರೆ ಎಂದರು.ಚಮ್ಮಾರ, ಕುಂಬಾರ, ಮೀನುಗಾರ ಮತ್ತು ಗಾರೆ ಕೆಲಸ. ವಿಶ್ವಕರ್ಮ ಸಮುದಾಯದವರು ನಿರ್ವಹಿಸುವ ಬಡಗಿ ಕೆಲಸವೂ ಸೇರಿದಂತೆ 18 ಕಸುಬುಗಳು ಈ ಯೋಜನೆಯಲ್ಲಿ ಸೇರಿವೆ. ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳಿಗೆ ₹13 ಸಾವಿರ ಕೋಟಿ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದರು. ಮೊದಲಿಗೆ ಬ್ಯಾಂಕ್‌ಗಳು ಸಾಲ ವಿತರಿಸಲು ಸಿಬಿಲ್ ಸಮಸ್ಯೆ ಮುಂದಿಟ್ಟಾಗ, ಮಧ್ಯೆ ಪ್ರವೇಶಿಸಿದ ರಿಸರ್ವ್ ಬ್ಯಾಂಕ್ ಸಿಬಿಲ್‌ಗೂ ವಿಶ್ವಕರ್ಮ ಯೋಜನೆಗೂ ಸಂಬಂಧವಿಲ್ಲವೆಂದು ಘೋಷಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಸಾಲ ಒದಗಿಸುತ್ತಿವೆ ಎಂದು ಹೇಳಿದರು. ಹಿಂದೆ ಗ್ರಾಮಗಳಲ್ಲಿ ಕುಂಬಾರಿಕೆ ಕುಲಕಸುಬಾಗಿತ್ತು. ಆದರೆ ಇಂದು ಅಡುಗೆಗೆ ಬಳಕೆಯಾಗುವ ಮಡಿಕೆಗಳಿಗೆ ಬದಲಾಗಿ ಅಲಂಕಾರಿಕ ಮಡಿಕೆಗಳನ್ನು ತಯಾರಿಸಲಾಗುತ್ತಿದೆ. ಅದು ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿದೇಶಗಳಿಗೂ ರಫ್ತಾಗುವ ಹಂತ ದಲ್ಲಿದೆ. ಕ್ಷೌರಿಕ ವೃತ್ತಿಯಲ್ಲಿ ವಯಸ್ಸಾಗಿರುವವರು ಆಧುನಿಕತೆಗೆ ಒಗ್ಗಿಕೊಳ್ಳುವುದಕ್ಕೆ ತರಬೇತಿ ನೀಡಲಾಗುವುದು. ಮೀನು ಗಾರಿಕೆ ಹಾಗೂ ಗಾರೆ ಕೆಲಸಗಾರರಿಗೆ ತರಬೇತಿ ನೀಡಲಾಗುವುದು. ಈ ಯೋಜನೆ ಸೌಲಭ್ಯವನ್ನು ವೃತ್ತಿಪರ ಕಸುಬುದಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ, ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಪೌರಾಯುಕ್ತ ಬಿ.ಸಿ.ಬಸವರಾಜ್, ಅಂಚೆ ಇಲಾಖೆ, ಕೈಗಾರಿಕಾ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
11 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ಪ್ರಧಾನ ಮಂತ್ರಿಯವರ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಟೂಲ್‌ಕಿಟ್ ವಿತರಿಸಿದರು.