೨೫ರಿಂದ ಚಳ್ಳಕೆರೆ ತಾಲೂಕಿನ ೧೮ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಬಿಇಒ

| Published : Mar 24 2024, 01:37 AM IST

೨೫ರಿಂದ ಚಳ್ಳಕೆರೆ ತಾಲೂಕಿನ ೧೮ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಬಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆಯೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉಸ್ತುವಾರಿಯೂ ಇದ್ದು, ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಸಿದ್ಧತೆಗಳನ್ನು ಪೂರೈಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರಸ್ತುತ ೨೦೨೪ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾ.೨೫ರಿಂದ ಏ.೬ರ ತನಕ ನಡೆಯಲಿದ್ದು, ಈ ಬಾರಿ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆಯೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉಸ್ತುವಾರಿಯೂ ಇದ್ದು, ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಸಿದ್ಧತೆಗಳನ್ನು ಪೂರೈಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.

ಅವರು ಪತ್ರಿಕೆಗೆ ಮಾಹಿತಿ ನೀಡಿ, ಪರೀಕ್ಷಾರ್ಥಿಗಳಿಗೂ ಸಹ ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸುವಂತೆ ತಿಳಿಸಲಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಹ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದಂತೆ ರಾಜ್ಯಮಟ್ಟದಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದರು. ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವರ್ಗಕ್ಕೆ ತಮ್ಮ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸ್ವಷ್ಟವಾಗಿ ತಿಳಿಯುವಂತೆ ಬೋಧನೆ ವ್ಯವಸ್ಥೆಯೂ ಆಗಿದೆ. ಇನ್ನು, ಪ್ರತಿಯೊಂದು ಶಾಲೆಯಲ್ಲೂ ಸುಮಾರು ಎರಡು ತಿಂಗಳಿನಿಂದ ಸಂಜೆ ವೇಳೆ ಉಚಿತವಾಗಿ ಹೆಚ್ಚುವರಿ ತರಗತಿ ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದೆ. ವಿಶೇಷವೆಂದರೆ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲೂ ಮುಖ್ಯ ಶಿಕ್ಷಕರು, ಶಿಕ್ಷಕರು ಇಲಾಖೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗಲು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆಂದರು.

ಪ್ರಸ್ತುತ ಈ ವರ್ಷ ತಾಲ್ಲೂಕಿನ ೧೮ ಕೇಂದ್ರಗಳಲ್ಲಿ ಸೋಮವಾರದ ಪರೀಕ್ಷೆ ಆರಂಭವಾಗಲಿದೆ. ಒಟ್ಟು ೫,೬೮೭ ವಿದ್ಯಾರ್ಥಿಗಳು ಪರೀಕ್ಷೆಗೆ ಆರ್ಹತೆ ಪಡೆದಿದ್ದಾರೆ. ನಗರ ಪ್ರದೇಶದಲ್ಲಿ ೬, ಗ್ರಾಮೀಣ ಪ್ರದೇಶದಲ್ಲಿ ೧೨ ಕೇಂದ್ರಗಳು ಇವೆ. ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ನಕಲು ತಡೆಯಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೊರಭಾಗದಲ್ಲಿ ಪೊಲೀಸ್ ಇಲಾಖೆಯ ಭದ್ರತೆ ನಿಯೋಜಿಸಿದೆ. ಪರೀಕ್ಷಾ ಕೇಂದ್ರದ ಒಳಭಾಗದಲ್ಲಿ ಕಾಪಿಯನ್ನು ತಡೆಗಟ್ಟಲು ವಿಶೇಷ ಸ್ಕ್ವ್ಯಾಡನ್ನು ನೇಮಿಸ ಲಾಗಿದೆ. ತಾಲ್ಲೂಕು ಮಟ್ಟದ ಹಲವಾರು ಪ್ರಮುಖ ಅಧಿಕಾರಿಗಳು ಪರೀಕ್ಷಾ ಕೇಂದ್ರದ ಮೇಲ್ತುಸುವಾರಿಯನ್ನು ನಡೆಸಲಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉನ್ನತ ಫಲಿತಾಂಶಕ್ಕೆ ಎಲ್ಲಾ ರೀತಿಯ ಪ್ರಯತ್ನ ಮುಂದುವರೆದಿವೆ. ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲಿ ಅಭ್ಯಾಸ ಮಾಡಿದ್ದು, ಪರೀಕ್ಷೆ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

ವಿಶೇಷವಾಗಿ ಎಲ್ಲಾ ೧೮ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನ ಪತ್ರಿಕೆ ತಲುಪಿಸಲು ೭ ಮಾರ್ಗ ಹಾಗೂ ೭ ಮಾರ್ಗಾಧಿಕಾರಿಗಳನ್ನು ಪೊಲೀಸ್ ಭದ್ರತೆಯೊಂದಿಗೆ ನಿಯೋಜಿಸಲಾಗಿದೆ. ೧೮ ಮುಖ್ಯ ಅಧೀಕ್ಷಕರು, ೧೮ ಸ್ಥಾನಿಕ ಅಧೀಕ್ಷಕರು, ಕಾರ್ಯನಿರ್ವಹಿಸುವರು. ಪರೀಕ್ಷಾ ಕೇಂದ್ರಕ್ಕಾಗಿ ತಾಲ್ಲೂಕಿನಾದ್ಯಂತ ೨೨೦ ಕೊಠಡಿ ಮೇಲ್ವಿಚಾರಕರು ಪರೀಕ್ಷೆಯ ಮೇಲುಸ್ತುವಾರಿ ವಹಿಸುವರು. ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಮಾ.೨೫ರಿಂದ ಏ.೬ರ ತನಕ ೩೦೩ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.