ದೈವತ್ವದ ಶಕ್ತಿಯನ್ನೊಳಗೊಂಡ ಸಾಮೂಹಿಕ ಭಜನೆಯು ಮನಸ್ಸಿನ ಸಂತೋಷ ನೆಮ್ಮದಿಗೆ ಕಾರಣವಾಗುತ್ತದೆ ಎಂದು ಜಿ. ಚಿದ್ವಿಲಾಸ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ದೈವತ್ವದ ಶಕ್ತಿಯನ್ನೊಳೊಂಡ ಸಾಮೂಹಿಕ ಭಜನೆಯು ಮನಸ್ಸಿನ ಸಂತೋಷ, ನೆಮ್ಮದಿಗೆ ಕಾರಣವಾಗುತ್ತದೆ ಎಂದು ನಗರದ ಶ್ರೀ ವಿಜಯವಿನಾಯಕ ದೇವಾಲಯದ ಟ್ರಸ್ಟಿ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟಿದ್ದಾರೆ.ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಆಯೋಜಿತ ಶ್ರೀರಾಮಾಂಜನೇಯ ಭಜನಾ ಮಂಡಳಿಯ 35 ನೇ ವಾರ್ಷಿಕೋತ್ಸವದ ಸಂದರ್ಭ ಆಯೋಜಿತ ಏಕಾಹ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಿದ್ವಿಲಾಸ್, ಭಜನೆಗೆ ಇಹಲೋಕದ ಪರಿವನ್ನು ಮರೆಸುವ ಶಕ್ತಿ ಇದೆ. ಭಜನೆಗೆ ಆರೋಗ್ಯದ ಸಮಸ್ಯೆಯನ್ನು ನಿವಾರಿಸುವ ಶಕ್ತಿಯೂ ಇದೆ. ಆದ್ಮಾತ್ಮಿಕ ಚಿಂತನೆಗೆ ಕಾರಣವಾಗುವ ಸಾಮೂಹಿಕ ಭಜನೆಗೆ ಮನಸ್ಸಿನ ಸಂತೋಷ, ಪರಿಶುದ್ದತೆ ಉಂಟು ಮಾಡುವ ಶಕ್ತಿ ಸಿದ್ದಿಸಿದೆ ಎಂದೂ ಅಭಿಪ್ರಾಯಪಟ್ಟರು.ಸಾಮೂಹಿಕ ಭಜನೆ ಎಂಬುದು ಚಿಕಿತ್ಸೆ ಕೂಡ ಆಗಿದೆ. ವೈದ್ಯರಿಂದ ನಿವಾರಿಸಲಾಗದ ಅನೇಕ ಮಾನಸಿಕ ಸಮಸ್ಯೆಗಳಿಗೆ ದೈವತ್ವದ ಶಕ್ತಿ ಹೊಂದಿರುವ ಭಜನೆ ಪರಿಹಾರವಾಗಿ ಕಂಡಿದೆ ಎಂದು ಹೇಳಿದ ಚಿದ್ವಿಲಾಸ್, ಸಾಮೂಹಿಕ ಭಜನೆ ಎಂಬುದು ವ್ಯಕ್ತಿಯ ಮನಸ್ಸು, ಮನೆಯ ಸದಸ್ಯರ ನೆಮ್ಮದಿಗೂ ನೆರವಾಗುತ್ತದೆ. ಆ ಮೂಲಕ ಸಮಾಜದ ಶಾಂತಿ, ನೆಮ್ಮದಿಗೂ ಭಜನೆ ಕಾರಣವಾಗಿ ಸಂಸ್ಕೃತಿ, ಸಂಪ್ರದಾಯಗಳ ಸಂರಕ್ಷಣೆಗೆ ಕೂಡ ಕಾರಣವಾಗುತ್ತದೆ ಎಂದೂ ಅಭಿಪ್ರಾಯಪಟ್ಟರು.
ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮೂರೂವರೆ ದಶಕಗಳಿಂದ ಧಾರ್ಮಿಕ ಕೈಂಕರ್ಯದ ಮೂಲಕ ಸಮಾಜದಲ್ಲಿ ಭಕ್ತಿಭಾವನೆ ಉಂಟು ಮಾಡುವ ಕಾರ್ಯಕ್ರಮ ಆಯೋಜಿಸುತ್ತಿರುವುದು ಸಮಾಜವೇ ಹೆಮ್ಮೆ ಪಡುವಂಥ ಕಾರ್ಯ ಎಂದೂ ಚಿದ್ವಿಲಾಸ್ ಶ್ಲಾಘಿಸಿದರು.ಬಾಲ್ದದಲ್ಲಿಯೇ ಸಂಸ್ಕಾರವನ್ನು ಕಲಿಸಿ ಭವಿಷ್ಯದ ಭಾರತಕ್ಕೆ ದೇಶಭಕ್ತ ಸತ್ಪ್ರಜೆಗಳನ್ನು ನೀಡುವ ಉದ್ದೇಶ ಹೊಂದಿರುವ ಪೋಷಕರು, ಶಿಕ್ಷಕರ ಕೊಡುಗೆ ಈ ಸಮಾಜಕ್ಕೆ ಮಹತ್ವದ್ದಾಗಿದೆ. ಇಂಥ ಪೋಷಕರು ಇರುವವರೆಗೂ ಭಾರತೀಯತೆ, ಭಾರತೀಯ ಸಂಸ್ಕೃತಿ ಖಂಡಿತಾ ನಾಶವಾಗಲಾರದು ಎಂದೂ ಅವರು ಶ್ಲಾಘಿಸಿದರು.
ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಸಂಚಾಲಕ ಕೆ.ಕೆ.ಮಹೇಶ್ ಕುಮಾರ್ ಸ್ವಾಗತಿಸಿದರು. ವರದಿ ವಾಚನಾ ಅನಿತಾ ಸುಧಾಕರ್, ಭಜನಾ ಮಂಡಳಿಯ ವರದಿ ವಾಚಿಸಿ ಅತಿಥಿಗಳನ್ನು ಚಂದ್ರಾವತಿ ಪರಿಚಯಿಸಿದ ಕಾರ್ಯಕ್ರಮದಲ್ಲಿ ಅಮೃತ್ ರಾಜ್ ವಂದಿಸಿದರು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿದೇವಯ್ಯ, ಡಾ.ಎಂ.ಜಿ. ಪಾಟ್ಕರ್ ಹಾಜರಿದ್ದ ಕಾರ್ಯಕ್ರಮದಲ್ಲಿ ವಿವಿಧೆಡೆಗಳ ಭಜನಾ ತಂಡಗಳ ಸದಸ್ಯರು ಪಾಲ್ಗೊಂಡಿದ್ದರು. ನಗರಸಭಾಧ್ಯಕ್ಷೆ ಕಲಾವತಿ ದೀಪಪ್ರಜ್ವಲನೆಯ ಮೂಲಕ ಏಕಾಹ ಭಜನೆಗೆ ಚಾಲನೆ ನೀಡಿದರು.ಏಕಾಹ ಭಜನೆಯಲ್ಲಿ ಪಾಲ್ಗೊಂಡ 18 ಭಜನಾ ತಂಡಗಳು -
ಶ್ರೀರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ ಮಡಿಕೇರಿ, ಭಕ್ತಿಲಹರಿ ತಂಡ ಮಡಿಕೇರಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮಂಗಳಾದೇವಿ ನಗರ, ಮದೆಮಹೇಶ್ವರ ಭಜನಾ ಮಂಡಳಿ, ಮದೆ, ಶ್ರೀ ಸನಾತನ ಭಜನಾ ಮಂಡಳಿ ಕಗ್ಗೋಡ್ಲು, ಶ್ರೀದೇವಿ ಭಜನಾ ಮಂಡಳಿ ಜೋಡುಪಾಲ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಎರಡನೇ ಮೊಣ್ಣಂಗೇರಿ, ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಮಡಿಕೇರಿ, ಶ್ರೀ ಕೋದಂಡ ರಾಮ ಭಜನಾ ಮಂಡಳಿ ಮಡಿಕೇರಿ, ಇಸ್ಕಾನ್ ತಂಡ ಮಡಿಕೇರಿ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ದೇವರಕೊಲ್ಲಿ, ಶ್ರೀಶೃತಿ ಲಯ ಭಜನಾ ಮಂಡಳಿ, ಮಡಿಕೇರಿ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಡಿಕೇರಿ. ಕುಣಿತ ಭಜನೆ - ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು, ಆದಿಶಕ್ತಿ ವಿನಾಯಕ ಭಜನಾ ಮಂಡಳಿ ಉಡೋತ್, ಶ್ರೀ ಮದೆ ಮಧುರಪ್ಪ ಕುಣಿತ ಭಜನಾ ತಂಡ, ಮದೆನಾಡು.