1836 ಮನೆ ನಿರ್ಮಾಣ ಕಾಮಗಾರಿ ಆರಂಭಿಸಿ: ಶಾಸಕ ಎಸ್‌.ಎನ್‌.ಚನ್ನಬಸಪ್ಪ

| Published : Aug 20 2024, 12:48 AM IST

ಸಾರಾಂಶ

ಶಿವಮೊಗ್ಗದ ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪ ಬಡಾವಣೆಗಳಿಗೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಆಶ್ರಯ ಮನೆ ಕಾಮಗಾರಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಗೋವಿಂದಾಪುರದಲ್ಲಿ ಈಗಾಗಲೇ ನಿರ್ಮಿಸಿ ಹಂಚಿಕೆ ಮಾಡಲಾಗಿರುವ 624 ಮನೆಗಳಿಗೆ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಪ್ರತ್ಯೇಕ ವಿದ್ಯುತ್ ಸರಬರಾಜು ಯೋಜನೆ, ಕಸವಿಲೇವಾರಿ ವಾಹನ ಒದಗಿಸುವಂತೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗೋವಿಂದಪುರ ಹಾಗೂ ಗೋಪಿಶೆಟ್ಟಿಕೊಪ್ಪ ಬಡಾವಣೆಗಳಲ್ಲಿ **G+2 ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ 4836 ಮನೆಗಳ ಕಾಮಗಾರಿ ಪ್ರಗತಿ ಪರಿಶೀಲಿಸಿ ಬಳಿಕ ಅಧಿಕಾರಿಗಳಿಗೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಗೋವಿಂದಾಪುರದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಮನೆಗಳಿಗೆ ಶೀಘ್ರವೇ ಮೂಲ ಸೌಕರ್ಯ ಒದಗಿಸಬೇಕು. ಗೋಪಿಶೆಟ್ಟಿಕೊಪ್ಪದಲ್ಲಿ 1836 ಮನೆಗಳ ನಿರ್ಮಾಣ ಕಾಮಗಾರಿ ತುರ್ತಾಗಿ ಆರಂಭಿಸಬೇಕು ಎಂದು ತಿಳಿಸಿದರು.

ಅತಿವೃಷ್ಟಿ ಹಾನಿಯಿಂದ ಮನೆಗಳು ಬಿದ್ದಿರುವ ಬಗ್ಗೆ ತುರ್ತಾಗಿ ಪರಿಹಾರ ನೀಡಲು ಮತ್ತು ಅನಧಿಕೃತ ಮನೆಗಳಿಗೆ ವಿಶೇಷ ಪರಿಹಾರ ಒದಗಿಸಬೇಕು. ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಹಕ್ಕುಪತ್ರ ನೀಡಲು ಬಾಕಿಯಿರುವ ಪ್ರಕರಣಗಳನ್ನು ತುರ್ತಾಗಿ ಕ್ರಮವಹಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ರಾಜ್ಯ ಸರ್ಕಾರದ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಸುಶೀಲಮ್ಮ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತೆ ಡಾ.ಕವಿತಾ, ಆಶ್ರಯ ಯೋಜನೆ ಅಧಿಕಾರಿಗಳು ಇದ್ದರು.