ಸಾರಾಂಶ
ಬೆಂಗಳೂರು : ಕಳೆದ ಮೂರು ದಿನಗಳಿಂದ ಅರಮನೆ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಶನಿವಾರ ತೆರೆಬಿದ್ದಿದ್ದು, ಉತ್ಪಾದಕರು ಮತ್ತು ಮಾರಾಟಗಾರರ ನಡುವೆ 185 ಕೋಟಿ ರು. ಮೌಲ್ಯದ ಒಪ್ಪಂದಗಳು ಏರ್ಪಟ್ಟಿವೆ.
ಸಮಾರೋಪ ಸಮಾರಂಭದಲ್ಲಿ ಈ ವಿಷಯ ತಿಳಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು, ಹಿಂದೆಂದಿಗಿಂತಲೂ ಈ ಬಾರಿಯ ಮೇಳ ಅತ್ಯಂತ ವಿಶಿಷ್ಟ ಪೂರ್ಣವಾಗಿ ಆಯೋಜನೆಗೊಂಡಿದೆ. 185 ಬ್ಯುಸಿನೆಸ್ ಟು ಬ್ಯುಸಿನೆಸ್ ಸಭೆಗಳಲ್ಲಿ 194 ಉತ್ಪಾದಕರು, 105 ಮಾರಾಟ ಸಂಸ್ಥೆಗಳು ಪಾಲ್ಗೊಂಡಿದ್ದವು. ಒಟ್ಟಾರೆ 185.41 ಕೋಟಿ ರು. ಮೊತ್ತದ ಒಪ್ಪಂದಗಳು ಏರ್ಪಟ್ಟಿವೆ ಎಂದರು. 300 ಮಳಿಗೆಗಳಿಗೆ ಅವಕಾಶ ಕಲ್ಪಿಸಿದ್ದು, ಮೂರು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಮಳಿಗೆಗಳಲ್ಲಿ ನಿರೀಕ್ಷೆಗೂ ಮೀರಿ ವ್ಯಾಪಾರ ವಹಿವಾಟು ನಡೆದಿದೆ. 25 ರಾಜ್ಯಗಳು ಭಾಗವಹಿಸಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ. ಮೇಳದಲ್ಲಿ ಪಾಲ್ಗೊಂಡಿದ್ದ ಐದು ರಾಜ್ಯಗಳ ಕೃಷಿ ಸಚಿವರೂ ಇದೇ ಮಾದರಿಯಲ್ಲಿ ತಮ್ಮ ರಾಜ್ಯಗಳಲ್ಲೂ ಸಿರಿಧಾನ್ಯ ಮೇಳ ಆಯೋಜಿಸುವುದಾಗಿ ತಿಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಕೃಷಿ ನವೋದ್ಯಮಗಳಿಗೆ ಇಲಾಖೆಯು ಪ್ರೋತ್ಸಾಹ ನೀಡುತ್ತಿದ್ದು ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉತ್ತಮ ಮಳಿಗೆಗಳಿಗೆ ಬಹುಮಾನ ನೀಡಲಾಯಿತು. ದೇಶೀಯ ತಳಿಯ ಬೀಜಗಳನ್ನು ಸಂರಕ್ಷಿಸಿರುವ ರೈತರನ್ನು ಗೌರವಿಸಲಾಯಿತು. ಸಿರಿಧಾನ್ಯಗಳ ಖಾದ್ಯ ತಯಾರಿಸುವುದನ್ನು ವಿವರಿಸುವ ‘ಗ್ರಾಮೀಣ ಪಾಕ ಪರಂಪರೆ’ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಮಾಜಿ ಸಂಸದ ನಾರಾಯಣಸ್ವಾಮಿ, ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್ ಮತ್ತಿತರರು ಹಾಜರಿದ್ದರು.
ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಿ: ಶಾಸಕ
ಸಿರಿಧಾನ್ಯಗಳ ಮಹತ್ವದ ಬಗ್ಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರ ಅರಿವು ಮೂಡಿಸಬೇಕು ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಲಹೆ ನೀಡಿದರು. ಸಿರಿಧಾನ್ಯಗಳ ಮಹತ್ವವನ್ನು ಪ್ರತಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೂ ಮನವರಿಕೆ ಮಾಡಿಕೊಡಬೇಕು. ಅದಕ್ಕಾಗಿ ಕೃಷಿ ಸಚಿವರು ಶಿಕ್ಷಣ ಇಲಾಖೆ ಜೊತೆ ಚರ್ಚಿಸಿ ಸಿರಿಧಾನ್ಯಗಳ ಬಳಕೆಗೆ ಉತ್ತೇಜನ ನೀಡಬೇಕು. ಸಾರ್ವಜನಿಕ ವಿತರಣಾ ಪದ್ಧತಿ(ಪಿಡಿಎಸ್)ಅಡಿ ರಾಗಿ, ಜೋಳ ಸೇರಿದಂತೆ ಶೇ.40 ರಷ್ಟು ಸಿರಿಧಾನ್ಯ ವಿತರಿಸಲಾಗುತ್ತಿದೆ. ಆದರೆ ಜನರು ಅಕ್ಕಿಯನ್ನೇ ಹೆಚ್ಚು ಬಯಸುತ್ತಿದ್ದಾರೆ. ಅಕ್ಕಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಬೇಕು ಎಂದು ಕೋರಿದರು.