ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣ ಸಿಬಿಐಗೆ ವಹಿಸಿ

| Published : Jul 17 2024, 12:47 AM IST

ಸಾರಾಂಶ

187 crore scam: Force to CBI investigation

-ವಾಲ್ಮೀಕಿ ನಾಯಕ ಸಮುದಾಯದ ಮುಖಂಡರಿಂದ ರಾಷ್ಟ್ರಪತಿಗಳಿಗೆ, ಸಿಎಂಗೆ ಪತ್ರ

-----

ಕನ್ನಡಪ್ರಭ ವಾರ್ತೆ ಹೊಸದುರ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ 187.ಕೋಟಿ ರು. ಅಕ್ರಮ ಕುರಿತ ಪ್ರಕರಣವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಎಸ್ಐಟಿ ಅಧಿಕಾರಿಗಳು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿರುವುದು ಸರಿಯಷ್ಟೇ, ವಾಲ್ಮೀಕಿ ನಾಯಕ ಜನಾಂಗದ ಬಡವರಿಗೆ ಸೇರಬೇಕಾಗಿರುವ ಹಣ, ಪ್ರಭಾವಿಗಳ ಪಾಲಾಗಿರುವುದು ನೋವಿನ ಸಂಗತಿ. ಈ ಅಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮವಾಗಬೇಕು. ತನಿಖೆ ಎಲ್ಲಾ ಆಯಾಮಗಳಲ್ಲೂ ನಡೆಯಬೇಕು. ಈ ಪ್ರಕರಣವನ್ನು ಕೂಡಲೇ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸಿ, ತಾಲೂಕು ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹೊಸದುರ್ಗ ತಾಲೂಕು ಯುವ ಘಟಕದ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.

ಇದೇ ವೇಳೆ ತಾಲೂಕು ನಾಯಕ ಸಮುದಾಯದ ಮುಖಂಡ ಮಳಲಿ ವಿಜಯ್ ಕುಮಾರ್ ಮಾತನಾಡಿ, ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ವಾಲ್ಮೀಕಿ ನಾಯಕ ಸಮುದಾಯದ ಬಡ ಜನರಿಗೆ ಸೇರಬೇಕಾಗಿದ್ದ 187.ಕೋಟಿ ಹಣ ಪ್ರಭಾವಿಗಳ ಪಾಲಾಗಿರುವುದು ಸಮುದಾಯದ ಜನರಿಗೆ ಮಾಡಿದ ದ್ರೋಹ. ಎಷ್ಟೇ ದೊಡ್ಡ ಪ್ರಭಾವಿಗಳ ಪಾತ್ರ ಇದರಲ್ಲಿ ಇದ್ದರೂ, ಪ್ರಾಮಾಣಿಕವಾಗಿ ಅಂತವರ ವಿರುದ್ಧ ಕಾನೂನು ಕ್ರಮವಾಗಬೇಕು. ಈ ಪ್ರಕರಣವನ್ನು ಕೇಂದ್ರೀಯ ತನಿಖಾ ತಂಡಕ್ಕೆ ವರ್ಗಾವಣೆ ಮಾಡಿದರೆ, ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿ ಭಾಗಿಯಾಗಿದ್ದರು, ಮುಖವಾಡ ಬಯಲಾಗುತ್ತದೆ. ನಮಗೆ ಸಿಬಿಐ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಈ ಕೇಸ್ ಅನ್ನು ಸರ್ಕಾರ ಸಂಪೂರ್ಣ ಕೇಂದ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.

ಯುವ ಮುಖಂಡ ಅರುಣ್ ಗಂಗಾಧರಪ್ಪ ಮಾತನಾಡಿ, ವಾಲ್ಮೀಕಿ ನಾಯಕ ಸಮುದಾಯ ಆರ್ಥಿಕವಾಗಿ ಬಹಳ ಹಿಂದುಳಿದಿದ್ದು, ಇಂದಿಗೂ ಕೂಡ ಬಡತನದಲ್ಲಿಯೇ ಜೀವನ ನಡೆಸುವ ಕುಟುಂಬಗಳು ಬಹಳಷ್ಟಿವೆ. ಬಡ ಜನರ ಅಭ್ಯುದಯಕ್ಕಾಗಿ ಬಳಕೆಯಾಗಬೇಕಾಗಿದ್ದ ಹಣ, ಭ್ರಷ್ಟರ ಪಾಲಾಗಿರುವುದು ಬೇಸರ ಉಂಟು ಮಾಡಿದೆ. ತನಿಖೆ ವೇಳೆ ಒಂದೊಂದೇ ಅಂಶಗಳು ಹೊರ ಬರುತ್ತಿವೆ. ಎಂತಹ ದೊಡ್ಡ ವ್ಯಕ್ತಿಯಾಗಿದ್ದರೂ ಅಂತವರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು. ಅಕ್ರಮವಾಗಿ ವರ್ಗಾವಣೆ ಆಗಿರುವ ವಾಲ್ಮೀಕಿ ನಿಗಮದ ಹಣ ಬಡ ಜನರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಬಳಕೆಯಾಗಬೇಕು. ಸಮುದಾಯದ ಜನರಿಗೆ ಅನ್ಯಾಯವಾಗಲು ಬಿಡಲಾರೆವು. ತನಿಖಾ ಸಂಸ್ಥೆಗಳು ತನಿಖೆ ಮತ್ತಷ್ಟು ಚುರುಕುಗೊಳಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಪದಾಧಿಕಾರಿಗಳಾದ ಶಶಿಧರ್, ಲೋಹಿತ್, ಸಿದ್ದೇಶ್, ರೂಪೇಶ್ ಮತ್ತು ಚೇತನ್ ಸೇರಿದಂತೆ ಇತರರು ಇದ್ದರು.

------

ಫೋಟೋ: 16hsd1:

ವಾಲ್ಮೀಕಿ ನಿಗಮದ ಪ್ರಕರಣವನ್ನು ಕೂಡಲೇ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಸಂಪೂರ್ಣವಾಗಿ ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸಿ, ತಾಲೂಕು ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹೊಸದುರ್ಗ ತಾಲೂಕು ಯುವ ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.